ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ಯಾವುದೇ ದಿಕ್ಕು-ದಿಸೆ ಇಲ್ಲದ ಒಂದು ದಾಖಲೆ ಪಟ್ಟಿಯಂತಿದೆ. 3.71 ಲಕ್ಷ ಕೋಟಿ ಬೃಹತ್ ಗಾತ್ರದ ಹೆಗ್ಗಳಿಕೆ ಬಿಟ್ಟರೆ, ಇದು ರಾಜ್ಯದ ಜನರ ಕಲ್ಯಾಣ ಮತ್ತು ಆರ್ಥಿಕ ಪ್ರಗತಿಗೆ ಪೂರಕವಾಗಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ರಾಜ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಬಜೆಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಭಾಷಣದಂತೆ ಇತ್ತು. ಗ್ಯಾರಂಟಿಗಳಿಗೆ ವರ್ಷವಿಡೀ ಹೇಗೆ ಹಣ ಕ್ರೋಡೀಕರಣ ಎಂಬ ಅಂಶವಿದೆಯೇ ಹೊರತು ಮುಂದಿನ ವರ್ಷಗಳಲ್ಲಿ ರಾಜ್ಯವನ್ನು ಆರ್ಥಿಕ ಸಶಕ್ತಗೊಳಿಸಲು ಯಾವುದೇ ಯೋಜನೆಗಳ ಪ್ರಸ್ತಾಪವೇ ಇಲ್ಲ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರದ ಪ್ರಸ್ತಾವನೆಗಳೇ ಈ ಬಜೆಟ್‌ನಲ್ಲಿವೆ ಅಷ್ಟೇ. ನೀರಾವರಿ ಯೋಜನೆಗಳಿಗೆ ಯಾವುದೇ ಹಣಕಾಸು ಪ್ರಸ್ತಾಪವಿಲ್ಲ. ಕೇಂದ್ರ ಸರ್ಕಾರದ ಅನುಮತಿ ನೇಪಹೇಳಿ ಜಾರಿಕೊಳ್ಳುವ ವ್ಯರ್ಥ ಪ್ರಯತ್ನವೇ ಸಿಎಂ ಸಿದ್ದರಾಮಯ್ಯ ಅವರ ಕಸರತ್ತು ಆಗಿದೆ ಎಂದು ಸಚಿವರು ಆರೋಪಿಸಿದ್ದಾರೆ.
ಇದನ್ನೂ ಓದಿ | Karnataka Budget 2024 : ಬಜೆಟ್ ಬಹಿಷ್ಕಾರ ಇತಿಹಾಸದಲ್ಲೇ ಮೊದಲಲ್ಲ! 2021ರಲ್ಲೇ ಸಿದ್ದು ಇತಿಹಾಸ ಸೃಷ್ಟಿಸಿದ್ದರು!
ಸಾಲದ ಹೊರೆಯ ಬಜೆಟ್
ಕಳೆದ ವರ್ಷಕ್ಕೆ ಹೋಲಿಸಿದರೆ ರೆವೆನ್ಯೂ ವೆಚ್ಚ 1 ಲಕ್ಷ ಕೋಟಿಗೂ ಮೀರಿದೆ. ತೆರಿಗೆದಾರರ ಮೇಲೆ ಅನಗತ್ಯ ಹೊರೆ ಹೇರಲಾಗಿದೆ. ಅಲ್ಲದೇ, ಕಳೆದ ಸರ್ಕಾರಕ್ಕಿಂತ ಶೇ.22ರಷ್ಟು ಸಾಲದ ಹೊರೆ ಇದರಲ್ಲಿದೆ. 1,05,246 ಕೋಟಿಗೂ ಅಧಿಕ ಸಾಲ ಈ ಬಜೆಟ್ ಒಳಗೊಂಡಿದೆ. ಹಾಗಾಗಿ ಇದೊಂದು ಸಾಲದ ಹೊರೆಯ ಬಜೆಟ್ ಆಗಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.