ಬೆಂಗಳೂರು: ಒಂದು ವರ್ಷದ ಪುಟ್ಟ ಮಗುವಿನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದು ಮಾತ್ರವಲ್ಲದೆ, ಮುಗ್ಧ ಮಗುವನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ದುಷ್ಟನೊಬ್ಬನಿಗೆ (Unnatural sex and murder) ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.
2015ರ ಸೆಪ್ಟೆಂಬರ್ 1೨ರಂದು ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೂರ್ತಿ ಅಲಿಯಾಸ್ ಹಲ್ಲುಜ್ಜ ಎಂಬಾತನೇ ಈ ದುಷ್ಟ. ಆ ಅಪರಾಧ ಕೃತ್ಯ ನಡೆಸುವಾಗ ಆತನಿಗೆ ೧೮ ವರ್ಷ. ಈಗ ೨೫ ವರ್ಷ. ಬೆಂಗಳೂರಿನ ಎಫ್ ಟಿಎಸ್ ಸಿ 1ರ ನ್ಯಾಯಾಧೀಶೆ ಕೆ.ಎನ್.ರೂಪ ಅವರು ಈ ತೀರ್ಪು ನೀಡಿದ್ದಾರೆ. ಜತೆಗೆ ಮಗುವಿನ ಕುಟುಂಬಕ್ಕೆ ೫ ಲಕ್ಷ ರೂ. ಪರಿಹಾರ ನೀಡಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ.
ಪೋಕ್ಸೋ ಕಾಯಿದೆಯಡಿ ಈತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಆದರೆ, ಇದು ಸಾಲದು ಆತನಿಗೆ ಮರಣದಂಡನೆ ಶಿಕ್ಷೆಯನ್ನೇ ಕೊಡಬೇಕು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕೃಷ್ಣವೇಣಿ ಮನವಿ ಮಾಡಿದ್ದರು. ಇದೀಗ ಕೋರ್ಟ್ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆ ಮಧ್ಯಾಹ್ನ ನಡೆದಿತ್ತು ಭಯಾನಕ ಕೃತ್ಯ
ಆವತ್ತು ಕೊಲೆಯಾದ ಫಿರೋಜ್ ಆರ್ ಎಂಬ ಪುಟ್ಟ ಮಗು ರಫೀಕ್ ದಂಪತಿಯ ಮುದ್ದಿನ ಕೂಸು. ಮಗು ಮನೆಯಲ್ಲೇ ಇತ್ತು. ಮಧ್ಯಾಹ್ನ ೨.೩೦ರ ಹೊತ್ತಿಗೆ ರಫೀಕ್ ತನ್ನ ಗೆಳೆಯನಾದ ಮೂರ್ತಿ ಜತೆಗೆ ಮನೆಗೆ ಬಂದಿದ್ದ. ಮೂರ್ತಿ ಆರ್‌ಎಂಸಿ ಯಾರ್ಡ್‌ನಲ್ಲಿ ಕೂಲಿ ಕಾರ್ಮಿಕ. ಮನೆಯಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದ ರಫೀಕ್ ಮತ್ತು ಮೂರ್ತಿ ಮಗುವಿಗೆ ಏನಾದರೂ ತಿಂಡಿ ಕೊಡಿಸೋಣ ಎಂದು ಮಗುವಿನ ಜತೆ ಮನೆಯಿಂದ ಹೊರಬಿದ್ದಿದ್ದರು.
ಐದತ್ತು ನಿಮಿಷ ಕಳೆದು ರಫೀಕ್ ಮನೆಗೆ ಬಂದರು. ಆಗ ಅವರ ಪತ್ನಿ ಮಗು ಎಲ್ಲಿ ಎಂದು ಕೇಳಿದರು. ಆಗ ರಫೀಕ್, ʻಮೂರ್ತಿ ಮಗುವನ್ನು ಕರೆದುಕೊಂಡು ಬಂದ್ನಲ್ಲ. ಮನೆಗೆ ಬರ್ಲಿಲ್ವಾ? ಅವನು ಮನೆಗೇ ಕರೆದುಕೊಂಡು ಬಂದ ಅಂದ್ಕೊಂಡೆʼʼ ಎಂದು ಹೇಳಿ, ಮತ್ತೆ ಅಂಗಡಿ ಕಡೆಗೆ ಓಡಿದ. ಆದರೆ, ಅಲ್ಲಿ ಮೂರ್ತಿ ಇರಲಿಲ್ಲ, ಮಗುವೂ ಕಾಣಲಿಲ್ಲ. ಆಗ ಗಂಡ ಹೆಂಡತಿ ಇಬ್ಬರೂ ಮೂರ್ತಿ ಮತ್ತು ಮಗುವಿಗಾಗಿ ಹುಡುಕಾಡಲು ಶುರು ಮಾಡಿದರು.
ಕೊನೆಗೆ ಮೂರ್ತಿ ಯಶ್ವಂತಪುರದಲ್ಲಿ ಸಿಕ್ಕಿದ. ಆದರೆ ಅವನ ಕೈಯಲ್ಲಿ ಮಗು ಇರಲಿಲ್ಲ. ʻಮಗು ಎಲ್ಲೋʼ ಎಂದು ಕೇಳಿದರೆ ಅದನ್ನು ʻಎಂಎಸ್ ಪಾಳ್ಯದಲ್ಲಿ ಬಿಟ್ಟು ಬಂದಿದ್ದೇನೆʼ ಎಂದ ಮೂರ್ತಿ! ಅಯ್ಯೋ ದೇವರೇ ಅಂದುಕೊಂಡ ದಂಪತಿ ಮೂರ್ತಿಯನ್ನು ಎಳೆದುಕೊಂಡೇ ಎಂಎಸ್ ಪಾಳ್ಯಕ್ಕೆ ಬಂದರು.
ಆದರೆ, ಅಲ್ಲೆಲ್ಲೂ ಮಗು ಸಿಗಲಿಲ್ಲ. ʻʻನಮ್ಮ ಮಗು ಎಲ್ಲಿ ತೋರಿಸೋʼʼ ಎಂದು ದಂಪತಿ ಮೂರ್ತಿಗೆ ಗದರಿಸಿದರು. ಆಗ ಮೂರ್ತಿ ಮಾರ್ಗದ ಬದಿಯಲ್ಲಿ ಬಿದ್ದಿದ್ದ ಒಂದು ಬಾಟಲಿಯನ್ನು ಎತ್ತಿಕೊಂಡು ರಫೀಕ್ ಮೇಲೆ ದಾಳಿ ಮಾಡಿದ. ಮತ್ತು ಅಲ್ಲಿಂದ ಪರಾರಿಯಾದ.
ದಂಪತಿಗೆ ದಿಕ್ಕು ತೋಚದಾಯಿತು. ಒಂದು ವರ್ಷದ ಮಗು ಏನಾಗಿದೆಯೋ ಎಂದು ಕಂಡ ಕಂಡವರಲ್ಲಿ ಕೇಳಿದರು, ಎಲ್ಲೆಲ್ಲೋ ಅಲೆದು ಹುಡುಕಿದರು. ಆಗಲೂ ಸಿಗದೆ ಇದ್ದಾಗ ಕೊನೆಗೆ ಪೊಲೀಸ್ ಠಾಣೆಗೆ ಧಾವಿಸಿದರು. ಮೂರ್ತಿ ಮಗುವನ್ನು ಅಪಹರಿಸಿದ್ದಾನೆ ಎಂದು ದೂರು ನೀಡಿದರು. ಪೊಲೀಸರು ಎಲ್ಲೋ ಹುಡುಕಾಡಿ ಮೂರ್ತಿಯನ್ನು ಹಿಡಿದು ತಂದರು. ಆದರೆ, ಮೂರ್ತಿ ಮಾತ್ರ ಮಗುವಿನ ವಿಚಾರವಾಗಿ ಯಾವ ಸುಳಿವನ್ನೂ ಬಿಟ್ಟುಕೊಡಲೇ ಇಲ್ಲ. ಮರುದಿನ ಮುಂಜಾನೆ ಪೊಲೀಸರು ಮಗುವಿನ ಹುಡುಕಾಟದ ನೆಪದಲ್ಲಿ ಆತನನ್ನು ರೈಲಿನಲ್ಲಿ ಕರೆದುಕೊಂಡು ಹೋದರು. ಒಂದು ಹಂತದಲ್ಲಿ ಮಗು ಎಲ್ಲಿದೆ ಎಂದು ಸತ್ಯ ಹೇಳದೆ ಇದ್ದಲ್ಲಿ ರೈಲಿನಿಂದ ತಳ್ಳಿ ಬಿಡುವುದಾಗಿ ಬೆದರಿಕೆ ಹಾಕಿದರು. ಆಗ ಅವನು ಬಾಯಿಬಿಟ್ಟ. ಅದನ್ನು ಕೇಳಿಸಿಕೊಂಡ ಪೊಲೀಸರೇ ಅಕ್ಷರಶಃ ನಡುಗಿಹೋದರು.
ಅವನು ಕರೆದುಕೊಂಡು ಹೋಗಿದ್ದು ಒಂದು ಪುಟ್ಟ ಕಾಡಿಗೆ!
ಪೊಲೀಸರು ಮೂರ್ತಿ ಹೇಳಿದ ಕಥೆಯನ್ನು ಕೇಳಿ ಬೆಚ್ಚಿಬಿದ್ದಿದ್ದರು. ಕೊನೆಗೆ ಅವನು ಹೇಳಿದ ಕಡೆಗೆ ಅವನನ್ನು ಕರೆದುಕೊಂಡು ಹೋದರು. ಅವನು ಅವರನ್ನು ಕರೆದುಕೊಂಡು ಹೋಗಿದ್ದು ವಾಯುಪಡೆ ಮುಖ್ಯ ಎಂಜಿನಿಯರ್ ಅವರ ಕಚೇರಿ ಆವರಣದ ಪಕ್ಕ ಇರುವ ಪುಟ್ಟ ಕಾಡಿಗೆ. ಅದೋ ಅಲ್ಲಿ ಎಂದು ಆತ ತೋರಿಸಿದಾಗ ಪೊಲೀಸರು ಅತ್ತ ನೋಡಿದರು. ಒಂದು ವರ್ಷದ ಪುಟ್ಟ ಮಗು ಬೆತ್ತಲಾಗಿ ಬಿದ್ದಿತ್ತು. ತಲೆಯ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಲಾಗಿತ್ತು! ಆ ದೃಶ್ಯ ಎಷ್ಟೊಂದು ಭಯಾನಕವಾಗಿತ್ತು ಎಂದರೆ ಆ ಮಗು ಫಿರೋಜ್ ಹೌದಾ ಎಂದು ಗುರುತಿಸುವುದು ಕೂಡಾ ಸಾಧ್ಯವಾಗಲಿಲ್ಲ. ಯಾಕೆಂದರೆ ಮುಖ ಸಂಪೂರ್ಣ ಜಜ್ಜಿ ಹೋಗಿತ್ತು. ಮೈಮೇಲಿನ ಬಟ್ಟೆಯನ್ನು ಇವನೇ ಕಿತ್ತು ಹಾಕಿದನೋ, ಪ್ರಾಣಿಗಳು ಕಿತ್ತವೋ, ಯಾವ ಪ್ರಾಣಿಗಳು ಆ ಮಗುವಿನ ಮೇಲೆ ಏನೆಲ್ಲ ದೌರ್ಜನ್ಯ ನಡೆಸಿದವೋ ಗೊತ್ತಿಲ್ಲ. ಆ ಪುಟಾಣಿ ಜೀವ ಸಂಪೂರ್ಣ ಜರ್ಜರಿತವಾಗಿತ್ತು.
ಪೊಲೀಸರು ಮೂರ್ತಿಯನ್ನು ಹಿಡಿದುಕೊಂಡು ಬಂದು ವಿಚಾರಣೆ ನಡೆಸಿದರು. ಆಗ ಆತ ತಾನು ಮಗುವನ್ನು ಕೊಂದಿದ್ದನ್ನು ಒಪ್ಪಿಕೊಂಡ. ಕೊಲ್ಲುವ ಮುನ್ನ ಅನೈಸರ್ಗಿಕ ಲೈಂಗಿಕ ಚಟುವಟಿಕೆ ನಡೆಸಿದ್ದಾಗಿಯೂ ಒಪ್ಪಿಕೊಂಡ. ಪ್ರಾಣಿಗಿಂತಲೂ ಕೀಳಾಗಿ, ಅಸಹ್ಯವಾಗಿ, ಭಯಾನಕವಾಗಿ ನಡೆದುಕೊಂಡ, ಕೊಲೆ ಮಾಡಿದ ಕ್ರೂರಿಯ ವಿರುದ್ಧ ಪೋಕ್ಸೋ, ಕೊಲೆ, ಅತ್ಯಾಚಾರ ಸೇರಿದಂತೆ ಸಂಬಂಧಿಸಿದ ಎಲ್ಲ ಸೆಕ್ಷನ್‌ಗಳ ಅಡಿಯಲ್ಲಿ ಕೇಸುಗಳನ್ನು ದಾಖಲಿಸಲಾಯಿತು.
ಮಾದಕ ದ್ರವ್ಯ ಸೇವಿಸಿದ್ದ ಮೂರ್ತಿ
ರಫೀಕ್‌ನ ಜತೆ ಆತ್ಮೀಯತೆಯಿಂದಲೇ ಇದ್ದ ಮೂರ್ತಿ ಆವತ್ತು ಯಾಕೆ ಹಾಗೆ ಮಾಡಿದ? ಈ ಪ್ರಶ್ನೆ ಇಡೀ ಕುಟುಂಬವನ್ನೇ ಕಾಡಿತ್ತು. ಮೂರ್ತಿಯೇ ಹೇಳಿದ ಹಾಗೆ ಆವತ್ತು ರಫೀಕ್ ಜತೆಗೆ ಮನೆಗೆ ಹೋದಾಗ ಅವನು ಚೆನ್ನಾಗಿ ಕುಡಿದಿದ್ದ. ಅವನು ಯಾವುದೋ ಮಾದಕ ದ್ರವ್ಯವನ್ನು ಮೂಗಿನೊಳಗೆ ಎಳೆದುಕೊಳ್ಳುತ್ತಿದ್ದ. ಅದು ಅವನನ್ನು ಕ್ರೂರ ಮೃಗವಾಗಿ ಮಾಡಿತ್ತು. ಹೀಗೆ ಅರೆದ್ರವ ರೂಪದ ಮಾದಕ ದ್ರವ್ಯವನ್ನು ಸೇವಿಸಿದ ಹೊತ್ತಿನಲ್ಲಿ ಅವನು ಆ ತೋಪಿನಂಥ ಕಾಡಿಗೆ ಹೋಗುತ್ತಿದ್ದ. ಈ ಬಾರಿ ಹೋಗುವಾಗ ಮಗುವೂ ಜತೆಗಿತ್ತು!
ಇಂಥ ಪರಮಪಾತಕಿಗೆ ಇದೀಗ ಕೋರ್ಟ್ ಮರಣದಂಡನೆಯನ್ನು ವಿಧಿಸಿದೆ. ಮಹಿಳಾ ನ್ಯಾಯಾಧೀಶರು ಅತ್ಯಂತ ಕಠಿಣ ಶಬ್ದಗಳಿಂದ ಈ ಘಟನೆಯನ್ನು ಖಂಡಿಸಿದರು. ಮಹಿಳೆಯೇ ಆಗಿರುವ ಪಬ್ಲಿಕ್ ಪ್ರಾಸಿಕ್ಯೂಟರ್ ಈತನಿಗೆ ಜಗತ್ತು ಮರೆಯಬಾರದ ಶಿಕ್ಷೆ ಕೊಡಬೇಕೆಂದು ಪಟ್ಟು ಹಿಡಿದರು. ಇನ್ನೂ ಸರಿಯಾಗಿ ಬೆಳಕನ್ನೇ ಕಾಣದ ಮಗುವಿಗೆ ಹೆತ್ತವರಿಗೆ ಈಗಲಾದರೂ ಸಣ್ಣ ಸಾಂತ್ವನ ಸಿಕ್ಕಿರಬಹುದೇನೋ.
ಇದನ್ನೂ ಓದಿ | ಅಪ್ಪ, ಚಿಕ್ಕಪ್ಪ, ಅಜ್ಜನಿಂದ ನಿರಂತರ ಅತ್ಯಾಚಾರಕ್ಕೆ ಒಳಗಾದ ಯುವತಿ; ರಕ್ಷಣೆ ಮಾಡಬೇಕಾದವರ ರಾಕ್ಷಸೀ ಕೃತ್ಯ