ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆ.ಆರ್. ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ (underpasses) ಭಾನುವಾರ (ಮೇ 21) ಮಧ್ಯಾಹ್ನ ಸುರಿದ ಭಾರಿ ಮಳೆಗೆ (Bangalore Rain) ನೀರು ತುಂಬಿ ಕಾರಿನಲ್ಲಿದ್ದ ಯುವತಿ ಭಾನುರೇಖಾ ಮೃತಪಟ್ಟ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ಎಚ್ಚೆತ್ತುಕೊಂಡಿದೆ. ಈ ಮಳೆಗಾಲ (Rainy season) ಮುಗಿಯುವವರೆಗೆ ಸಮಸ್ಯೆಗಳು ಇರುವ ಎಲ್ಲ ಅಂಡರ್‌ಪಾಸ್‌ಗಳನ್ನು ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಮಳೆಗಾಲ ಬಂದಾಗಲೂ ಕೆಲವು ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿಕೊಂಡು ತೀವ್ರ ಸಮಸ್ಯೆಯಾಗುತ್ತಿದ್ದವು. ಕೆಲವು ಕಡೆಗಳಲ್ಲಿ ಮೊಣಕಾಲು ವರೆಗೆ ನೀಡು ತುಂಬಿ ಕೊಳ್ಳುತ್ತವೆ. ಇದರ ನಡುವೆಯೂ ಬೈಕ್, ಕಾರು ಸೇರಿದಂತೆ ಇನ್ನಿತರ ವಾಹನ ಸವಾರರು ಆ ನೀರಿನಲ್ಲಿಯೇ ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ, ಭಾನುವಾರ ದುರದೃಷ್ಟವಶಾತ್ ಅಂಡರ್‌ಪಾಸ್‌ನಲ್ಲಿ ಹೋಗುವಾಗ ಕಾರು ಕೆಟ್ಟು ನಿಂತಿದ್ದಲ್ಲದೆ, ನೀರು ತುಂಬಿ ಯುವತಿಯೊಬ್ಬಳು ಮೃತಪಟ್ಟಿದ್ದರೆ, ಒಳಗಿದ್ದ ಆರು ಮಂದಿಯನ್ನು ರಕ್ಷಿಸಲಾಗಿತ್ತು. ಅಲ್ಲದೆ, ಬಿಬಿಎಂಪಿ ಹಾಗೂ ಪೊಲೀಸರ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಿಡಿಕಾರಿದ್ದರು.
ಇದನ್ನೂ ಓದಿ: DK Shivakumar : ಎಸ್ಸೆಂ ಕೃಷ್ಣ ಶಿಷ್ಯನಲ್ಲ ಎಂದ ಮರುದಿನವೇ ಗುರುವಿನ ಭೇಟಿ; ಡ್ಯಾಮೇಜ್ ಕಂಟ್ರೋಲ್ ಯತ್ನ?
ವರದಿ ಕೇಳಿದ ಬಿಬಿಎಂಪಿ
ಸದ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರಕ್ಕೆ ಬಿಬಿಎಂಪಿ ಮೊರೆಹೋಗಿದೆ ಎಂದು ಹೇಳಲಾಗಿದೆ. ಭಾನುವಾರ ನಡೆದ ಘಟನೆಯಿಂದ ಎಚ್ಚೆತ್ತಿರುವ ಬಿಬಿಎಂಪಿ, ಈಗ ಮುಖ್ಯ ಎಂಜಿನಿಯರ್ ಬಳಿ ವರದಿಯನ್ನು ಕೇಳಿದೆ. ನಗರದಲ್ಲಿ ಯಾವ ಯಾವ ಅಂಡರ್‌ಪಾಸ್‌ಗಳು ಸುರಕ್ಷತೆಯಿಂದ ಕೂಡಿಲ್ಲ. ಮಳೆ ಬಂದಾಗ ನೀರು ನಿಂತುಕೊಳ್ಳುತ್ತವೆ ಎಂಬ ಬಗ್ಗೆ ಕೂಡಲೇ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಮಳೆಗಾಲ ಮುಗಿಯುವವರೆಗೆ ಬಂದ್?
ಸದ್ಯ ಮುಖ್ಯ ಎಂಜಿನಿಯರ್ ಸಹಿತ ಬಿಬಿಎಂಪಿ ಎಂಜಿನಿಯರ್‌ಗಳು ಸುರಕ್ಷಿತವಲ್ಲದ ಅಂಡರ್‌ಪಾಸ್‌ಗಳ ಪಟ್ಟಿಯಲ್ಲಿ ತೊಡಗಿದ್ದಾರೆ. ಅವರು ವರದಿ ಸಿದ್ಧಪಡಿಸಿ ಪಾಲಿಕೆ ಆಯುಕ್ತರಿಗೆ ಸಲ್ಲಿಸಲಿದ್ದು, ಬಳಿಕ ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸಮಸ್ಯೆ ಇರುವ ಅಂಡರ್‌ಪಾಸ್‌ಗಳನ್ನು ಮಳೆಗಾಲ ಮುಗಿಯುವವರೆಗೂ ಬಂದ್ ಮಾಡುವ ನಿರ್ಧಾರಕ್ಕೆ ಬಿಬಿಎಂಪಿ ಬಂದಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಕಿಡಿಕಾರಿದ್ದ ಸಿಎಂ ಸಿದ್ದರಾಮಯ್ಯ
ಮಳೆ ಬಂದಾಗ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುತ್ತದೆ ಎಂದು ಗೊತ್ತಿದ್ದಾಗ ಸಂಚಾರ ಪೊಲೀಸರಾಗಲೀ, ಬಿಬಿಎಂಪಿ ಅಧಿಕಾರಿಗಳಾಗಲೀ ಏಕೆ ಬ್ಯಾರಿಕೇಡ್ ಹಾಕಿಲ್ಲ? ಮಳೆ ವಾತಾವರಣ ಇದ್ದಾಗ ನಿರ್ಲಕ್ಷ್ಯ ವಹಿಸಿದ್ದು ಸರಿಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಕಿಡಿಕಾರಿದ್ದರು. ಅವರು ಕೆ.ಆರ್. ಸರ್ಕಲ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆಯ ಬಳಿಕ ಮಾತನಾಡಿದ್ದರು.
ಇದನ್ನೂ ಓದಿ: Murugha Seer: ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ರದ್ದು ಮಾಡಿದ ಹೈಕೋರ್ಟ್; ಸರ್ಕಾರಕ್ಕೆ ಚಾಟಿ
ರಾಜಕಾಲುವೆ ಒತ್ತುವರಿ ತೆರವು
ಬೆಂಗಳೂರಿನಲ್ಲಿ ಮಳೆ ಅವಾಂತರ ಹೆಚ್ಚಾಗುವ ಹಿನ್ನೆಲೆಯಲ್ಲಿ ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರಾಜಕಾಲುವೆ ಒತ್ತುವರಿ ತೆರವಿಗೆ ಚಾಲನೆ ನೀಡಿದ್ದೆ. ಆದರೆ, ಬಳಿಕ ಬಂದ ಸರ್ಕಾರ ಆ ಕೆಲಸವನ್ನು ಮಾಡಿಲ್ಲ. ನಾನು ಈಗ ಮತ್ತೆ ಅಧಿಕಾರಕ್ಕೆ ಬಂದಿದ್ದು, ಪುನಃ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ದುರಸ್ತಿ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ತಿಳಿಸಿದ್ದರು.