Site icon Vistara News

ದೀರ್ಘಾವಧಿ ವಿದ್ಯುತ್‌ ಖರೀದಿ ಒಪ್ಪಂದದಲ್ಲಿ ಗೋಲ್‌ ಮಾಲ್‌?: ಹಿಂದಿನ ಅವಧಿಗಳ ಒಪ್ಪಂದ ಪರಿಶೀಲನೆಗೆ ಚಿಂತನೆ

power agreement

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ನಡೆದ ವಿದ್ಯುತ್ ಖರೀದಿ ಒಪ್ಪಂದದಲ್ಲಿ (ಪವರ್ ಪರ್ಚೇಸ್ ಎಗ್ರಿಮೆಂಟ್) ದರ ನಿಗದಿ ವಿಧಾನ ಅವೈಜ್ಞಾನಿಕವಾಗಿ ನಡೆದಿರುವುದು ಇದೀಗ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಇಂಧನ ಇಲಾಖೆ ಸಿದ್ಧತೆ ನಡೆಸಿದೆ.

ಈ ಅವೈಜ್ಞಾನಿಕ ಒಪ್ಪಂದದಿಂದ ಎಸ್ಕಾಂಗಳಿಗೆ ಭಾರಿ ಪ್ರಮಾಣದಲ್ಲಿ ಹೊರೆಯಾಗುತ್ತಿದೆ. ಸರಕಾರದ ಬೊಕ್ಕಸಕ್ಕೆ ಪ್ರತಿವರ್ಷವೂ ಆಗುತ್ತಿರುವ ನಷ್ಟ ತಪ್ಪಿಸುವುದಕ್ಕೆ ಪು‌ನರ್ ಪರಿಶೀಲನೆ ನಡೆಸುವುದು ಈಗ ಅನಿವಾರ್ಯವಾಗಿದೆ ಎನ್ನಲಾಗಿದೆ.

೨೦೧೦ರಿಂದ ಇಲ್ಲಿಯವರೆಗೆ ನಡೆದ ದೀರ್ಘಾವಧಿ ಖರೀದಿ ಒಪ್ಪಂದ ಹಾಲಿ ಇರುವ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟಾಗಿರುವುದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪಿಪಿಎಗಳ ಹಿಂದಿರುವ ಲೆಕ್ಕಾಚಾರ ಪತ್ತೆ ಹಚ್ಚಲು ಅವರು ನಿರ್ಧರಿಸಿದ್ದಾರೆ. ಐದು ರೂಪಾಯಿಗಿಂತ ಮೇಲ್ಪಟ್ಟಿರುವ ಖರೀದಿ ಒಪ್ಪಂದದ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಅವರು ಎಲ್ಲ ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದು, ಸದ್ಯದಲ್ಲೇ ಈ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಿದ್ದಾರೆ.

ಉಷ್ಣ, ಪವನ, ಸೌರ, ಕೋ-ಜೆನ್, ಕಿರು ಜಲ ವಿದ್ಯುತ್ ಸೇರಿದಂತೆ ಎಲ್ಲ ಬಗೆಯ ವಿದ್ಯುತ್ ಉತ್ಪಾದಕ ವಲಯದಲ್ಲೂ ಖರೀದಿ ಒಪ್ಪಂದವನ್ನು ಆಯಾ ಕಾಲ ಘಟಕ್ಕೆ ಸೃಷ್ಟಿಯಾಗಿದ್ದ ವಿದ್ಯುತ್ ಲಭ್ಯತೆ, ಅಭಾವ ಹಾಗೂ ಉತ್ಪಾದನೆ ಆಧರಿಸಿ ನಡೆಸಲಾಗಿದೆ. ಬಹುತೇಕ ಒಪ್ಪಂದಗಳು ೨೬ ವರ್ಷಗಳಷ್ಟು ದೀರ್ಘಾವಧಿಯಾಗಿದ್ದು, ೮.೫ ರಿಂದ ೧೧ ರೂ.ವರೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ವಿದ್ಯುತ್ ಸರಬರಾಜು ಕಂಪನಿಗಳಿಗೆ ಭಾರಿ ಪ್ರಮಾಣದ ಹೊರೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.

ಕೆಲ ಒಪ್ಪಂದಗಳು ೨೦೩೦ರವರೆಗೂ ಅಸ್ತಿತ್ವದಲ್ಲಿ ಇರಲಿದೆ. ಮಾರುಕಟ್ಟೆ ದರ ಕಡಿಮೆಯಾದರೂ ಈ ಹಿಂದೆ ಮಾಡಿಕೊಂಡ ಒಪ್ಪಂದದ ಪ್ರಕಾರವೇ ಕಂಪನಿಗಳು ವಿದ್ಯುತ್ ಖರೀದಿ‌ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಖರೀದಿ ಮಾಡದಿದ್ದರೆ ಒಪ್ಪಂದ‌ ಮಾಡಿಕೊಂಡ ಸಂಸ್ಥೆಗಳು ಕೆಇಆರ್‌ಸಿ ಹಾಗೂ ನ್ಯಾಯಾಲಯಕ್ಕೆ ಮೊರೆ ಹೋಗುತ್ತಿವೆ.‌ ಇದು ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಜಾಲದಿಂದ ಹೊರಬರುವುದಕ್ಕಾಗಿ ಕಾನೂನು ಸಲಹೆ ಪಡೆಯಲು ಸಚಿವ ವಿ.ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.

ಎಷ್ಟಕ್ಕೆ ಖರೀದಿ ಮಾಡಬೇಕು?
ಪ್ರತಿ ಯುನಿಟ್ ಗೆ ೬ ರೂ. ನಿಂದ ೧೦ರ ವರೆಗಿನ ದರದಲ್ಲಿ ೭೦೫ ಮೆಗಾ ವ್ಯಾಟ್ ಪವನ ವಿದ್ಯುತ್, ೪ ರಿಂದ ೬  ರೂ. ಪ್ರತಿ ಯುನಿಟ್ ದರದಲ್ಲಿ ೨೭೨೦ ಮೆಗಾ ವ್ಯಾಟ್, ೪ ರೂ.ಗಿಂತ‌ ಕಡಿಮೆ ದರದಲ್ಲಿ ೨೦೬೦ ಮೆಗಾ ವ್ಯಾಟ್ ಸೇರಿದಂತೆ ವಾರ್ಷಿಕ ೫೪೮೫  ಮೆಗಾ ವ್ಯಾಟ್  ವಿದ್ಯುತ್ ಅನ್ನು ರಾಜ್ಯ ಸರಕಾರ ಈ ಒಪ್ಪಂದದ ಪ್ರಕಾರ ಖರೀದಿ ಮಾಡಬೇಕಾದ ಅನಿವಾರ್ಯತೆ ಇದೆ. ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ರೀತಿಯ ಒಪ್ಪಂದಗಳು ವ್ಯಾಪಕವಾಗಿ ನಡೆದಿರುವುದು ಸಭೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ| ಹೊಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತುಳಿದು ಮಹಿಳೆ ಸಾವು, ಮೆಸ್ಕಾಂ ವಿರುದ್ಧ ಸ್ಥಳೀಯರು ಗರಂ

Exit mobile version