ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ದಲಿತರ ಕ್ಷೌರ ಮಾಡಲು ಹಿಂದೇಟು ಹಾಕುತ್ತಿರುವ ಬಗ್ಗೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿ ದಲಿತರು ಕ್ಷೌರಕ್ಕೆ ಹೋದರೂ ವಾಪಸ್ ಕಳುಹಿಸುತ್ತ್ತಿದ್ದಾರೆ ಎಂದು ಊರಿನವರು ಆಕ್ಷೇಪಿಸಿದ್ದರು. ಊರಿನಲ್ಲಿ ಎರಡು ಕ್ಷೌರದ ಅಂಗಡಿಗಳಿವೆ. ಅವುಗಳಲ್ಲಿ ಒಂದು ಕ್ಷೌರದ ಅಂಗಡಿಯವರು ಎಲ್ಲರ ಕ್ಷೌರ ಮಾಡುತ್ತಾರೆ. ಇನ್ನೊಬ್ಬರು ದಲಿತರ ಕ್ಷೌರಕ್ಕೆ ನಿರಾಕರಿಸುತ್ತಾರೆ ಎಂದು ಆಕ್ಷೇಪಿಸಲಾಗಿತ್ತು.
ಬುಧವಾರ ಬೂದಿಹಾಳ್ ಗ್ರಾಮಕ್ಕೆ ಭೇಟಿ ನೀಡಿದ ಪಿಎಸ್ ಐ ರವಿಕುಮಾರ ಸೇರಿದಂತೆ ಪ್ರಮುಖರು, ಎಲ್ಲ ಸಮಾಜದ ಜನರ ಕ್ಷೌರ ಮಾಡುವಂತೆ, ಯಾರಿಗೂ ನಿರಾಕರಿಸದಂತೆ ಎಚ್ಚರಿಕೆ ನೀಡಿದರು. ಸವಿತಾ ಸಮಾಜದ ಕುಟುಂಬಗಳನ್ನೂ ಭೇಟಿ ಮಾಡಿ ಮನವರಿಕೆ ಮಾಡಿದರು.