ಚಿತ್ರದುರ್ಗ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ (Karnataka Election 2023) ತಯಾರಿ ಜೋರಾಗಿಯೇ ನಡೆಯುತ್ತಿದೆ. ಒಂದು ಕಡೆ ಟಿಕೆಟ್ ಆಕಾಂಕ್ಷಿಗಳು ಹೆಚ್ಚಳಗೊಳ್ಳುತ್ತಿದ್ದರೆ, ಮತ್ತೊಂದು ಕಡೆ ಅತೃಪ್ತರು ಪಕ್ಷ ತೊರೆದು ಇನ್ನೊಂದು ಪಕ್ಷದತ್ತ ವಲಸೆ ಬರುತ್ತಿದ್ದಾರೆ. ಇನ್ನು ತಮಗೆ ಆದ ವಂಚನೆಗೆ ಸೇಡು ತೀರಿಸಿಕೊಳ್ಳಲು ಪಣ ತೊಟ್ಟವರು ರಾಜಕೀಯ ವಿರೋಧಿಗಳ ಜತೆಗೇ ಕೈಜೋಡಿಸುತ್ತಿರುವ ಉದಾಹರಣೆಯನ್ನೂ ಕಾಣಬಹುದಾಗಿದೆ. ಕೋಟೆ ನಾಡು ಚಿತ್ರದುರ್ಗದಲ್ಲೀಗ ಕಾಂಗ್ರೆಸ್-ಬಿಜೆಪಿ ನಾಯಕರ ಭೇಟಿಯು ಸಂಚಲನ ಮೂಡಿಸಿದೆ. ಕಾಂಗ್ರೆಸ್ ಆಕಾಂಕ್ಷಿ ಎಸ್.ಕೆ. ಬಸವರಾಜನ್ (ಎಸ್‌ಕೆಬಿ) (SK Basavarajan) ಅವರು ಬಿಜೆಪಿ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ (GH Tippareddy) ಜತೆ ಮಾತುಕತೆ ನಡೆಸಿದ್ದು, ಬಹು ಚರ್ಚಿತ ವಿಷಯವಾಗಿದೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದ ಜೆಡಿಎಸ್ ಮಾಜಿ ಶಾಸಕ ಬಸವರಾಜನ್ ಅವರು ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಮುರುಘಾ ಶರಣರ ಪ್ರಕರಣದಲ್ಲಿ ಕೇಳಿಬಂದ ಹೆಸರು ಸೇರಿದಂತೆ ಇನ್ನಿತರ ಕಾರಣಕ್ಕಾಗಿ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುಪಿತಗೊಂಡಿರುವ ಬಸವರಾಜನ್, ಕಾಂಗ್ರೆಸ್ ಅನ್ನು ಸೋಲಿಸಲು ಪಣ ತೊಟ್ಟು ನಿಂತಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: Karnataka Election 2023: ಚಾಮುಂಡೇಶ್ವರಿಯಲ್ಲಿ ಜಿಟಿಡಿ ಹಣಿಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್; ಜಾತಿ ಅಸ್ತ್ರ ಪ್ರಯೋಗ
ಬಿಜೆಪಿ ಹಿರಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಜತೆ ಕಾಂಗ್ರೆಸ್ ಆಕಾಂಕ್ಷಿ ಎಸ್.ಕೆ ಬಸವರಾಜನ್ ಕಾಣಿಸಿಕೊಂಡಿರುವುದು ಈಗ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನವನ್ನು ಮೂಡಿಸಿದೆ. ಕಳೆದ ಚುನಾವಣೆಯಲ್ಲಿ ತಿಪ್ಪಾರೆಡ್ಡಿ ವಿರುದ್ಧ ಕಾಂಗ್ರೆಸ್‌ನಿಂದ ಬಸವರಾಜನ್ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಆದರೆ, ಈ ಬಾರಿ ಬಸವರಾಜನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದೆ ಎಂದು ಹೇಳಲಾಗುತ್ತಿದ್ದು, ವೀರೇಂದ್ರ ಪಪ್ಪಿ, ರಘು ಆಚಾರ್ ನಡುವೆ ಕಾಂಗ್ರೆಸ್ ಟಿಕೆಟ್‌ಗೆ ತೀವ್ರ ಪೈಪೋಟಿ ಇದೆ ಎಂದು ಹೇಳಲಾಗುತ್ತಿದೆ.
ಈ ವಿಷಯ ಮುಂಚೆ ತಿಳಿದು ಬಿಜೆಪಿ ಜತೆ ಬಸವರಾಜನ್ ಕೈಜೋಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಿಪ್ಪಾರೆಡ್ಡಿ ಜತೆ ಕೈ ಜೋಡಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ ಕಾಂಗ್ರೆಸ್‌ಗೆ ಅವರು ಮಗ್ಗಲು ಮುಳ್ಳಾಗಿ ಕಾಡಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: PM Modi: ಮಾ.12ರಂದು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಸಂಪೂರ್ಣ ರದ್ದು; ಇದು ಮೋದಿ ಭೇಟಿ ಎಫೆಕ್ಟ್
ಒಂದು ವೇಳೆ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಬಗ್ಗೆ ಬಸವರಾಜನ್ ಪ್ಲ್ಯಾನ್ ಮಾಡಿಕೊಂಡಿದ್ದರು. ಶೇ. 20ರಷ್ಟು ತನ್ನ ಸಮುದಾಯದ ಮತದಾರರನ್ನು ಹೊಂದಿರುವ ಬಸವರಾಜನ್ ಅವರು ಈ ಮೂಲಕ ಪಕ್ಷದ ವರಿಷ್ಠರಿಗೆ ಸಂದೇಶವನ್ನು ರವಾನೆ ಮಾಡುವ ಇಂಗಿತವನ್ನು ಇಟ್ಟುಕೊಂಡಿದ್ದರು. ಆದರೆ, ಕೊನೆಯಲ್ಲಿ ಮನಸ್ಸು ಬದಲಿಸಿ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಬದಲು ಹಳೇ ರಾಜಕೀಯ ವೈರಿ ಜತೆಯೇ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕಾಗಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಮೇಲೆ 20 ವರ್ಷದಿಂದ ಇದ್ದ ರಾಜಕೀಯ ಮುನಿಸನ್ನು ಬಿಟ್ಟು ಒಂದಾಗಿದ್ದಾರೆ ಎಂದು ಹೇಳಲಾಗಿದೆ.