Site icon Vistara News

ಬೆಳಗಾವಿ ಅಧಿವೇಶನ | ವಿದ್ಯಾರ್ಥಿಗಳಿಗೆ ಬಸ್‌ ಸಮಸ್ಯೆ ಪ್ರಶ್ನಿಸಿದ್ದಕ್ಕೆ ಗೆಟ್‌ ಔಟ್‌ ಎಂದ ಕಾರಜೋಳ; ಸರ್ಕಾರ-ಪ್ರತಿಪಕ್ಷಗಳ ನಡುವೆ ವಾಗ್ವಾದ

uproar-in-legislative-assembly-regarding-bus-service-issue

ವಿಧಾನಸಭೆ: ರಾಜ್ಯದ ವಿವಿಧೆಡೆ ಸರ್ಕಾರಿ ಬಸ್‌ಗಳ ಸಮರ್ಪಕ ಸೇವೆ ಇಲ್ಲದಿರುವುದರಿಂದಾಗಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಎಂಬ ಪ್ರಶ್ನೆಯು ವಿಧಾನ ಸಭೆಯ ಅರ್ಧ ದಿನವನ್ನು ಆಪೋಶನ ತೆಗೆದುಕೊಂಡಿತು.

ತಮ್ಮ ಕ್ಷೇತ್ರದಲ್ಲಿ ಶಾಲಾ ಕಾಲೇಜು ಓದುವ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ. ಮಕ್ಕಳ ಶಾಲೆಗೆ ಹೋಗಲು ಬಸ್ ಕೊಡಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಸಲುವಾಗಿ ಬಸ್ ಸಮಸ್ಯೆ ಬಗೆಹರಿಸಿ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಸಿದ್ದು ಸವದಿ ಒತ್ತಾಯಿಸಿದರು.

ಸಿದ್ದು ಸವದಿ ಪ್ರಶ್ನೆಗೆ ಪಕ್ಷ ಭೇದ ಮರೆತು ಶಾಸಕರು ಸಾಥ್‌ ಕೊಟ್ಟರು. ತಮ್ಮ ಕ್ಷೇತ್ರದಲ್ಲೂ ಬಸ್ ವ್ಯವಸ್ಥೆ ಇಲ್ಲ. ಬೆಂಗಳೂರಿಗೆ ಹೋಗಲು ನಮ್ಮ ಕ್ಷೇತ್ರದಿಂದ ಎಸಿ ಬಸ್ ಇಲ್ಲ ಎಂದು ಅನೇಕ ಶಾಸಕರು ತಿಳಿಸಿದರು.

ಶಾಲೆಯ ಮಕ್ಕಳಿಗೆ ಯಾವ ಗ್ರಾಮದಿಂದ ಬಸ್ ಸಮಸ್ಯೆ ಇದೆ ಅಂತ ಸರಿಯಾಗಿ ಮಾಹಿತಿ ಕೊಡಿ, ಪರಿಹಾರ ಕೊಡುತ್ತೇನೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.

ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಮಾಜಿ ಸಚಿವ ಆರ್‌.ವಿ. ದೇಶಪಾಂಡೆ, ಕನಿಷ್ಠ ಮೂಲಭೂತ ಸೌಕರ್ಯಗಳ ಬಸ್ ಕೊಡಲು ಆಗದಿದ್ದರೆ ಹೇಗೆ? ಸದನಕ್ಕೆ ತಪ್ಪು ಮಾಹಿತಿ ಕೊಡಬೇಡಿ. ಕ್ಷೇತ್ರದಲ್ಲಿ ಬಸ್‌ ಸಮಸ್ಯೆ ಇದೆ ಎಂದು ಹಲವು ಸದಸ್ಯರು ಹೇಳಿದ್ದಾರೆ. ಅದನ್ನು ಬಗೆಹರಿಸಿ ಎಂದರು.

ಇದನ್ನೂ ಓದಿ | ಮಕ್ಕಳ ಕಥೆ | ಬಾವಿಯ ನೀರು ಯಾರದ್ದು?

ಈ ಸಮಯದಲ್ಲಿ ಅನೇಕ ಶಾಸಕರು ಶ್ರೀರಾಮುಲು ವಿರುದ್ಧ ಮುಗಿಬಿದ್ದರು. ಬಸ್ ಸಮಸ್ಯೆ ನೀಗಿಸುವಂತೆ ಒತ್ತಾಯ ಮಾಡಿದರು. ವಿದ್ಯಾರ್ಥಿಗಳು ಬಸ್ ಮೇಲೆ ಹತ್ತಿ ಹೋಗುವ ಪರಿಸ್ಥಿತಿ ಬಂದಿದೆ. ಅದನ್ನು ಸರಿಪಡಿಸಬೇಕು ಎಂದು ಕಾಂಗ್ರೆಸ್‌ ಶಾಸಕರು ಸಭಾಧ್ಯಕ್ಷರ ಎದುರಿಗೆ ಆಗಮಿಸಿ ಧರಣಿ ನಡೆಸಲು ಆರಂಭಿಸಿದರು.

ಹೊಸ ಚಾಲಕರ ನೇಮಕ ಮಾಡಲಾಗುತ್ತಿದೆ. ಶೀಘ್ರದಲ್ಲೇ ಬಸ್‌ ಕಲ್ಪಿಸಲಾಗುತ್ತದೆ ಎಂದು ಧರಣಿಯಲ್ಲಿ ಇದ್ದ ಶಾಸಕರಿಗೆ ರಾಮುಲು ಮನವಿ ಮಾಡಿದರು. ಈ ವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಗ್ವಾದ ನಡೆಯಿತು.

ಹೊರಗೆ ಹೋಗಿ ಎಂದು ಸಚಿವ ಗೋವಿಂದ ಕಾರಜೋಳ, ಪ್ರತಿಭಟನಾಕಾರರಿಗೆ ಹೇಳಿದರು. ಇದರಿಂದ ಗದ್ದಲ ಮತ್ತಷ್ಟು ಹೆಚ್ಚಾಯಿತು. ಕೆಲ ಶಾಸಕರು ಕಾರಜೋಳ ಅವರನ್ನು ಘೇರಾವ್‌ ಮಾಡಲು ಮುಂದಾದರು. ಗದ್ದಲ ನಿವಾರಿಸಲು ಆಗದೇ, ಸ್ಪೀಕರ್‌ ಕುರ್ಚಿಯಲ್ಲಿ ಕುಳಿತಿದ್ದ ಕುಮಾರ್ ಬಂಗಾರಪ್ಪ ಅಸಹಾಯಕರಾಗಿದ್ದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಹತ್ತು ನಿಮಿಷ ಸದನವನ್ನು ಮುಂದೂಡಲಾಯಿತು.

ಸದನ ಮತ್ತೆ ಸೇರಿದಾಗ ಮಾತನಾಡಿದ ಕುಣಿಗಲ್ ಶಾಸಕ ಡಾ.ರಂಗನಾಥ್, ಕ್ಷೇತ್ರಗಳಲ್ಲಿ ಕರೋನ ಬಳಿಕ ಬಸ್ ಸಮಸ್ಯೆ ಆಗಿದೆ. ರಸ್ತೆ ಸರಿಯಿಲ್ಲ ಬಸ್ ಬಿಡಲು ಆಗುವುದಿಲ್ಲ ಎಂದು ಉತ್ತರ ಕೊಡುತ್ತಾರೆ. 224 ಕ್ಷೇತ್ರಗಳಲ್ಲಿಯೂ ಬಸ್ ಸಮಸ್ಯೆ ಆಗಿದೆ. ಸಚಿವರ ಉತ್ತರ ಸರಿಯಿಲ್ಲ ಎಂದು ಧರಣಿಗೆ ಹೋಗುತ್ತೇವೆ. ನೀನು ಆಚೆಗೆ ಹೋಗು ಎಂದು ಮಧುಸ್ವಾಮಿ ಮತ್ತು ಕಾರಜೋಳ ಹೇಳುತ್ತಾರೆ. ಕುಣಿಗಲ್‌ ಅಭಿವೃದ್ಧಿಗೆ ಮಾಧುಸ್ವಾಮಿ ಯಾವಾಗಲೂ ವಿರೋಧ ಮಾಡುತ್ತಾರೆ. ಸಿದ್ದರಾಮಯ್ಯ ಸೇರಿದಂತೆ ಎಲ್ಲ ಶಾಸಕರೂ ನನ್ನ ಜತೆಗೆ ನಿಂತರು. ಇದನ್ನು ಕೇಳಲು ನನಗೆ ಹಕ್ಕಿದೆ. ನಮ್ಮ ಪ್ರತಿಭಟನೆ ಮುಂದುವರಿಸುತ್ತೇವೆ ಎಂದರು.

ಗಲಾಟೆ ಹೆಚ್ಚಾದಾಗ ಸದನವನ್ನು ಮುಂದೂಡಿದ ಕುಮಾರ್‌ ಬಂಗಾರಪ್ಪ, ಸಂಧಾನ ಸಭೆ ನಡೆಸಿದರು. ಸಭೆ ಮತ್ತೆ ಸೇರಿದಾಗ ಮಾತನಾಡಿದ ಸಿದ್ದರಾಮಯ್ಯ, ವರುಣ ಕ್ಷೇತ್ರಕ್ಕೆ ಇತ್ತೀಚೆಗೆ ಹೋಗಿದ್ದೆ. ಎಲ್ಲಿಗೆ ಹೋದರೂ ಬಸ್ ಸಮಸ್ಯೆ ಇದೆ. ಏಕೆ ಹೀಗೆ ಎಂದರೆ ರಸ್ತೆ ಸರಿಯಿಲ್ಲ ಎಂದು ಉತ್ತರ ನೀಡುತ್ತಾರೆ. ಹಾಗಾದರೆ ಬಸ್ ಇಲ್ಲದೇ ಶಾಲೆ, ಆಸ್ಪತ್ರೆಗೆ ಜನರು ಹೋಗುವುದು ಹೇಗೆ? ಹೀಗೆ ಕೇಳಿದ್ದಕ್ಕೆ, ಹೊರಗೆ ಹೋಗಿ ಎಂದು ಗೋವಿಂದ ಕಾರಜೋಳ ಹೇಳಬಹುದ? ಇದನ್ನೆಲ್ಲ ನಾವು ಕಂಡಿದ್ದೇವೆ. ಕಾರಜೋಳ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಮಧುಸ್ವಾಮಿ ಮಾತನಾಡಿ, ಸಾರಿಗೆ ಸಚಿವರು ಸಭೆ ಕರೆಯುತ್ತೇವೆಂದು ಹೇಳಿದ್ದಾರೆ. ಅರ್ಧಗಂಟೆ ಚರ್ಚೆಗೆ ಅವಕಾಶ ಕೊಡುತ್ತೇವೆ ಎಂದಿದ್ದೀರಿ, ಸದನ ಮುಂದುವರಿಸಿ ಎಂದು ಸ್ಪೀಕರ್‌ಗೆ ಮನವಿ ಮಾಡಿದರು. ಆದರೂ, ಕಾರಜೋಳ ಕ್ಷಮೆ ಯಾಚಿಸಬೇಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಯಾವುದೇ ಧರಣಿ ಮಾಡಿ ಸದನ ಸಮಯ ಹಾಳು ಮಾಡುವುದು ಸರಿಯಲ್ಲ. ಈಗಾಗಲೇ ಸಚಿವರು ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದರು. ಇದೆಲ್ಲದರ ನಂತರವೂ ಗಲಾಟೆ ಮುಂದುವರಿದು, ಹತ್ತು ನಿಮಿಷ ಸದನವನ್ನು ಮುಂದೂಡಲಾಯಿತು.

ಮತ್ತೆ ಸಭೆ ಸೇರಿದಾಗಲೂ ಧರಣಿ ಮುಂದುವರಿದಾಗ, ಮಾರ್ಷಲ್‌ಗಳನ್ನು ಕರೆಸಿ ಹೊರಹಾಕಿಸುತ್ತೇವೆ ಎಂದು ಮಾಧುಸ್ವಾಮಿ ಹೇಳಿದರು. ಅಂಜಲಿ ನಿಂಬಾಳ್ಕರ್‌ ಹಾಗೂ ಕುಣಿಗಲ್‌ ರಂಗನಾಥ್‌ ಸದನಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅವರನ್ನು ಹೊರಗೆ ಹಾಕಿ ಎಂದು ಮಾಧುಸ್ವಾಮಿ ಹೇಳಿದರು. ಇದಕ್ಕೆ ಕಾಂಗ್ರೆಸ್‌ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಈದೆಲ್ಲದರ ನಂತರ ಮತ್ತೆ ಸದನವನ್ನು ಮುಂದೂಡಿ, ಸಂಧಾನ ಸಭೆ ನಡೆಸಲಾಯಿತು. ಆನಂತರದಲ್ಲಿ ಇತರೆ ಕಾರ್ಯಕಲಾಪಗಳು ಆರಂಭವಾದವು.

ಇದನ್ನೂ ಓದಿ | Motivational story: ನೆಮ್ಮದಿಯೇ ಇಲ್ಲದ ಶ್ರೀಮಂತ ಮಹಿಳೆಗೆ ಏನೂ ಇಲ್ಲದ ವಿಶಾಲಾಕ್ಷಮ್ಮ ಹೇಳಿದ ಕಥೆ

Exit mobile version