Site icon Vistara News

Assembly Session: ಡ್ರೈವರ್‌ ಆತ್ಮಹತ್ಯೆ ಯತ್ನ ವಿಷಯದಲ್ಲಿ ರಾಜಕೀಯ ಹಗ್ಗಜಗ್ಗಾಟ: ಸರ್ಕಾರದ ವಿರುದ್ಧ ಮುಗಿಬಿದ್ದ BJP-JDS

KJ George in assembly session

ವಿಧಾನಸಭೆ: ನಾಮಂಗಲ ಡಿಪೊದಲ್ಲಿ ಚಾಲಕನಾಗಿರುವ ಜಗದೀಶ್‌ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಪ್ರತಿಪಕ್ಷ ಹಾಗೂ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ (Assembly Session) ವಾಕ್ಸಮರ ನಡೆಯಿತು. ಮುಖ್ಯವಾಗಿ ಸಚಿವ ಚೆಲುವರಾಯಸ್ವಾಮಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯ ಮಾಡಿದರೆ, ನಿಮ್ಮ ಕಾಲದಲ್ಲಿ ಏನಾಗಿತ್ತು ಎಂದು ಹೇಳುವುದರಲ್ಲಿ ಸರ್ಕಾರ ನಿರತವಾಯಿತು.

ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಮತ್ತು ಜೆಡಿಎಸ್ ನೀಡಿದ ಮನವಿಯನ್ನು ಸ್ಪೀಕರ್‌ ಯು.ಟಿ. ಖಾದರ್‌ ಅಂಗೀಕರಿಸಿದರು. ಮೊದಲಿಗೆ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಡ್ರೈವರ್ ವರ್ಗಾವಣೆ ಆಗಿದೆ. ಇದರ ಹಿಂದೆ ಶಾಸಕರು ಇದ್ದಾರೆ. ರಾಜಕೀಯ ಒತ್ತಡದಿಂದ ವರ್ಗಾವಣೆ ಆಗಿದೆ. ಇಲ್ಲಿಯವರೆಗೂ ಎಫ್ಐಆರ್ ಆಗಿಲ್ಲ. ಪೊಲೀಸ್ ಅಧಿಕಾರಿಗಳು ಏನು ಮಾಡ್ತಿದ್ದಾರೆ? ಆಸ್ಪತ್ರೆಯ ವೈದ್ಯರು 48 ಗಂಟೆ ಏನೂ ಹೇಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಪ್ರಕರಣವನ್ನು ಸರ್ಕಾರ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ. ತನಿಖೆಗೆ ವಹಿಸಬೇಕು ಎಂದು ಬೊಮ್ಮಾಯಿ ಒತ್ತಾಯ ಮಾಡಿದರು.

ಈ ಹಿಂದಿನ ಪ್ರಕರಣಗಳು ಏನು ಆದವು? ಡಿ.ಕೆ. ರವಿ, ಕಲ್ಲಪ್ಪ ಹಂಡಿಬಾಗ್, ಡಿವೈಎಸ್‌ಪಿ ಗಣಪತಿ ಪ್ರಕರಣಗಳು ಏನು ಆದವು? ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿ ಮುಕ್ತ ತನಿಖೆ ಆಗಲಿ. ಈ ಹಿಂದಿನ ಸಂಪ್ರದಾಯ ಆಗಲಿ. ಚಲುವರಾಯಸ್ವಾಮಿ ರಾಜೀನಾಮೆ ನೀಡಲಿ. ಸಿಎಂ ಕರೆದು ರಾಜೀನಾಮೆ ಪಡೆಯಲಿ ಎಂದರು.

ಬೊಮ್ಮಾಯಿ ಮಾತಿಗೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಇದರಲ್ಲಿ ಸಚಿವರ ಪಾತ್ರ ಇಲ್ಲ. ಕೆ.ಆರ್. ಪುರಂ ಪಿಎಸ್ಐ ನಂದೀಶ್ ಸಾವು ಪ್ರಕರಣದಲ್ಲಿ ಸಚಿವರ ಹೆಸರು ಕೇಳಿ ಬಂದಿತ್ತು. ಸಚಿವರ ಹೆಸರು ಪ್ರಸ್ತಾಪ ಮಾಡಿ ಆತ್ಮಹತ್ಯೆ ಮಾಡಿಕೊಂಡ. ಆಗ ಬೊಮ್ಮಾಯಿ ಸಿಎಂ ಆಗಿದ್ದರು, ಅಂದು ಯಾಕೆ ರಾಜೀನಾಮೆ ಪಡೆಯಲಿಲ್ಲ? ಎಂದರು.

ಈ ಸಮಯದಲ್ಲಿ ಸದನದಲ್ಲಿ ಆಡಳಿತ ವಿಪಕ್ಷ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು, ಸದಸ್ಯರನ್ನು ನಿಯಂತ್ರಣದಲ್ಲಿಡಲು ಸ್ಪೀಕರ್ ಖಾದರ್ ಹರಸಹಾಸಪಟ್ಟರು. ನಂತರ ಮಾಜಿ ಸಿಎಂ ಕುಮಾರಸ್ವಾಮಿ ಚರ್ಚೆ ಆರಂಭಿಸಿದರು. ಸರ್ಕಾರ ರಚನೆಯಾಗಿ ಐವತ್ತು ದಿನ ಕೂಡ ಆಗಿಲ್ಲ. ಯಾವ ದಿಕ್ಕಿನಲ್ಲಿ ಹೋಗುತ್ತಿದ್ದೀರಿ? ಇದು ರಾಜಕೀಯದ ಆತ್ಮಹತ್ಯೆ.

ಇದರ ಹಿಂದೆ ರಾಜಕೀಯ ಇದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಇದೆ. ಅವರ ಮನೆಯವರು ಕೆಲಸದಲ್ಲಿ ಇರೋರ ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ಇಲ್ಲಿ ಅಧಿಕಾರದಲ್ಲಿ ಇರೋರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಸಮಯದಲ್ಲಿ ರಾಜಕೀಯ ಮಾಡೋಣ. ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಯಾಕೆ? ಅಧಿಕಾರಿಗೆ ಕಿರಿಕಿರಿ ಯಾಕೆ?

ಡ್ರೈವರ್‌ ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಯಾಕೆ ಎಫ್ಐಆರ್ ಹಾಕಿಲ್ಲ ಎಂದು ಕೇಳಿದಾಗ,ಆತ ಇನ್ನೂ ಸತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲಿ ಸಚಿವರ ರಾಜೀನಾಮೆ ಪಡೆದಿದ್ದೇವೆ. ಈಶ್ವರಪ್ಪ ವಿರುದ್ಧ ವಾಟ್ಸ್ ಅಪ್‌ನಲ್ಲಿ ವಿಡಿಯೋ ಬಂದಿದ್ದಕ್ಕೆ ರಾಜೀನಾಮೆ ಪಡೆದಿದ್ದೇವೆ. ಮದ್ದೂರು ಡಿಪೋಗೆ ವರ್ಗಾವಣೆ ಆಗಿದೆ. ಟಿಕೆಟ್ ಮಿಷನ್ ವಾಪಸು ಕೊಡಿ ಎಂದು ಕೇಳಿದ್ದಾರೆ ಎಂದರು.

ಈ ಸಮಯದಲ್ಲಿ ಎಚ್ಡಿಕೆ ಮೇಲೆ ರಮೇಶ್‌ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ ಮುಗಿಬಿದ್ದರು. ನಿಮ್ಮ ಕಾಲದಲ್ಲಿ ನಡೆದಿಲ್ಲವಾ ವರ್ಗಾವಣೆ? ಎಂದರು. ನನಗೂ ಮಾತನಾಡಲು ಅವಕಾಶ ಕೊಡಿ ಎಂದು ಸಚಿವ ಚಲುವರಾಯಸ್ವಾಮಿ ಕೇಳಿದರು.

ಮಾತು ಮುಂದುವರಿಸಿದ ಎಚ್‌.ಡಿ. ಕುಮಾರಸ್ವಾಮಿ, ಮಹಿಳಾ ಅಧಿಕಾರಿ ಮೇಲೆ ಅನುಚಿತ ವರ್ತನೆ ಮಾಡಿದ್ದಾರೆಂದು ವರ್ಗಾವಣೆ ಮಾಡಿದ್ದಾರೆ. ಆ ರೀತಿ ಆಗಿಲ್ಲ ಎಂದು ಆದ್ರೆ ಡಿಪೋ ಮ್ಯಾನೇಜರ್ ಹೇಳಿದ್ದಾರೆ. ಡ್ರೈವರ್ ಹೆಂಡತಿ ಪಂಚಾಯತ್ ಸದಸ್ಯೆ ಆಗಿರುವುದೇ ವರ್ಗಾವಣೆಗೆ ಕಾರಣ ಎಂದರು.

ಇದನ್ನೂ ಓದಿ: Karnataka Politics: ಹನಿಮೂನ್‌ ಪೀರಿಯಡ್‌ನಲ್ಲೇ ಹೀಗಾದ್ರೆ ಮುಂದೆ ಹೇಗೆ?: ಸರ್ಕಾರದ ದಮ್‌ ಪ್ರಶ್ನಿಸಿದ ಎಚ್‌.ಡಿ. ಕುಮಾರಸ್ವಾಮಿ

ಈ ಸಮಯದಲ್ಲಿ ಎದ್ದುನಿಂತ ಸಚಿವ ಕೆ.ಜೆ. ಜಾರ್ಜ್‌, ನೀವು ನನ್ನ ವಿರುದ್ಧ ಗಣಪತಿ, ಡಿ.ಕೆ. ರವಿ ಕೇಸ್ ಆರೋಪ ಮಾಡಿದ್ದಿರಿ. ಸಿಬಿಐ ತನಿಖೆಗೆ ಕೊಟೆವು. ಸಿಬಿಐ ಕ್ಲಿನ್ ಚಿಟ್ ಕೊಟ್ಟರು. ಆಗ ನೀವು ತಪ್ಪಾಯಿತು ಅಂತ ಹೇಳಿದಿರ? ಈಗ ಪೆನ್ ಡ್ರೈವ್ ತೋರಿಸ್ತೀರಿ. ಕೊಡಿ ಸ್ಪೀಕರ್‌ಗೆ ಪೆನ್ ಡ್ರೈವ್ ಎಂದು ಸವಾಲೆಸೆದರು.

ನಿಮ್ಮ ಹಣೆ ಬರಹ ಗೊತ್ತು ಕುಳಿತುಕೊಳ್ಳಿ ಎಂದ ಕುಮಾರಸ್ವಾಮಿ, ನಿಮ್ಮ ವರ್ಗಾವಣೆ ದಂಧೆ ಬಗ್ಗೆ ಗೊತ್ತು. ಸ್ಪೀಕರ್ ಒಪ್ಪಿಗೆ ಕೊಟ್ರೆ ಸದನದಲ್ಲಿ ಪ್ರದರ್ಶನ ಮಾಡುತ್ತೇನೆ. 224 ಶಾಸಕರಿಗೂ ಪೆನ್ ಡ್ರೈವ್ ಕೊಡ್ತೀನಿ ಎಂದರು. ಈ ಸಮಯದಲ್ಲಿ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ಎಚ್‌.ಡಿ. ಕುಮಾರಸ್ವಾಮಿ ಬೆನ್ನಿಗೆ ನಿಂತು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಈ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದ ನರೇಂದ್ರ ಸ್ವಾಮಿ, ಈಗಾಗಲೆ ಸರ್ಕಾರ ಲಿಖಿತ ಉತ್ತರ ನೀಡಿದೆ ಎಂದು ಸಮರ್ಥಿಸಿಕೊಂಡರು. ನಂತರ ಮತ್ತೆ ಮಾತಿನ ಚಕಮಕಿ ನಡೆಯಿತು.

Exit mobile version