Site icon Vistara News

UPSC Results 2023: ಯುಪಿಎಸ್‌ಸಿಯಲ್ಲಿ ವಿಜಯಪುರದ ವಿಜೇತಾ ರಾಜ್ಯಕ್ಕೆ ಪ್ರಥಮ, 20ಕ್ಕೂ ಹೆಚ್ಚು ಮಂದಿ ತೇರ್ಗಡೆ

UPSC Results 2023

ಬೆಂಗಳೂರು: ಕನಸು ಕಾಣುವುದು ಮನುಷ್ಯನ ಸಹಜವಾದ ಗುಣ, ಆದರೆ ಆ ಕನಸನ್ನು ನನಸಾಗಿಸಿಕೊಳ್ಳೋದು ಬೆರಳೆಣಿಕೆಯಷ್ಟು ಮಂದಿ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2023ನೇ ಸಾಲಿನ ನಾಗರಿಕ ಸೇವೆಗಳ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ (UPSC Results 2023) ಮಂಗಳವಾರ ಪ್ರಕಟವಾಗಿದೆ. ಒಟ್ಟು 1016 ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದು, ರಾಜ್ಯದ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿ ಸಾಧನೆಗೈದಿದ್ದಾರೆ. ಈ ಪೈಕಿ 100ನೇ ರ‍್ಯಾಂಕ್‌ ಪಡೆಯುವ ಮೂಲಕ ವಿಜಯಪುರದ ಮೂಲದ ವಿಜೇತಾ ಬಿ. ಹೊಸಮನಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜಯಪುರ ಮೂಲದ ವಿಜೇತಾ ಭೀಮಸೇನ ಹೊಸಮನಿ ಅವರ ಕುಟುಂಬ ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದೆ. ವಿಜೇತಾ ಸಾಧನೆಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಎಲ್‌ಕೆಜಿಯಿಂದ 5ನೇ ಕ್ಲಾಸ್‌ವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ವಿಜೇತಾ ವಿದ್ಯಾಭ್ಯಾಸ ಮಾಡಿದ್ದು, 6 ರಿಂದ 10ನೇ ತರಗತಿವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್‌ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದರು.

UPSC Results 2023

ಪ್ರಥಮ ಪಿಯುಸಿ ವಿಜಯಪುರ ನಗರದ ತುಂಗಳ ಕಾಲೇಜು, ದ್ವಿತೀಯ ಪಿಯುಸಿ ದರಬಾರ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಕ್ಲಾಟ್ ಪರೀಕ್ಷೆ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ
ಬಿಎ, ಎಲ್‌ಎಲ್‌ಬಿ ಪದವಿ ಪಡೆದಿದ್ದು, ಕ್ರಿಮಿನಲ್ ಲಾ ದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾರೆ.

UPSC Results 2023

2020 ರಿಂದ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಿದ್ದು, ಆನ್ ಲೈನ್ ತರಬೇತಿ ಹಾಗೂ ಮನೆಯಲ್ಲೇ ಹೆಚ್ಚಿನ ಅಭ್ಯಾಸ ಮಾಡಿ ಇವರು ಸಾಧನೆ ಮಾಡಿದ್ದಾರೆ. ಇಂಡಿಯನ್ ರೆವೆನ್ಯೂ ಸರ್ವೀಸ್‌ನಲ್ಲಿ ಸ್ಥಾನ ಸಿಗೋ ಸಾಧ್ಯತೆ ಇದೆ. ಹುಬ್ಬಳ್ಳಿಯ ಸಿಲ್ವರ್ ಟೌನ್‌ನ ನಿವಾಸದಲ್ಲಿ ವಿಜೇತಾಗೆ ಪೋಷಕರು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ | UPSC Results 2023: ಎಂಎನ್‌ಸಿ ಕೆಲಸ ಬಿಟ್ಟ ಆದಿತ್ಯಗೆ ಯುಪಿಎಸ್‌ಸಿ ಫಸ್ಟ್‌ ರ‍್ಯಾಂಕ್;‌ ಯಾರಿವರು?

ದಾವಣಗೆರೆಯ ಸೌಭಾಗ್ಯ ರಾಜ್ಯಕ್ಕೆ 2ನೇ ಸ್ಥಾನ

ದಾವಣಗೆರೆ: ಯುಪಿಎಸ್‌ಸಿ ಫಲಿತಾಂಶದಲ್ಲಿ ದಾವಣಗೆರೆಯ ಸೌಭಾಗ್ಯ ಎಸ್. ಬೀಳಗಿಮಠ್ ಅವರು 101ನೇ ರ‍್ಯಾಂಕ್‌ ಪಡೆಯುವ ಮೂಲಕ ಕರ್ನಾಟಕದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ದಾವಣಗೆರೆ ಆಂಜನೇಯ ಬಡಾವಣೆಯ ನಿವಾಸಿ ಸೌಭಾಗ್ಯ (22) ಧಾರವಾಡದಲ್ಲಿ ಕೋಚಿಂಗ್ ಪಡೆದಿದ್ದರು.

ಶರಣಮ್ಮ ಹಾಗೂ ಶರಣಯ್ಯ ಸ್ವಾಮಿ ದಂಪತಿಯ ಪುತ್ರಿ ಸೌಭಾಗ್ಯ ಎಸ್. ಬೀಳಗಿಮಠ್, ಸದ್ಯ ಧಾರವಾಡದಲ್ಲಿ ನೆಲೆಸಿದ್ದಾರ. ಇವರ ತಂದೆ ರೈತರಾಗಿದ್ದು, ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನವರು. ಬಿಎಸ್ಸಿ ಅಗ್ರಿಕಲ್ಚರ್ ಪದವಿ ಪಡೆದಿದ್ದಾರೆ.

ಕೋಲಾರದ ಯುವಕನಿಗೆ 939ನೇ ರ‍್ಯಾಂಕ್‌

ಕೋಲಾರ: ಯುಪಿಎಸ್ಸಿ ಫಲಿತಾಂಶದಲ್ಲಿ ಕೋಲಾರದ ಯುವಕನಿಗೆ 939ನೇ ರ‍್ಯಾಂಕ್‌ ಬಂದಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೋಪಾಲಪುರ ಗ್ರಾಮದ ಶಿಕ್ಷಕ ದಂಪತಿ ಪುತ್ರ ಗೌತಮ್ 939ನೇ ರ‍್ಯಾಂಕ್‌ ಪಡೆದಿದ್ದಾರೆ. ಈ ರ‍್ಯಾಂಕ್‌ನಲ್ಲಿ ಐಎಎಸ್‌ ಹುದ್ದೆ ಸಿಗುವುದು ಕಷ್ಟ, ಮತ್ತೊಂದು ಬಾರಿ ಪರೀಕ್ಷೆ ಬರೆಯುವುದಾಗಿ ಗೌತಮ್‌ ತಿಳಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡು ಯುಪಿಎಸ್ಸಿಗೆ ಯುವಕ ತಯಾರಿ ನಡೆಸಿದ್ದು, ಪೋಷಕರಿಗೆ ಧನ್ಯವಾದ ತಿಳಿಸಿದ್ದಾರೆ. ತಾಲೂಕಿನ ಶಿಕ್ಷಕರು ಯುವಕನನ್ನು ಸನ್ಮಾನಿಸಿ, ಸಿಹಿ ತಿನಿಸಿದ್ದಾರೆ.

ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಜಯಪುರ ಯುವಕನ ಸಾಧನೆ

ವಿಜಯಪುರ: ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಜಯಪುರದ ಸಂತೋಷ ಶ್ರೀಕಾಂತ ಶಿರಾಡೋಣ 641ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರು ನಗರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾಭ್ಯಾಸ ನಡೆಸಿದ್ದು, 6 ರಿಂದ 8 ತರಗತಿ ಗದಗ ತಾಲೂಕಿನ ಹುಲಕೋಟಿಯ ರಾಜರಾಜೇಶ್ವರಿ ಪ್ರೌಢ ಶಾಲೆ, 8 ರಿಂದ 10ನೇ ತರಗತಿ ವಿಜಯಪುರ ತಾಲೂಕಿನ‌ ಕಗ್ಗೋಡದ ಸಂಗನಬಸವ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದರು. ಪಿಯುಸಿ ಹೈದರಾಬಾದಿನ ವಿಚೇತನಾ ಕಾಲೇಜು, ಬೆಂಗಳೂರಿನ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ‌ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದಾರೆ. 2019 ನಿಂದ ಯುಪಿಎಸ್ಸಿ ಪ್ರಯತ್ನ ನಡೆಸುತ್ತಿದ್ದು, 2023ರಲ್ಲಿ ಉತ್ತೀರ್ಣರಾಗಿದ್ದಾರೆ. ದೆಹಲಿಯ ವಾದಿರಾಮ್ ಕೋಚಿಂಗ್ ಸೆಂಟರ್‌ನಲ್ಲಿ ಸಂತೋಷ್ ತರಬೇತಿ ಪಡೆದಿದ್ದರು. ಸಂತೋಷ್‌ ಸಾಧನೆಗೆ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯದ 20ಕ್ಕೂ ಹೆಚ್ಚು ಕನ್ನಡಿಗರು ತೇರ್ಗಡೆ

ಈ ಬಾರಿ ಒಟ್ಟು 1,016 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದು, ಲಖನೌನ ಆದಿತ್ಯ ಶ್ರೀವಾಸ್ತವ ದೇಶಕ್ಕೆ ಅಗ್ರಸ್ಥಾನ ಪಡೆದಿದ್ದು, ಒಡಿಶಾದ ಅನಿಮೇಶ್ ಪ್ರಧಾನ್ ಎರಡನೇ ಸ್ಥಾನ ಪಡೆದಿದ್ದು, ತೆಲಂಗಾಣದ ಅನನ್ಯಾ ರೆಡ್ಡಿ ಮೂರನೇ ಸ್ಥಾನ ಪಡೆದಿದ್ದಾರೆ.

ಅದೇ ರೀತಿ ಯುಪಿಎಸ್ಸಿಯಲ್ಲಿ ರಾಜ್ಯದ 20ಕ್ಕೂ ಹೆಚ್ಚು ಕನ್ನಡಿಗರು ತೇರ್ಗಡೆಯಾಗುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಇದರಲ್ಲಿ ಆಚಾರ್ಯ ಐ.ಎ.ಎಸ್. ಅಕಾಡೆಮಿಯಿಂದ 3 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಸತತ ಎರಡು ವರ್ಷಗಳಿಂದ ಐಎಎಸ್ ತರಬೇತಿಯಲ್ಲಿ ವಿಶೇಷ ಸ್ಥಾನ ಪಡೆದು, ಅನೇಕ ಬಡ ವಿದ್ಯಾರ್ಥಿಗಳ ಐಎಎಸ್ ಸಾಧನೆಗೆ ಸಹಕಾರಿಯಾಗಿದೆ.

ಇದನ್ನೂ ಓದಿ | UPSC Result 2024: ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ ಪ್ರಥಮ ರ್‍ಯಾಂಕ್

ಶಾಂತಪ್ಪ ಕುರುಬರ್

ಇನ್ನು ಈ ಸಾಧನೆಗೆ ಸತತ ಪ್ರಯತ್ನ, ಶ್ರದ್ಧೆ ಹಾಗೂ ಆತ್ಮ ವಿಶ್ವಾಸವೆ ಕಾರಣ ಎನ್ನುತ್ತಿದ್ದಾರೆ ವಿಜೇತರು. ಜೊತೆಗೆ ಬಳ್ಳಾರಿಯ ಶಾಂತಪ್ಪ ಕುರುಬರ್ 644 ರ್ಯಾಂಕ್ ಪಡೆದಿದ್ದಾರೆ. ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಬಂದು ವಿದ್ಯಾಭ್ಯಾಸ ಮಾಡಿ ವಿಜೇತರಾಗಿದ್ದಾರೆ. ಸತತವಾಗಿ ಕಷ್ಟವನ್ನೇ ನೋಡಿಕೊಂಡು ಬಂದ ಇವರು ಪಿಯುಸಿಯಲ್ಲಿ ಫೇಲ್ ಅಗಿದ್ದರು. ತಾಯಿ ಕೂಲಿ ಕೆಲಸ ಮಾಡಿ ಇವರನ್ನು ಸಾಕಿದ್ದಾರೆ. ಇವರು PSI ಹುದ್ದೆಯಲ್ಲಿದ್ದು, ಕೆಲ್ಸದ ಜೊತೆಗೆ ಕನ್ನಡದಲ್ಲೇ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದರು. ಜೊತೆಗೆ ಕನ್ನಡದಲ್ಲೇ ಪರೀಕ್ಷೆ ಬರೆದು ಪಾಸಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಇನ್ನು ಇದೆ ಅಕಾಡೆಮಿಯಲ್ಲಿ ಓದಿದ್ದ ಭಾನು ಪ್ರಕಾಶ್ 600 ರ್ಯಾಂಕ್ ಪಡೆದಿದ್ದರೆ. ಮೂಲತಃ ಮೈಸೂರಿನವರಾದ ಇವರು ಕೊನೆ ಬಾರಿ ಕೂಡ ಐಪಿಎಸ್ ಪರೀಕ್ಷೆಯಲ್ಲಿ ಪಾಸ್ ಅಗಿದ್ದರು.

Exit mobile version