Site icon Vistara News

UPSC | ಅಹಂ ಬಿಡಿ ನ್ಯಾಯದ ಪರವಾಗಿರಿ; ತಮಿಳುನಾಡು ರಾಜ್ಯಪಾಲ ಆರ್‌.ಎನ್.ರವಿ ಕಿವಿಮಾತು

UPSC

ಬೆಂಗಳೂರು: ಯುಪಿಎಸ್‌ಸಿ (UPSC) ಮಾಡಿದಾಕ್ಷಣ ನಾವೇ ಎಲ್ಲ ಎಂಬ ಮನೋಭಾವನೆ ಬರಬಾರದು. ಅಹಂ ಬಿಟ್ಟು ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಯುಪಿಎಸ್‌ಸಿಗಳಿಗೆ ತಮಿಳುನಾಡು ರಾಜ್ಯಪಾಲ ಆರ್‌.ಎನ್.ರವಿ ಕಿವಿಮಾತು ಹೇಳಿದರು.

ಸಂಕಲ್ಪ ಫೌಂಡೇಶನ್ ಟ್ರಸ್ಟ್‌ ಹಾಗೂ ಸಮುತ್ಕರ್ಷ ಟ್ರಸ್ಟ್ ಸಹಯೋಗದಲ್ಲಿ ಗುರುವಾರ 2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯದಿಂದ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಹೆಚ್ಚಿನ ಜಬಾಬ್ದಾರಿ ಹಾಗೂ ಒತ್ತಡಗಳು ಅಭ್ಯರ್ಥಿಗಳ ಮೇಲೆ ಬೀಳಲಿದೆ. ಸಾರ್ವಜನಿಕ ಸೇವೆಗೆ ಬರಲು ಇಚ್ಚಿಸುವವರು ತಾಳ್ಮೆಯಿಂದ ವರ್ತಿಸುವುದನ್ನು ಕಲಿಯಬೇಕಿದೆ. ಸಾರ್ವಜನಿಕರು ನಿಮ್ಮನ್ನು ಸ್ಫೂರ್ತಿಯಾಗಿ ಕಾಣುತ್ತಾರೆ. ಅವರೊಡನೆ ನೀವು ಪ್ರೀತಿಯಿಂದ ಹಾಗೂ ವಿನಮ್ರತೆಯಿಂದ ವರ್ತಿಸಬೇಕಿದ್ದು, ಅಹಂಕಾರವನ್ನು ಬದಿಗಿಟ್ಟು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ | ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ

ಯುಪಿಎಸ್‌ಸಿ ಮಾಡಿದಾಕ್ಷಣ ನಾವೇ ಎಲ್ಲ ಎಂಬ ಮನೋಭಾವನೆ ಬರಬಾರದು. ನಿಷ್ಠೆ, ಶ್ರದ್ಧೆಯಿಂದ ಸತ್ಯದ ದಾರಿಯಲ್ಲಿ ನಡೆಯಬೇಕು. ಎಷ್ಟೇ ಅಡೆತಡೆಗಳು ಎದುರಾದರೂ ಇದನ್ನು ಪಾಲಿಸಬೇಕು ಎಂದರು. ಈ ವೇಳೆ ಐಪಿಎಸ್ ಸೇವೆಯಲ್ಲಿದ್ದಾಗ ನ್ಯಾಯದ ಪರವೇ ಕಾರ್ಯನಿರ್ವಹಿಸಿದ ಕಾರಣಕ್ಕೆ 18 ಬಾರಿ ವರ್ಗಾವಣೆಯಾಗಿದ್ದನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ರಾಜ್ಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಉಪಸ್ಥಿತರಿದ್ದರು.

ಗಟ್ಟಿ ಮನಸ್ಸು ಇರಬೇಕು

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಒಂದೇ ಬಾರಿಗೆ ಪಾಸ್‌ ಆದವರು ಇದ್ದರೆ, ಮೂರ್ನಾಲ್ಕು ಬಾರಿ ಪರೀಕ್ಷೆಗೆ ಹಾಜರಾಗಿ ಫೇಲಾದವರನ್ನೂ ಕಂಡಿದ್ದೇವೆ. ಮತ್ತೊಂದಿಷ್ಟು ಅಭ್ಯರ್ಥಿಗಳು ಇದೆಲ್ಲ ನಮಗೆ ಆಗುವುದಿಲ್ಲ ಎಂದು ಕೈಚೆಲ್ಲಿ ಕುಳಿತವರನ್ನು ಸಹ ನೋಡಿದ್ದೇವೆ. ಆದರೆ, ಸತತ ಪರಿಶ್ರಮ, ಗುರಿ ಇದ್ದರೆ ಏನು ಬೇಕಾದರೂ ಸಾಧಿಸಬಹುದೆಂದು ಶಿರಸಿ ಮೂಲದ ಮನೋಜ್ ಹೆಗಡೆ ಸೇರಿದಂತೆ ಇತರ ಸಾಧಕರು ತೋರಿಸಿ ಕೊಟ್ಟಿದ್ದಾರೆ. ಈ ಬಗ್ಗೆ ಅವರೆಲ್ಲರೂ ವಿಸ್ತಾರ ನ್ಯೂಸ್‌ ಜತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನಾವು ಗಟ್ಟಿ ಮನಸ್ಸು ಮಾಡಿದರೆ ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದಿರುವ ಮನೋಜ್ ಹೆಗಡೆ 2022ರ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್‌ ಪಡೆದಿದ್ದು, ಐಪಿಎಸ್ ಸೇವೆಯನ್ನು ಆಯ್ದುಕೊಂಡಿದ್ದಾರೆ.

ಸಾಧನೆಗೆ ಅಡ್ಡಿಯಾಗದ ದೃಷ್ಟಿಹೀನತೆ

ದೈಹಿಕ ನ್ಯೂನತೆ ಇದ್ದರೂ ಸಾಧನೆಗೆ ಅದು ಎಂದು ಅಡ್ಡಿಯಾಗಲಾರದೆಂದು ಎರಡೆರಡು ಬಾರಿ ಯುಪಿಎಸ್‌ಸಿ ಪರೀಕ್ಷೆಗೆ ಹಾಜರಾಗಿದ್ದ ಮೇಘನಾ, ಮೊದಲನೇ ಬಾರಿ ಸಿಕ್ಕ 465ನೇ ರ‍್ಯಾಂಕ್‌ನಿಂದ ರಾಜ್ಯ ಸರ್ಕಾರದ ಖಜಾನೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆಯಲ್ಲಿದ್ದುಕೊಂಡೇ ಹೆಚ್ಚಿನ ಶ್ರಮವಹಿಸಿ ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದಾರೆ. ಲಕ್ಷಾಂತರ ಅಭ್ಯರ್ಥಿಗಳ ಪೈಕಿ ಈ ಬಾರಿ 425ನೇ ರ‍್ಯಾಂಕ್‌ ಪಡೆದಿದ್ದಾರೆ. ಆದರೆ, ಇದಕ್ಕೆ ತೃಪ್ತರಾಗದ ಅವರು, “ನಾನು ಮತ್ತೊಮ್ಮೆ ಪರೀಕ್ಷೆ ಹಾಜರಾಗಿ ಸಾಧನೆ ಮಾಡಬೇಕೆಂದಿದ್ದೇನೆ” ಎಂದು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

ದೊಡ್ಡ ಸವಾಲು

“ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ದೊಡ್ಡ ಸವಾಲಿನ ಕೆಲಸ” ಎಂದು 31ನೇ ರ‍್ಯಾಂಕ್‌ ಪಡೆದಿರುವ ದಾವಣಗೆರೆಯ ಅವಿನಾಶ್ ಹೇಳಿದ್ದಾರೆ. “ನಿಷ್ಠೆ, ಗೆಲ್ಲುವ ಛಲ, ನಿಖರವಾದ ಗುರಿ ಜತೆಗೆ ಅದೃಷ್ಟವೂ ಮುಖ್ಯ” ಎಂದು ಹೇಳುವ ಅವಿನಾಶ್‌, ಈಗ ಭಾರತೀಯ ವಿದೇಶಾಂಗ ಸೇವೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ | Motivational | ಮಗನೊಂದಿಗೆ ಓದುತ್ತಾ ಓದುತ್ತಾ ಅಮ್ಮನೂ ಪಿಎಸ್‌ಸಿ ಪರೀಕ್ಷೆ ಪಾಸ್‌ ಮಾಡಿದ್ಳು!

Exit mobile version