Site icon Vistara News

Tippu sultan : ಉರಿ ಗೌಡ, ನಂಜೇಗೌಡರು ಕಾಲ್ಪನಿಕ ಪಾತ್ರ ಅಂದವರಿಗೆ ಮಂಗಳಾರತಿ ಆಗಿದೆ ಎಂದ ಸಿ.ಟಿ ರವಿ

CT Ravi Uri and Nanjegowda

#image_title

ತುಮಕೂರು: ʻʻಯಾರು ಇದುವರೆಗೂ ಉರಿ ಗೌಡ, ನಂಜೇಗೌಡ (Urigowda and Nanjegowda) ಕಾಲ್ಪನಿಕ ಪಾತ್ರಗಳು. ಬಿಜೆಪಿಯವರು ಆ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ಸಿ.ಟಿ ರವಿಗೆ ಕನಸು ಬಿದ್ದಿರಬೇಕು ಅಂತೆಲ್ಲ ಹೇಳುತ್ತಿದ್ದರೋ ಅವರಿಗೆಲ್ಲ ಮಂಗಳಾರತಿ ಆಗಿದೆʼʼ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹೇಳಿದ್ದಾರೆ.

ತುಮಕೂರಿನ ಶಿರಾದಲ್ಲಿ ಮಾತನಾಡಿದ ಅವರು, ʻʻಉರಿಗೌಡ, ನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಮುನಿರತ್ನ ಹಿಂದೆ ಸರಿದಿರುವ ವಿಚಾರ ತಿಳಿಯಿತು. ನಿರ್ಮಲಾನಂದನಾಥ ಸ್ವಾಮೀಜಿಯವರು ನನಗೂ ಫೋನ್ ನಲ್ಲಿ ಮಾತನಾಡಿದ್ರುʼʼ ಎಂದು ಹೇಳಿದರು. ಈ ಇಬ್ಬರು ವ್ಯಕ್ತಿಗಳು ಇದ್ದ ಬಗ್ಗೆ ಸಾಕಷ್ಟು ದಾಖಲೆಗಳಿವೆ ಎಂದು ಸಿ.ಟಿ. ರವಿ ಹೇಳಿದರು.

ʻʻಉರಿ ಗೌಡರು, ನಂಜೇಗೌಡರು ಇದ್ದರು ಎನ್ನುವುದಕ್ಕೆ 40, 50ರ ದಶಕದ ಗ್ರಾಮೋಫೋನ್ ಲಾವಣಿ ಒಂದು ಸಾಕ್ಷಿಯಾಗಿದೆ. ಅದರ ಜತೆಗೆ 1994ರಲ್ಲಿ ದೇ. ಜವರೇಗೌಡ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸುವರ್ಣ ಮಂಡ್ಯ ಅನ್ನೋ ಪುಸ್ತಕದಲ್ಲಿ ಉರಿ ಗೌಡ ಮತ್ತು ನಂಜೇಗೌಡ ಹೇಗೆ ಟಿಪ್ಪುವಿನ ಆಡಳಿತದ ವಿರುದ್ಧ ಸಿಡಿದು ಬಿದ್ದಿದ್ದರು ಎನ್ನುವುದನ್ನು ವಿವರಿಸಲಾಗಿದೆ. ಯೋಗಾಯೋಗ ಎಂದರೆ ಸನ್ಮಾನ್ಯ ದೇವೇಗೌಡರೇ ಆ ಪುಸ್ತಕವನ್ನು ಬಿಡುಗಡೆ ಮಾಡಿದರುʼʼ ಎಂದು ಹೇಳಿದ ಸಿ.ಟಿ. ರವಿ, ನಮ್ಮ ಮಾತೆಲ್ಲ ಸುಳ್ಳು ಎನ್ನುತ್ತಿದ್ದವರಿಗೆ ದಾಖಲೆ ಸಿಕ್ಕಿತಲ್ವಾ? ಮಂಗಳಾರತಿ ಆಯ್ತಲ್ವಾ ಎಂದು ಹೇಳಿದರು.

ʻʻʻದೇವೇಗೌಡರೇ ಸುವರ್ಣ ಮಂಡ್ಯ ಪುಸ್ತಕವನ್ನು ಬಿಡುಗಡೆ ಮಾಡಿದ್ದರಿಂದ ಅವರೀಗ ನಮ್ಮ ಮೇಲೆ ಆರೋಪ ಮಾಡಲು ಆಗುವುದಿಲ್ಲ. ಅವತ್ತು ಚೆಲುವರಾಯ ಸ್ವಾಮಿ ಉಸ್ತುವಾರಿ ಸಚಿವರು, ಎಂ. ಶ್ರೀನಿವಾಸ್ ಮಂಡ್ಯದ ಶಾಸಕರು, ಇದ್ದಿದ್ದು ಜನತಾ ದಳದ ಸರ್ಕಾರ, ಆ ಕಾಲದಲ್ಲೇ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಒಂದಂತೂ ಅವರು ಒಪ್ಪಿಕೊಂಡ ಹಾಗಾಯಿತು, ಇದು ಕಾಲ್ಪನಿಕ ಪಾತ್ರಗಳಲ್ಲ, ಮಂಡ್ಯದ ಜನರ ಸ್ವಾಭಿಮಾನದ ಪ್ರತೀಕವಾಗಿದ್ದಂತಹ ಜನʼʼ ಎಂದು ಹೇಳಿದರು ಸಿ.ಟಿ. ರವಿ.

ʻʻಟಿಪ್ಪು ಸುಲ್ತಾನ್‌ನ್ನು ಯಾರೋ ಅಪರಿಚಿತರು ಹತ್ಯೆ ಮಾಡಿದ್ರು ಅಂತಿದೆ. ಆದರೆ ನಾವು ಪ್ರತಿಪಾದನೆ ಮಾಡ್ತೀವ ಯಾರೋ ಅಪರಿಚಿತರು ಹತ್ಯೆ ಮಾಡಿದ್ದಲ್ಲ. ಉರಿಗೌಡ, ನಂಜೇಗೌಡರೇ ಹತ್ಯೆ ಮಾಡಿದ್ದು. ಅವರಿಗೆ ಇತಿಹಾಸದಲ್ಲಿ ಯಾವ ನ್ಯಾಯ ಕೊಡಬೇಕಾಗಿತ್ತೋ ಅದನ್ನು ಕೊಡಲಾಗಿಲ್ಲ. ಕಾರಣ ಏನು ಅಂದ್ರೆ ಟಿಪ್ಪು ಹತ್ಯೆ ನಂತರ ಶ್ರೀರಂಗ ಪಟ್ಟಣದಲ್ಲಿ ದೊಡ್ಡ ಕೋಮುಗಲಭೆ ನಡೆಯುತ್ತದೆ. ಆ ಸಂದರ್ಭದಲ್ಲಿ ಬ್ರಿಟಿಷರು ದಿವಾನ್ ಪೂರ್ಣಯ್ಯ ನವರನ್ನೇ ಮುಂದಿಟ್ಟುಕೊಂಡು ಕಠೋರವಾಗಿ ಪ್ರತೀಕಾರ ತೀರಿಸಿಕೊಳ್ಳಲು ಸಜ್ಜಾಗಿದ್ದವರನ್ನು ಹತ್ತಿಕ್ಕಿದ್ರುʼʼ ಎಂದು ಹೇಳಿದರು.

ಉರಿ ಗೌಡ, ನಂಜೇಗೌಡ ಅವರ ಪಾತ್ರ ಇತ್ತು, ಅವರಿದ್ದರು ಎನ್ನುವುದು ನಿಜವಾದರೆ, ಉಳಿದ ವಿಚಾರಗಳು ಸಂಶೋಧನೆ ಆಗಲಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು ಸಿ.ಟಿ. ರವಿ.

ಉರಿಗೌಡ, ನಂಜೇಗೌಡರ ಕುರಿತು ಈ ಹಂತದಲ್ಲಿ ಹೆಚ್ಚಿನ ಚರ್ಚೆ ಮಾಡದಂತೆ ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸೂಚನೆ ನೀಡಿದ್ದು, ಇತಿಹಾಸದ ಅಧ್ಯಯನ ನಡೆಯಬೇಕು ಎಂದಿದ್ದಾರೆ.

ಇದನ್ನೂ ಓದಿ : Tippu sultan: ಉರಿಗೌಡ, ನಂಜೇಗೌಡ ಕುರಿತ ಚರ್ಚೆ ತಕ್ಷಣ ನಿಲ್ಲಿಸಿ: ನಿರ್ಮಲಾನಂದನಾಥ ಸ್ವಾಮೀಜಿ ಫರ್ಮಾನು

Exit mobile version