Site icon Vistara News

Urigowda Nanjegowda : ನಿರ್ಮಲಾನಂದನಾಥ ಶ್ರೀಗಳ ವಿರುದ್ಧ ಅಡ್ಡ ಮಾತು: ಕ್ಷಮೆ ಯಾಚಿಸಿದ ಅಡ್ಡಂಡ ಕಾರ್ಯಪ್ಪ

Nirmalanandanatha swameeji addanda Cariappa

#image_title

ಮೈಸೂರು: ಉರಿ ಗೌಡ, ನಂಜೇಗೌಡ (Urigowda Nanjegowda) ವಿವಾದಕ್ಕೆ ಸಂಬಂಧಿಸಿ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಕ್ಷಮೆ ಕೇಳಿದ್ದಾರೆ. ಮೈಸೂರಿನ ಒಕ್ಕಲಿಗ ಸಂಘಟನೆಯವರು ರಂಗಾಯಣಕ್ಕೆ ಮುತ್ತಿಗೆ ಹಾಕಿದ ಬಳಿಕ ಅಡ್ಡಂಡ ಕಾರ್ಯಪ್ಪ ಅವರ ಹೇಳಿಕೆ ಹೊರಬಿದ್ದಿದೆ.

ʻʻನಾನು ನಿರ್ಮಲಾನಂದ ಶ್ರೀಗಳ ಕ್ಷಮೆ ಯಾಚಿಸುತ್ತೇನೆ. ನಿರ್ಮಲಾನಂದನಾಥ ಶ್ರೀಗಳು ನಮ್ಮ ಸಂತರು. ನಮ್ಮ‌ ನಾಡಿನ ಹೆಮ್ಮೆಯ ಸಂತರು. ನಾನು ಅವರ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಅವರಿಗೆ ಅಪಮಾನ ಮಾಡುವಂತಹ ಕೆಲಸ ಮಾಡಿಲ್ಲ. ಆ ಹೇಳಿಕೆಯನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆʼʼ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ʻʻನನಗೆ ಒಕ್ಕಲಿಗರ ಮೇಲೆ ಅಪಾರ ಪ್ರೀತಿ ಇದೆ. ನಾನು ಎಂದೂ ಒಕ್ಕಲಿಗರ ವಿರೋಧಿಯಲ್ಲ. ನಾನು ನಿರ್ಮಲಾನಂದ ಶ್ರೀಗಳ ಪರಮ ಭಕ್ತʼʼ ಎಂದಿರುವ ಅಡ್ಡಂಡ ಕಾರ್ಯಪ್ಪ ಅವರು, ನಾನು ಅವರ ಭಕ್ತ ಕೋಟಿಗಳಿಗೆ ಕ್ಷಮೆ ಕೇಳಲ್ಲ.
ನಾನು ನಿರ್ಮಲಾನಂದ ಶ್ರೀಗಳಿಗೆ ಮಾತ್ರ ಕ್ಷಮೆ ಯಾಚಿಸುವೆ ಎಂದೂ ಹೇಳಿದ್ದಾರೆ.

ವಿವಾದ ಸೃಷ್ಟಿಸಿದ್ದ ಅಡ್ಡಂಡ ಹೇಳಿಕೆ

ಉರಿ ಗೌಡ, ನಂಜೇಗೌಡ ವಿವಾದದ ಬಗ್ಗೆ ಯಾವುದೇ ಚರ್ಚೆ ಮಾಡಬಾರದು ಎಂಬ ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದು ತಪ್ಪು ಎಂದು ಅಡ್ಡಂಡ ಕಾರ್ಯಪ್ಪ ಅವರು ಗುರುವಾರ ವಿಸ್ತಾರ ನ್ಯೂಸ್‌ ಜತೆ ಮಾತನಾಡುತ್ತಾ ಆಕ್ಷೇಪ ವ್ಯಕ್ತಪಡಿಸಿದದರು.

ʻʻಸ್ವಾಮೀಜಿಗಳ ಬಗ್ಗೆ ನನಗೆ ಗೌರವ ಇದೆ. ಆದರೆ ಉರಿಗೌಡ, ನಂಜೇಗೌಡ ಚರ್ಚೆ ನಡೆಯದಂತೆ ಮಾಡಿದ್ದು ಸರಿಯಲ್ಲ. ಈ ಬಗ್ಗೆ ಸಂಶೋಧನೆ ನಡೆಯಲಿ ಅನ್ನಬೇಕಿತ್ತುʼʼ ಎಂದು ಅಡ್ಡಂಡ ಹೇಳಿದ್ದರು.

ʻʻಅವರು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸ್ವಾಮೀಜಿ. ಬೇರೆ ಜಾತಿಗಳಿಗೆ ಅಲ್ಲ. ಒಕ್ಕಲಿಗ ಸಮುದಾಯದ ರಕ್ಷಣೆ ಮಾಡುವುದು ಅವರ ಕೆಲಸ. ಹಾಗಂತ ಉರಿಗೌಡ, ನಂಜೇಗೌಡರ ಕುರಿತು ಚರ್ಚೆ ನಡೆಯಲೇಬಾರದು ಎಂದು ಹೇಳಿದ್ದು ಸರಿಯಲ್ಲʼʼ ಎಂದಿದ್ದರು.

ʻʻಸ್ವಾಮೀಜಿಗಳು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರ ಬೆನ್ನಿಗೆ ನಿಂತರು. ಆಗಾಗ ಡಿ.ಕೆ.ಶಿವಕುಮಾರ್ ಅವರನ್ನು ಕರೆದು ಕುಮಾರಸ್ವಾಮಿ ನಮ್ಮವ, ಅವರ ಸರ್ಕಾರ ಬೀಳದಂತೆ ನೋಡಿಕೋ ಎಂದು ಹೇಳಿದ್ದರುʼʼ ಎಂದು ಗಂಭೀರ ಆರೋಪ ಮಾಡಿರುವ ಅವರು, ಅವರಿಗೆ ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಮಾತ್ರ ಒಕ್ಕಲಿಗ ನಾಯಕರು. ಸಿ.ಟಿ.ರವಿ, ಅಶ್ವತ್ಥ ನಾರಾಯಣ ಅವರೆಲ್ಲ ಅದೇ ಸಮುದಾಯದವರಾದರೂ ಸ್ವಾಮೀಜಿಗೆ ಬೇಕಿಲ್ಲ ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು.

ವಿಷಾದ ವ್ಯಕ್ತಪಡಿಸಿದ್ದ ಅಡ್ಡಂಡ

ಅಡ್ಡಂಡ ಕಾರ್ಯಪ್ಪ ಅವರ ಹೇಳಿಕೆ ವಿಸ್ತಾರ ನ್ಯೂಸ್‌ನಲ್ಲಿ ಪ್ರಕಟವಾಗಿ ಭಾರಿ ಸದ್ದು ಮಾಡಿತ್ತು. ಅವರ ಹೇಳಿಕೆಗೆ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಈ ನಡುವೆ ಗುರುವಾರ ರಾತ್ರಿ ವಿಸ್ತಾರ ನ್ಯೂಸ್‌ನ ನ್ಯೂಸ್‌ ಫ್ರಂಟ್‌ಲೈನ್‌ ವಿತ್‌ ಎಚ್‌ಪಿಕೆ ಕಾರ್ಯಕ್ರಮದಲ್ಲಿ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರ ಜತೆ ಮಾತನಾಡಿದ್ದ ಅಡ್ಡಂಡ ಅವರು ಮೊದಲು ತಮ್ಮ ಹೇಳಿಕೆಯನ್ನು ಸಮರ್ಥಿಸಿದರಾದರೂ ಅಂತಿಮವಾಗಿ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ನುಡಿದಿದ್ದರು. ಆದರೆ, ವಿವಾದ ತಣ್ಣಗಾಗುವ ಲಕ್ಷಣ ಕಾಣಿಸದೆ ಇದ್ದಾಗ ಈಗ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ : Urigowda Nanjegowda : ಚುಂಚಶ್ರೀಗಳ ಬಗ್ಗೆ ಅಡ್ಡ ಮಾತು; ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ


Exit mobile version