Site icon Vistara News

Urigowda Nanjegowda : ಚುಂಚಶ್ರೀಗಳ ಬಗ್ಗೆ ಅಡ್ಡ ಮಾತು; ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಒಕ್ಕಲಿಗರ ಸಂಘ ಯತ್ನ

Addanda Cariappa protest

#image_title

ಮೈಸೂರು: ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ ರಂಗಾಯಣ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ (Addanda c Cariappa) ಅವರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಶುಕ್ರವಾರ ಒಕ್ಕಲಿಗ ಸಂಘಟನೆಯ ವತಿಯಿಂದ ಮೈಸೂರಿನ ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಆದರೆ, ಪೊಲೀಸರು ಅದಕ್ಕೆ ಅವಕಾಶ ಕೊಡದೆ ಇದ್ದಾಗ ಪ್ರತಿಭಟನೆ ಬೇರೆ ಸ್ವರೂಪವನ್ನು ಪಡೆದುಕೊಂಡಿತು.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಒಕ್ಕಲಿಗ ಯೋಧರಾದ ಉರಿಗೌಡ ಮತ್ತು ನಂಜೇಗೌಡ (Urigowda Nanjegowda) ಅವರು ಟಿಪ್ಪು ಸುಲ್ತಾನ್‌ನ್ನು ಕೊಂದವರು ಎಂಬ ಪ್ರಚಾರ, ಅದಕ್ಕೆ ಸಂಬಂಧಿಸಿ ರಾಜಕೀಯ ಏರುಗತಿಯನ್ನು ಕಂಡಾಗ, ಸಚಿವ ಮುನಿರತ್ನ ಅವರು ಸಿನಿಮಾವೊಂದನ್ನು ನಿರ್ಮಿಸಲು ಮುಂದಾದಾಗ ಮಧ್ಯ ಪ್ರವೇಶಿಸಿದ ಆದಿಚುಂಚನಗಿರಿ ಶ್ರೀಗಳು ಈ ಬಗೆಗಿನ ಚರ್ಚೆಯನ್ನು ಮುಂದುವರಿಸಬಾರದು ಎಂದು ತಾಕೀತು ಮಾಡಿದ್ದರು.

ʻʻಸಿ.ಟಿ ರವಿ ಇರಬಹುದು, ಅಶ್ವತ್ಥ ನಾರಾಯಣ ಅವರಿರಬಹುದು, ಗೋಪಾಲಯ್ಯ ಅವರಿರಬಹುದು, ಈ ವಿಷಯದಲ್ಲಿ ಯಾರೆಲ್ಲ ಮಾತನಾಡುತ್ತಿದ್ದಾರೋ ಅವರೆಲ್ಲರಿಗೂ ಇತಿಹಾಸದ ಹಿನ್ನೆಲೆಯನ್ನು ಮನದಟ್ಟು ಮಾಡಿಕೊಟ್ಟಿದ್ದರಿಂದ ಅವರೆಲ್ಲರೂ ಸುಮ್ಮನಾಗಬೇಕು, ಸುಮ್ಮನಾಗಿದ್ದಾರೆ ಎಂದು ಭಾವಿಸಿದ್ದೇನೆ. ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ ಆಗುತ್ತದೆ, ಶಾಸನಗಳು ಮತ್ತು ಇತಿಹಾಸದ ಹಿನ್ನೆಲೆಯನ್ನು ಇಟ್ಟುಕೊಂಡು ಬರೆದಿರುವುದು ಮುಂದಿನ ಪೀಳಿಗೆಗೆ ಒಂದಿಷ್ಟು ಶಕ್ತಿಯಾಗುತ್ತದೆ. ಅಂತಹುದ್ಯಾವುದೂ ಇದುವರೆಗೆ ಕಂಡುಬಾರದೆ ಇರುವುದರಿಂದ ಹೇಳಿಕೆಗಳ ಮೂಲಕ ಯುವಕರಲ್ಲಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡಿ ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಹುದು, ಸಮುದಾಯಕ್ಕೆ ಧಕ್ಕೆಯನ್ನು ಕೂಡಾ ತರಬಾರದುʼʼ ಎಂದು ನಿರ್ಮಲಾನಂದನಾಥ ಶ್ರೀಗಳು ಹೇಳಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ರಂಗಾಯಣ ನಿರ್ದೇಶಕ ಅಡ್ಡಡ್ಡ ಕಾರ್ಯಪ್ಪ ಅವರು, ಶ್ರೀಗಳು ಉರಿ ಗೌಡ ನಂಜೇಗೌಡ ಚರ್ಚೆಯನ್ನು ತಡೆದದ್ದು ತಪ್ಪು ಎಂದಿದ್ದರು. ಅವರು ಕೇವಲ ಒಕ್ಕಲಿಗ ಸಮಾಜದ ಗುರುಗಳು, ಇಡೀ ಸಮಾಜಕ್ಕಲ್ಲ ಎಂದಿದ್ದರು. ಜತೆಗೆ ಶ್ರೀಗಳು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಒಕ್ಕಲಿಗ ನಾಯಕರ ಪರವಾಗಿದ್ದಾರೆ. ಬಿಜೆಪಿಯ ಒಕ್ಕಲಿಗ ನಾಯಕರ ಬಗ್ಗೆ ತಾರತಮ್ಯ ಧೋರಣೆ ಹೊಂದಿದ್ದಾರೆ ಎಂದು ಹೇಳಿದ್ದರು.

ಇದರ ವಿರುದ್ಧ ಒಕ್ಕಲಿಗರ ಸಂಘಟನೆಗಳು ಸಿಡಿದೆದ್ದಿವೆ. ಶುಕ್ರವಾರ ಮುಂಜಾನೆ ಒಕ್ಕಲಿಗರ ಸಂಘಟನೆ ವತಿಯಿಂದ ಮೈಸೂರಿನ ರಂಗಾಯಣ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಆದರೆ, ಪೊಲೀಸರು ಅವರನ್ನು ಗೇಟಿನಲ್ಲೇ ತಡೆದರು. ಇದು ಒಕ್ಕಲಿಗರಿಗೆ ಮಾಡಿರುವ ಮತ್ತೊಂದು ಅಪಮಾನ ಎಂದು ಪ್ರತಿಭಟನಾಕಾರರು ಮತ್ತಷ್ಟು ಗರಂ ಆದರು. ಒಕ್ಕಲಿಗ ಮುಖಂಡರು- ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ʻʻಅಡ್ನಾಡಿ ಕಾರ್ಯಪ್ಪಗೆ ಧಿಕ್ಕಾರ, ದುರಹಂಕಾರಿ ಕಾರ್ಯಪ್ಪಗೆ ಧಿಕ್ಕಾರʼ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ʻʻಸರ್ಕಾರಿ ಸವಲತ್ತು ಪಡೆದುಕೊಂಡು ಸ್ವಾಮೀಜಿ ವಿರುದ್ಧ ಮಾತನಾಡಿದ್ದಾರೆ. ಅವರನ್ನು ನಾವು ಪ್ರಶ್ನೆ ಮಾಡಬೇಕು. ನಮ್ಮನ್ನು ಒಳಗೆ ಬಿಡಿ. ಗೇಟ್‌ನಲ್ಲಿ ನಿಲ್ಲಿಸಿರುವುದೇ ಅಪಮಾನʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ, ಪೊಲೀಸರು ಒಳಗೆ ಹೋಗಲು ಅವಕಾಶ ನೀಡಲಿಲ್ಲ. ರಂಗಾಯಣಕ್ಕೆ ಪ್ರವೇಶಾವಕಾಶ ನಿರಾಕರಿಸಿದ ಪೊಲೀಸರು, ಅವರನ್ನು ಗೇಟ್‌ನಲ್ಲಿ ಬಂಧಿಸಿ ಕರೆದುಕೊಂಡು ಹೋದರು. ಅಡ್ಡಂಡ ಕಾರ್ಯಪ್ಪ ಭೇಟಿಗೆ ಅವಕಾಶ ನಿರಾಕರಣೆ ಮಾಡಿದ್ದರಿಂದ ಆಕ್ರೋಶ ಜೋರಾಗಿದೆ. ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ : Urigowda Nanjegowda : ಅವರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ; ಉರಿ ಗೌಡ, ನಂಜೇಗೌಡ ಚರ್ಚೆ ತಡೆದ ಚುಂಚಶ್ರೀಗಳ ವಿರುದ್ಧ ಸಿಡಿದ ಅಡ್ಡಂಡ

Exit mobile version