ಮೈಸೂರು: ಟಿಪ್ಪು ಸುಲ್ತಾನ್‌ನನ್ನು ಕೊಂದು ಹಾಕಿದ್ದರು ಎಂದು ಹೇಳಲಾಗುತ್ತಿರುವ ಮಂಡ್ಯ ಜಿಲ್ಲೆಯ ಮಳವಳ್ಳಿಯ ಒಕ್ಕಲಿಗ ಯೋಧರೆಂದು ಹೇಳಲಾದ ಉರಿಗೌಡ ಮತ್ತು ನಂಜೇಗೌಡರು (Urigowda Nanjegowda) ಹೇಗಿದ್ದರು ಎಂಬುದನ್ನು ತೋರಿಸುವ ಚಿತ್ರಗಳ ಬಗ್ಗೆ ಭಾರಿ ವಾದ ವಿವಾದಗಳಿವೆ. ಯಾರ್ಯಾರದೋ ಚಿತ್ರ ತೋರಿಸಿ ಇವರು ಉರಿ ಗೌಡ, ನಂಜೇಗೌಡ ಎಂದು ಹೇಳುತ್ತಿದ್ದೀರಿ ಎಂದು ಬಿಜೆಪಿಯವರನ್ನು ಕಾಂಗ್ರೆಸ್, ಜೆಡಿಎಸ್ ಮತ್ತು ಸಾರ್ವಜನಿಕರು ಗೇಲಿ ಮಾಡುತ್ತಿದ್ದರು. ಇದೀಗ ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಅವರು ಹೊಸ ಚಿತ್ರವನ್ನು ಬಿಡುಗಡೆ ಮಾಡಿ ಉರಿ ಗೌಡ, ನಂಜೇಗೌಡರ ನಿಜ ರೂಪ ಇದು ಎಂದು ಹೇಳಿದ್ದಾರೆ.
ʻಟಿಪ್ಪು ನಿಜ ಕನಸುಗಳುʼ ಎಂಬ ನಾಟಕ ಬರೆದು ಈಗ ರಾಜ್ಯದ ನಾನಾ ಕಡೆಗಳಲ್ಲಿ ಪ್ರದರ್ಶನ ಮಾಡುತ್ತಿರುವ ಅಡ್ಡಂಡ ಕಾರ್ಯಪ್ಪ ಅವರು ʻಇದುವೇ ಉರಿ ಉರಿಗೌಡ, ನಂಜೇಗೌಡ ನಿಜರೂಪ ದರ್ಶನʼ ಎಂದು ಹೇಳಿ ಫೋಟೊವನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರದಲ್ಲಿ ಹಿಂದೆ ಇದ್ದ ಕತ್ತಿ ಬದಲು ಬಂದೂಕು ಬಂದಿದೆ!
ಕೈಯಲ್ಲಿ ಬಂದೂಕು ಹಿಡಿದಿರುವ ಇವರ ಚಿತ್ರಗಳನ್ನು ಹಾಕಿ ರಾಜ್ಯದಲ್ಲಿ ಸುದ್ದಿಯಲ್ಲಿರುವ ಪಾತ್ರಗಳು ಎಂದು ಪೋಸ್ಟ್ ಹಾಕಿದ್ದಾರೆ ಅಡ್ಡಂಡ ಕಾರ್ಯಪ್ಪ. ʻʻಟಿಪ್ಪು ನಿಜ ಕನಸುಗಳುʼ ನಾಟಕದ ಪಾತ್ರಧಾರಿಗಳ ಚಿತ್ರಗಳನ್ನೇ ಹರಿಬಿಟ್ಟಿರುವ ಕಾರ್ಯಪ್ಪ ಅವರು ಮುಂದೆ ಇದೇ ಚಿತ್ರಗಳನ್ನು ಉರಿ ಗೌಡ, ನಂಜೇಗೌಡ ಅವರ ಬ್ರ್ಯಾಂಡ್ ಚಿತ್ರಗಳಾಗಿ ಮುಂದುವರಿಸಲು ಚಿಂತನೆ ನಡೆಸಿದ್ದಾರೆ.
ಚಿತ್ರಗಳ ಬಗ್ಗೆ ಸಾಕಷ್ಟು ಗೊಂದಲವಿತ್ತು
ಉರಿ ಗೌಡ, ನಂಜೇಗೌಡರದೆಂದು ಹೇಳಲಾದ ಚಿತ್ರಗಳ ಬಗ್ಗೆ ಭಾರಿ ಆಕ್ಷೇಪ ಮತ್ತು ಅವಹೇಳನ ಎದುರಾಗಿತ್ತು. ಕತ್ತಿ ಹಿಡಿದ ಯೋಧರ ಫೋಟೊಗಳು ತಮಿಳುನಾಡಿನ ಮುರುದು ಸಹೋದರರದು ಎಂದು ಹಲವು ಸಂಶೋಧನೆ ಮಾಡಿದ್ದರು. ಪೆರಿಯ ಮರುದು, ಚಿನ್ನ ಮರುದು ಫೋಟೊಗಳನ್ನೇ ಅದೇ ಪಾತ್ರಗಳನ್ನು ಉರಿಗೌಡ, ನಂಜೇಗೌಡ ಎಂದು ಬಿಂಬಿಸಲಾಗಿದೆ ಎಂದು ಗೇಲಿ ಮಾಡಲಾಗಿತ್ತು.
ಇದೀಗ ಅಡ್ಡಂಡ ಕಾರ್ಯಪ್ಪ ಅವರು ಫೋಟೊ ಗೊಂದಲ ಬಗೆಹರಿಸಲು ನಾಟಕದ ಪಾತ್ರಧಾರಿಗಳ ಫೋಟೊ ಹಂಚಿಕೆ ಮಾಡಿದ್ದಾರೆ. ಜತೆಗೆ ಈ ಚಿತ್ರಗಳ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ.
ಯಾಕೆ ಈ ಚಿತ್ರಗಳು: ಅಡ್ಡಂಡ ವಿವರಣೆ ಏನು?
ʻʻಇದು ನನ್ನ ಕಲ್ಪನೆಯಲ್ಲಿ ಮೂಡಿದ ಚಿತ್ರಗಳು. ಮುಂದೆಯೂ ಪಾತ್ರಧಾರಿಗಳ ಫೋಟೊ ಅಂತಲೇ ಬಳಸಬೇಕೆಂಬುದು ಬಯಸುತ್ತೇನೆʼʼ ಎಂದು ವಿಸ್ತಾರ ನ್ಯೂಸ್ಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ʻʻಟಿಪ್ಪು ಕಾಲದಲ್ಲಿ ಫೋಟೊಗ್ರಫಿ ಇರಲಿಲ್ಲ. ಟಿಪ್ಪು ಅರ್ಧ ಮುಖವುಳ್ಳ ಒಂದಿಷ್ಟು ಪೇಂಟಿಂಗ್ಗಳಿವೆ. ಉರಿಗೌಡ, ನಂಜೇಗೌಡ ಫೋಟೋ ಕೂಡ ಇಲ್ಲ. ತಮಿಳುನಾಡಿನ ಹೋರಾಟಗಾರರ ಫೋಟೊವನ್ನು ಇದುವರೆಗೆ ಬಳಸಲಾಗುತ್ತಿತ್ತು. ಆ ಗೊಂದಲ ತಪ್ಪಿಸುವ ಉದ್ದೇಶದಿಂದ ಪಾತ್ರಧಾರಿಗಳ ಫೋಟೊ ಹಂಚಿಕೊಂಡಿದ್ದೇನೆʼʼ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ. ಅಡ್ಡಂಡ ಅವರು ಸಾಕಷ್ಟು ಅಧ್ಯಯನ ನಡೆಸಿದ ನಾಟಕದ ಪಾತ್ರಗಳ ದಿರಸನ್ನು ಅಂತಿಮಗೊಳಿಸಿದ್ದರು ಎಂದು ಹೇಳಲಾಗಿದೆ.