ಮಂಡ್ಯ: ಆದಿಚುಂಚನಗಿರಿ ಮಠದ ಸ್ವಾಮೀಜಿಯವರು ಗುಟುರು ಹಾಕಿದ ಬಳಿಕ ರಾಜ್ಯ ರಾಜಕಾರಣದಿಂದ ಸ್ವಲ್ಪ ದಿನ ಕಣ್ಮರೆಯಾಗಿದ್ದ ಉರಿ ಗೌಡ ಮತ್ತು ನಂಜೇಗೌಡ (Urigowda Nanjegowda) ಮತ್ತೆ ಪ್ರತ್ಯಕ್ಷರಾಗಿದ್ದಾರೆ.
ಮಂಡ್ಯ ಜಿಲ್ಲೆಯು ಪಾಂಡವಪುರದಲ್ಲಿ ನಡೆದ ಬಿಜೆಪಿಯ ರೈತ ಮೋರ್ಚಾದ ರೈತ ಸಮಾವೇಶದ ಪ್ರವೇಶ ದ್ವಾರದಲ್ಲೇ ಅವರ ಹೆಸರು ಮತ್ತು ಚಿತ್ರಗಳನ್ನು ಹಾಕಲಾಗಿದೆ. ಇಡೀ ಕಾರ್ಯಕ್ರಮದ ಪ್ರವೇಶ ದ್ವಾರಕ್ಕೆ ಉರಿ ಗೌಡ-ದೊಡ್ಡನಂಜೇಗೌಡ ದ್ವಾರ ಎಂದೇ ಹೆಸರಡಿಸಲಾಗಿದೆ. ಪಟ್ಟಣದ TAPCMSನ ಪ್ರವೇಶ ದ್ವಾರಕ್ಕೆ ಉರೀಗೌಡ ನಂಜೇಗೌಡ ಹೆಸರಿನ ಫ್ಲೆಕ್ಸ್ ಹಾಕಲಾಗಿದೆ. ಇದು ಬಿಜೆಪಿ ಉರಿ ಗೌಡ ನಂಜೇಗೌಡರ ಹೆಸರನ್ನು ಮತ್ತು ಈ ಕುರಿತ ಚರ್ಚೆಯನ್ನು ಬಿಡಲು ಸಿದ್ಧವಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಒಕ್ಕಲಿಗ ಯೋಧರಾದ ಉರಿಗೌಡ ಮತ್ತು ನಂಜೇಗೌಡ ಅವರು ಟಿಪ್ಪುವನ್ನು ಕೊಂದ ವೀರರು, ಈ ಇತಿಹಾಸವನ್ನು ಮರೆಮಾಚಲಾಗಿದೆ ಎಂದು ಬಿಜೆಪಿ ವಾದಿಸುತ್ತಿದೆ. ಕೆಲವು ವಾರದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಮಂಡ್ಯದ ಹೆದ್ದಾರಿಯಲ್ಲಿ ಉರೀಗೌಡ- ನಂಜೇಗೌಡರ ಹೆಸರಿನ ದ್ವಾರವನ್ನು ನಿರ್ಮಿಸಲಾಗಿತ್ತು.
ಆದರೆ, ಇದು ವಿವಾದಕ್ಕೆ ತಿರುಗಿದ ಬಳಿಕ ಜಿಲ್ಲಾಡಳಿತ ಅದನ್ನು ತೆರವುಗೊಳಿಸಿತ್ತು. ಯಾವ ಆಧಾರದಲ್ಲಿ ಉರಿ ಗೌಡ ಮತ್ತು ನಂಜೇಗೌಡರ ಹೆಸರು ಹೇಳುತ್ತಿದ್ದೀರಿ ಎಂದು ಕೇಳಿದಾಗ ಬಿಜೆಪಿಗೆ ಹಿನ್ನಡೆಯಾಗಿತ್ತು. ಆದರೆ, ಒಂದೆರಡು ದಿನದಲ್ಲಿ 2006ರಲ್ಲಿ ಪ್ರಕಟವಾದ ದೇಜವರೇಗೌಡ ಅವರು ಸಂಪಾದಿಸಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ ಒಂದು ಪುಸ್ತಕದಲ್ಲಿ ಉರಿ ಗೌಡ ಮತ್ತು ನಂಜೇಗೌಡರ ಉಲ್ಲೇಖ ಕಂಡುಬಂದಾಗ ಬಿಜೆಪಿ ಮತ್ತೆ ಚಿಗಿತುಕೊಂಡಿತ್ತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರಿಕಾಗೋಷ್ಠಿ ನಡೆಸಿ, ಈ ಪುಸ್ತಕವನ್ನು ಮನೆ ಮನೆಗೆ ತಲುಪಿಸಲಾಗುವುದು, ಉರಿ ಗೌಡ ಮತ್ತು ನಂಜೇಗೌಡರ ಪ್ರತಿಮೆಗಳನ್ನು ಅವರ ಊರಿನಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. ಅದೇ ಹೊತ್ತಿಗೆ ಸಚಿವ ಮುನಿರತ್ನ ಅವರು ತಾನೊಂದು ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರು ಮುನಿರತ್ನ ಅವರನ್ನು ಕರೆಸಿಕೊಂಡು ಬುದ್ಧಿ ಹೇಳಿದ್ದರು. ಜತೆಗೆ ಯಾರೂ ಕೂಡಾ ಈ ಕುರಿತ ಚರ್ಚೆಯನ್ನು ಅನಗತ್ಯವಾಗಿ ಮುಂದುವರಿಸಬಾರದು. ಇದಕ್ಕೆ ಸದ್ಯಕ್ಕೆ ಯಾವುದೆ ದಾಖಲೆ ಇದ್ದಂತಿಲ್ಲ. ದಾಖಲೆ ಇದ್ದರೆ ಮಠಕ್ಕೆ ತಂದುಕೊಡಬಹುದು ಎಂದಿದ್ದರು. ಆ ಬಳಿಕ ಚರ್ಚೆ ಸ್ವಲ್ಪ ತಣ್ಣಗಾಗಿತ್ತು.
ನಡುನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಇದರ ಬಹಿರಂಗ ಚರ್ಚೆ ಅಗತ್ಯ ಎಂದು ಪ್ರತಿಪಾದಿಸಿದ್ದರು. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರಂತೂ ಚರ್ಚೆಯನ್ನು ತಡೆದ ಶ್ರೀಗಳ ವಿರುದ್ಧವೇ ಕೆಂಡ ಕಾರಿದರು. ಶ್ರೀಗಳು ಜೆಡಿಎಸ್ ಪಕ್ಷದ ಪರವಾಗಿದ್ದಾರೆ ಎಂದು ಆಪಾದಿಸಿದ್ದರು. ಕೊನೆಗೆ ಅವರು ಕ್ಷಮೆ ಯಾಚಿಸಿದರಾದರೂ ವಿವಾದ ಇನ್ನೂ ಜೀವಂತವಾಗಿದೆ.
ಇದೀಗ ಉರಿಗೌಡ ನಂಜೇಗೌಡ ಹೆಸರಿನ ದ್ವಾರದ ವಿವಾದ ಪಾಂಡವಪುರಕ್ಕೂ ಕಾಲಿಟ್ಟಿದೆ. ವಿಶೇಷವೆಂದರೆ ಈ ಕಾರ್ಯಕ್ರಮದ ಸ್ವಾಗತ ಫ್ಲೆಕ್ಸ್‌ನಲ್ಲಿ ಶೋಭಾ ಕರಂದ್ಲಾಜೆ ಅವರೂ ರಾರಾಜಿಸುತ್ತಿದ್ದಾರೆ.
ಇದನ್ನೂ ಓದಿ : Urigowda Nanjegowda : ನಿರ್ಮಲಾನಂದನಾಥ ಶ್ರೀಗಳ ವಿರುದ್ಧ ಅಡ್ಡ ಮಾತು: ಕ್ಷಮೆ ಯಾಚಿಸಿದ ಅಡ್ಡಂಡ ಕಾರ್ಯಪ್ಪ