ಬೆಂಗಳೂರು: ಬ್ರಿಟನ್ ಪ್ರಧಾನಿಯಾಗಿ ಬೆಂಗಳೂರಿನ ಅಳಿಯ ರಿಷಿ ಸುನಕ್ ಆಯ್ಕೆ ಯಾಗಿರುವುದರಿಂದ ಕನ್ನಡಿಗರು ಖುಷಿಯಲ್ಲಿರುವ ಸಂದರ್ಭದಲ್ಲಿಯೇ ಅಮೆರಿಕದಿಂದಲೂ ಕನ್ನಡಿಗರು ಖುಷಿ ಪಡುವಂತಹ ಸುದ್ದಿಯೊಂದು ಬಂದಿದೆ.
ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ನವೆಂಬರ್ 1 ಅನ್ನು “ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ” ವಾಗಿ ಆಚರಿಸಲು ನಿರ್ಧರಿಸಲಾಗಿದೆ. ವಿಸ್ಕಾನ್ಸಿನ್ ರಾಜ್ಯಪಾಲ ಟೋನಿ ಎವರ್ಸ್ ಈ ಸಂಬಂಧ ಆದೇಶ ಹೊರಡಿಸಿದ್ದು, ಆದೇಶದಲ್ಲಿ ಕನ್ನಡ ಭಾಷೆ ನಾಡು ನುಡಿಯ ಗುಣಗಾನ ಮಾಡಲಾಗಿದೆ.
ಕೆಳೆದ ವರ್ಷ ಅಮೆರಿಕದ ಜಾರ್ಜಿಯಾದಲ್ಲಿ ನವೆಂಬರ್ 1 ಅನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗಿತ್ತು. ಈ ವರ್ಷ ವಿಸ್ಕಾನ್ಸಿನ್‌ನಲ್ಲಿ ಆಚರಿಸಲಾಗುತ್ತದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಭಾರತದ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೆ, ಪ್ರಪಂಚದಾದ್ಯಂತ ಬಳಸಲಾಗುತ್ತದೆ. ಇಲ್ಲಿಯ ಕನ್ನಡಿಗರ ಸಮುದಾಯವು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಇವರನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗವರ್ನರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ವಿಸ್ಕಾನ್ಸಿನ್‌ನಲ್ಲಿನ ಮಿಲನ ಕನ್ನಡ ಕೂಟ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಹಲವಾರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಮುಂದಿನ ಪೀಳಿಗೆಗೆ ಕನ್ನಡವನ್ನು ಕಲಿಸಲು, ಶಾಲೆಗಳಲ್ಲಿ ಭಾಷೆ ಕಲಿಸುವ, ಸಾಂಸ್ಕೃತಿಕ ಕಾರ್ಯಕ್ರಮ, ಕಾರ್ಯಗಾರಗಳನ್ನು ಏರ್ಪಡಿಸುವ ಕೆಲಸ ಮಾಡುತ್ತಿದೆ. “ಮಿಲನ-ಮಿಲ್ವಾಕಿ ಕನ್ನಡ ಕಲಿʼʼ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಎಲ್ಲರ ಮನೆಯ ಮೇಲೆ ಕನ್ನಡಧ್ವಜ ಹಾರಿಸೋಣ; ನಾಡೋಜ ಡಾ.ಮಹೇಶ ಜೋಶಿ ಕರೆ