ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ಸಂಬಂಧಪಟ್ಟಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಸರ್ಕಾರದ ಫೋಟೊ ಪಬ್ಲಿಸಿಟಿಯನ್ನು (Photo Publicity) ಕುಟುಕಿದ್ದಾರೆ. ಉಚಿತ ವಿದ್ಯುತ್ (Free Electricity) ಕೊಟ್ಟಿದ್ದಕ್ಕೆ ಫೋಟೊ ಹಾಕಿಕೊಳ್ಳುತ್ತಿದ್ದೀರಿ. ಅದರಂತೆ ವಿದ್ಯುತ್ ದರ ಏರಿಕೆ ಮಾಡಿದ್ದಕ್ಕೂ ಫೋಟೊ ಹಾಕಿ ಎಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಾವು ಅದು ಮಾಡಿದೆವು, ಇದು ಮಾಡಿದೆವು ಎಂದೆಲ್ಲ ಫೋಟೊವನ್ನು ಹಾಕುತ್ತೀರಿ. ಆದರೆ, ವಿದ್ಯುತ್ ದರ ಏರಿಕೆ ಮಾಡಿದ್ದಕ್ಕೆ ಯಾಕೆ ಫೋಟೊ ಹಾಕಿಲ್ಲ. ಅದನ್ನೂ ನಾವು ಮಾಡಿದ್ದೇವೆಂದು ಫೋಟೊ ಹಾಕಬಹುದಲ್ಲವಾ? ಎಂದು ಪ್ರಶ್ನೆ ಮಾಡಿದ್ದಾರೆ.
ವಿದ್ಯುತ್ ಅನ್ನು ಉಚಿತವಾಗಿ ಕೊಡುತ್ತಿದ್ದೇವೆಂದು ಹೇಳಿದ್ದೀರಿ. ಅದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar), ಇಂಧನ ಸಚಿವ ಕೆ.ಜೆ. ಜಾರ್ಜ್ (Power Minister KJ George) ಫೋಟೊವನ್ನು ಹಾಕಲಾಗಿದೆ. ಅದೇ ರೀತಿಯಾಗಿ ವಿದ್ಯುತ್ ದರ ಏರಿಕೆ ಆಗಿದೆ. ಅದಕ್ಕೂ ನಿಮ್ಮೆಲ್ಲರ ಫೋಟೊ ಹಾಕಿ ಎಂದು ಸದನದಲ್ಲಿ ಹೇಳಿದ್ದಾರೆ.
ಇದಕ್ಕೆ ಕಾಂಗ್ರೆಸ್ ಶಾಸಕರು (Congress MLAs) ಆಕ್ಷೇಪ ವ್ಯಕ್ತಪಡಿಸಿ, ವಿದ್ಯುತ್ ದರವನ್ನು ಏರಿಕೆ ಮಾಡಿದ್ದು ನಾವಲ್ಲ. ಅದು ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಎಚ್.ಡಿ. ಕುಮಾರಸ್ವಾಮಿ, ಸರಿ ಯಾರು ಮಾಡಿದ್ದೀರೋ ಅವರ ಫೋಟೊವನ್ನೇ ಹಾಕಿ. ಕಾರಣರಾದವರ ಫೋಟೊವನ್ನು ಬಳಸಿ ಎಂದು ಹೇಳಿದರು.
ಶಕ್ತಿ ಯೋಜನೆಗೂ (Shakti Scheme) ತಿವಿದ ಕುಮಾರಸ್ವಾಮಿ
ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಜಾರಿ ಮಾಡಿದ್ದೀರಿ. ಇದರಿಂದ ಎಲ್ಲರಿಗೂ ಪ್ರಯೋಜನ ಆಗುತ್ತಿದೆಯೇ? ಎಂದು ಪ್ರಶ್ನೆ ಮಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದ ಹಲವು ಕಡೆ ಸರ್ಕಾರಿ ಬಸ್ಸುಗಳೇ ಇಲ್ಲ. ಇನ್ನು ಈ ಯೋಜನೆಯು ಹೇಗೆ ಎಲ್ಲರಿಗೂ ಪ್ರಯೋಜನವಾಗಿದೆ ಎಂದು ಹೇಳುವುದು? ಎಂದು ಪ್ರಶ್ನೆ ಮಾಡಿದರು.
ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ (Law and order) ಹದಗೆಟ್ಟಿದೆ. ಎಡ – ಬಲ ಸಿದ್ಧಾಂತಗಳಿವೆ. ಬುದ್ಧಿವಂತರು ಮಾತನಾಡುವ ಹಾಗೂ ಬಳಸುವ ಭಾಷೆ ಮತ್ತು ಸಂಸ್ಕೃತಿಯಿಂದ ಸಮಸ್ಯೆ ಆಗುತ್ತಿದೆ. ರಾಜ್ಯ ಸರ್ಕಾರದಲ್ಲಿ ಶಾಂತತೆಯು ಇಲ್ಲದಂತೆ ಆಗಿದೆ. ಭ್ರಷ್ಟಾಚಾರ ನಿಗ್ರಹ (Anti corruption) ಮಾಡುವುದಕ್ಕೆ ನಮ್ಮ ಬೆಂಬಲ ಇದೆ. ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ಗಿಫ್ಟ್ ಕೂಪನ್ ಪ್ರದರ್ಶನ
ಇದೇ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರು ಗಿಫ್ಟ್ ಕೂಪನ್ ಅನ್ನು ಸದನದಲ್ಲಿ ಪ್ರದರ್ಶನ ಮಾಡಿದ್ದಾರೆ. ರಾಮನಗರದಲ್ಲಿ ಗಿಫ್ಟ್ ಕಾರ್ಡ್ ಹಂಚಿದ್ದಾರೆಂದು ಈ ಹಿಂದೆ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು.
ಚಲುವರಾಯಸ್ವಾಮಿ ವಿರುದ್ಧದ ದಾಖಲೆ
ವರ್ಗಾವಣೆ ವಿಚಾರವಾಗಿ ಸದನದಲ್ಲಿ ಆರೋಪ ಮಾಡಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ದಾಖಲೆಯನ್ನು ಪ್ರದರ್ಶನ ಮಾಡಿದ್ದಾರೆ. ಕೃಷಿ ಇಲಾಖೆಯಲ್ಲಿ ನಡೆದಿದ್ದ ವರ್ಗಾವಣೆ ಪಟ್ಟಿಯ (Transfer List) ದರ ನಿಗದಿ ದಾಖಲೆಯನ್ನು ಪ್ರದರ್ಶಿಸಿದರು. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ವಿರುದ್ಧದ ದಾಖಲೆ ತೋರಿಸಿದ್ದು, ಯಾವ ಯಾವ ಹುದ್ದೆಗೆ ಎಷ್ಟು ಹಣ ಅಂತ ನಿಗದಿಯಾಗಿದೆ ಎಂದು ದೂರಿದ್ದಾರೆ.