ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದರೂ ಅವರನ್ನು ರಿಮೋಟ್ ಕಂಟ್ರೋಲ್ ಅಧ್ಯಕ್ಷ ಎಂದೇ ಬಿಜೆಪಿ ಟೀಕಿಸುತ್ತದೆ. ಗಾಂಧಿ ಕುಟುಂಬದ ಮಾತುಗಳನ್ನು ಕೇಳಿಕೊಂಡಿರುವ ಎಐಸಿಸಿ ಅಧ್ಯಕ್ಷ ಎಂತಲೂ ಕರೆಯುತ್ತಾರೆ. ಇಂತಹ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ (Viral Video) ಬೆನ್ನಿಗೆ ಕೈ ಸವರಿದ್ದು, “ಖರ್ಗೆ ಅವರನ್ನು ರಾಹುಲ್ ಗಾಂಧಿ ಟಿಶ್ಯು ಪೇಪರ್ ರೀತಿ ಬಳಸಿಕೊಳ್ಳುತ್ತಿದ್ದಾರೆ” ಎಂದು ಬಿಜೆಪಿ ಟೀಕಿಸಿದೆ.
“ಮಲ್ಲಿಕಾರ್ಜುನ ಖರ್ಗೆ ಅವರಂತಹ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ಗಾಂಧಿಗಳು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿಯಾಗಿದೆ. ರಾಹುಲ್ ಗಾಂಧಿ ಅವರು ಹೀಗೆ ಮತ್ತೊಬ್ಬರನ್ನು ಟಿಶ್ಯು ಪೇಪರ್ ರೀತಿ ಬಳಸಿಕೊಂಡಿರುವುದು ಖಂಡನೀಯವಾಗಿದೆ. ಅದರಲ್ಲೂ, ಕನ್ನಡಿಗರೊಬ್ಬರಿಗೆ ಹೀಗೆ ಮಾಡಿರುವುದು ಅವಮಾನದ ಸಂಗತಿಯಾಗಿದೆ” ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ. ಹಾಗೆಯೇ, ವಿಡಿಯೊವನ್ನೂ ಪೋಸ್ಟ್ ಮಾಡಿದ್ದು, ವಿಡಿಯೊ ಈಗ ವೈರಲ್ ಆಗಿದೆ.
ಬಿಜೆಪಿ ಪೋಸ್ಟ್ ಮಾಡಿದ ವಿಡಿಯೊ ಇಲ್ಲಿದೆ
ಮಲ್ಲಿಕಾರ್ಜುನ ಖರ್ಗೆ ಅವರು ಮುಂದೆ ನಡೆದುಕೊಂಡು ಹೋಗುತ್ತಿರುವಾಗ ರಾಹುಲ್ ಗಾಂಧಿ ಅವರು ಬಾಯಿ ಮುಟ್ಟಿ, ನಂತರ ಖರ್ಗೆ ಬೆನ್ನಿನ ಮೇಲೆ ಕೈ ಇಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಹಾಗಾಗಿ, ಬಿಜೆಪಿಯು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ವಿಡಿಯೊಗೆ ಹಲವಾರು ಜನ ವಿವಿಧ ರೀತಿ ಪ್ರತಿಕ್ರಿಯಿಸಿದ್ದಾರೆ. ರಾಹುಲ್ ಗಾಂಧಿ ಅವರು ಮೂಗು ಒರೆಸಿಕೊಂಡು, ಖರ್ಗೆ ಬೆನ್ನಿಗೆ ಒರೆಸಿದ್ದಾರೆ ಎಂದೂ ಹೇಳಿದ್ದಾರೆ.
ತಿರುಗೇಟು ನೀಡಿದ ಕಾಂಗ್ರೆಸ್
ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ವಿಭಾಗದ ಉಸ್ತುವಾರಿ ನಿತಿನ್ ಅಗರ್ವಾಲ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. “ವಿಡಿಯೊವನ್ನು ಪೂರ್ತಿಯಾಗಿ ವೀಕ್ಷಿಸಿ. ಖರ್ಗೆ ಅವರನ್ನು ಅವರ ಮನೆಗೆ ಬಿಡಲು ರಾಹುಲ್ ಗಾಂಧಿ ಅವರು ಕರೆದಿದ್ದಾರೆ. ಆದರೆ, 40 ಪರ್ಸೆಂಟ್ ಕಮಿಷನ್ ಸರ್ಕಾಋವು ಕರ್ನಾಟಕದಲ್ಲಿ ಪ್ರಚಾರ ಮಾಡಲು ಯಾವುದೇ ಅಂಶವನ್ನು ಹೊಂದಿಲ್ಲ. ಹಾಗಾಗಿ, ಇಂತಹ ದುರುದ್ದೇಶಪೂರ್ವಕ, ನಕಲಿ ಅಂಶಗಳನ್ನು ಸುದ್ದಿ ಮಾಡುತ್ತಿದೆ” ಎಂದು ಟೀಕಿಸಿದ್ದಾರೆ.
ಇಲ್ಲಿದೆ ಪೂರ್ತಿ ವಿಡಿಯೊ
ಖರ್ಗೆ ಅವರನ್ನು ಮನೆಗೆ ಡ್ರಾಪ್ ಮಾಡಿದ ರಾಹುಲ್ ಗಾಂಧಿ
ಸಂಸತ್ ಕಲಾಪದ ಬಳಿಕ ರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ತಮ್ಮ ಕಾರಿನಲ್ಲಿಯೇ ಮನೆಗೆ ಡ್ರಾಪ್ ಮಾಡಿದ್ದಾರೆ. ಡ್ರಾಪ್ ಮಾಡುವ ಕುರಿತು ಮಾತನಾಡಿಸುವಾಗ ರಾಹುಲ್ ಗಾಂಧಿ ಅವರು ಖರ್ಗೆ ಬೆನ್ನು ಮುಟ್ಟಿದ್ದಾರೆ. ಅದರ ಪೂರ್ತಿ ವಿಡಿಯೊವನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾತೆ ಟ್ವೀಟ್ ಮಾಡಿದ್ದಾರೆ. ಖರ್ಗೆ ಅವರು ರಾಹುಲ್ ಕಾರಿನಲ್ಲಿ ಕುಳಿತುಕೊಳ್ಳುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಇದನ್ನೂ ಓದಿ: Karnataka Elections : ಕೋಲಾರ ಬೇಡ, ವರುಣಾದಲ್ಲೇ ನಿಲ್ಲಿ: ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸ್ಪಷ್ಟ ಸಲಹೆ