Site icon Vistara News

ವಿಧಾನಸೌಧ ರೌಂಡ್ಸ್‌: ಸುವರ್ಣಸೌಧದಲ್ಲಿ ಸಾವರ್ಕರ್‌ ಫೋಟೊ; ಮೆಚ್ಚುಗೆ ಗಳಿಸಿದ ಖಾದರ್‌ ನಡೆ

Savarkar photo and UT Khader

ಮಾರುತಿ ಪಾವಗಡ
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಚಳಿ ಬಿಡಿಸಬೇಕಿದ್ದ ವಿಪಕ್ಷ ಬಿಜೆಪಿ ನಾಯಕರಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣಿಸಿದೆ. ಅತ್ತ ಹೈಕಮಾಂಡ್ ನಿರ್ಧಾರ ತಿರಸ್ಕರಿಸುವಂತಿಲ್ಲ, ಇತ್ತ ಆಶೋಕ್ ಮಾತು ಕೇಳಲು ಹಲವು ಶಾಸಕರಿಗೆ ಆಗ್ತಿಲ್ಲ. ಹೀಗಾಗಿ ಬಹಿರಂಗವಾಗಿಯೇ ಈ ಬಾರಿ ಅಡ್ಜೆಸ್ಟ್‌ಮೆಂಟ್‌ ಹೇಳಿಕೆಯನ್ನು ಶಾಸಕರು ನೀಡಿದ್ದಾರೆ. ಇತ್ತ ಕಾಂಗ್ರೆಸ್ ಸರ್ಕಾರ ಮೊದಲ ವಾರದ ಅಧಿವೇಶನವನ್ನು (Vidhana Soudha Rounds) ಯಶಸ್ವಿಯಾಗಿ ಮುಗಿಸಿದೆ.

ಇನ್ನು ಸಾವರ್ಕರ್ ಫೋಟೊ ತೆಗೆಯುವ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಕೊಟ್ಟ ಹೇಳಿಕೆಯನ್ನು ಸ್ಪೀಕರ್‌ ಖಾದರ್ ತಳ್ಳಿ ಹಾಕಿ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದು ಚಾಟಿ ಬೀಸಿದ್ದಾರೆ. ನನಗೆ ಬಿಟ್ಟರೆ ನಾನೇ ಸಾವರ್ಕರ್‌ ಫೋಟೊ ಕಿತ್ತೆಸೆಯುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಆದರೆ ಸ್ಪೀಕರ್‌ ಯು.ಟಿ. ಖಾದರ್‌ ಫೋಟೊ ತೆಗೆಯುವ ವಿಚಾರವನ್ನು ಸ್ಪಷ್ಟವಾಗಿ ತಳ್ಳಿ ಹಾಕಿ, ಮತ್ತೊಂದು ವಿವಾದ ಉದ್ಭವಿಸುವುದನ್ನು ತಡೆದರು. ಈ ವಿಚಾರದಲ್ಲಿ ಈ ಹಿಂದೆ ಇದ್ದ ಸ್ಪೀಕರ್ ಕಾಗೇರಿ ಅವರಿಗಿಂತಲೂ ಯು.ಟಿ. ಖಾದರ್ ನಡೆ ಮೆಚ್ಚಲೇಬೇಕು. ಸುವರ್ಣ ಸೌಧದ ಅಧಿವೇಶನದ ಲಾಂಜ್‌ನಲ್ಲಿ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಸಹ ಭಾರಿ ಚರ್ಚೆ ಆಗುತ್ತಿದೆ.

ಇದನ್ನೂ ಓದಿ | BJP Politics : ಬರ ನಿರ್ವಹಣೆಗೆ ವಿಫಲ ; ಡಿ. 13ರಂದು ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ

ಬಿಜೆಪಿಯಲ್ಲಿ ಸಮನ್ವಯತೆ ಕೊರತೆ; ಮೊದಲ ವಾರ ಸೇಫ್ ಆದ ಕಾಂಗ್ರೆಸ್

ಬೆಳಗಾವಿಯಲ್ಲಿ ಸರ್ಕಾರಕ್ಕೆ ಚಳಿ ಬೀಡಿಸ್ತೀನಿ ಎಂದು ಬಂದಿದ್ದ ಆರ್‌. ಆಶೋಕ್ ಲೆಕ್ಕಾಚಾರ ಮೊದಲ ವಾರ ಉಲ್ಟಾಪಲ್ಟಾ ಆಗಿದೆ. ಮೊದಲ ವಾರವೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಮತ್ತು ಬರಗಾಲದ ಮೇಲೆ ಚರ್ಚೆಗೆ ಅವಕಾಶ ಸಿಕ್ಕಿದ್ದರಿಂದ ಮೊದಲ ವಾರ ಸುಗಮವಾಗಿ ಕಲಾಪ ನಡೆಯಿತು. ಈ ನಡುವೆ ಶೂನ್ಯವೇಳೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳನ್ನು ವಿಜಯೇಂದ್ರ ಪ್ರಸ್ತಾಪ ಮಾಡಿ, ಸರ್ಕಾರದ ಗಮನ ಸೆಳೆದರು. ಜತೆಗೆ ಈ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದರು. ಸರ್ಕಾರದ ಉತ್ತರ ಸರಿ ಕಾಣದ್ದರಿಂದ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಲು ಪ್ಲಾನ್ ರೂಪಿಸಿದ್ದರು. ಆದರೆ ಈ ನಡುವೆ ಅಶೋಕ್ ಸರ್ಕಾರದ ಉತ್ತರಕ್ಕೆ ನಾವು ಒಪ್ಪಲ್ಲ, ಸಭಾತ್ಯಾಗ ಮಾಡ್ತೀವಿ ಎಂದ ಹೇಳಿಕೆ ಬಿಜೆಪಿಯ ಬಹುತೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು. ಆಗ ಆಶೋಕ್ ವಿರುದ್ಧ ವಿಶ್ವನಾಥ್ ಅಡ್ಜಸ್ಟ್‌ಮೆಂಟ್‌ ಪಾಲಿಟಿಕ್ಸ್ ನೇರ ಆರೋಪ ಮಾಡಿ ಬೆಂಗಳೂರು ಕಡೆ ಮುಖ ಮಾಡಿದ್ದರಿಂದ ಈ ಬಾರಿ ನಮಗೆ ವಿಪಕ್ಷ ನಾಯಕ ಮತ್ತು ಅಧ್ಯಕ್ಷ ನೇಮಕ ಆದ್ರೂ ನಮ್ಮಲ್ಲಿ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ ಅಂತ ಬಿಜೆಪಿ ಹಿರಿಯ ಶಾಸಕರೊಬ್ಬರು ಹೇಳಿದವರು.

ಕಾಂಗ್ರೆಸ್‌ಗೆ ಬಸವರಾಜ ರಾಯರೆಡ್ಡಿ; ಬಿಜೆಪಿಗೆ ಯತ್ನಾಳ್ ಕಂಟಕ

ಈ ಬಾರಿ ಅಧಿವೇಶನದಲ್ಲಿ ಸ್ವಪಕ್ಷಗಳಲ್ಲಿಯೇ ವಿಪಕ್ಷ ಸ್ಥಾನ ನಿರ್ವಹಿಸುವ ಶಾಸಕರು ಹೆಚ್ಚು ಕಾಣಿಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕ ಬಸವರಾಜ ರಾಯರೆಡ್ಡಿ ಸರ್ಕಾರಕ್ಕೆ ಪ್ರತಿಬಾರಿಯೂ ವಿಪಕ್ಷ ನಾಯಕರಾಗಿ ಕಾಣುತ್ತಿದ್ದಾರೆ. ಸ್ಪೀಕರ್ ಅಂತೂ ಬಸವರಾಜ ರಾಯರೆಡ್ಡಿಯಿಂದ ಬರುವ ಔಟ್ ಸ್ವಿಂಗ್‌, ಇನ್ ಸ್ವಿಂಗ್‌ ಮಾತುಗಳನ್ನು ನಿಭಾಯಿಸುವಲ್ಲಿ ಸುಸ್ತು ಹೊಡೆದುಬಿಟ್ರು. ಇತ್ತ ಯತ್ನಾಳ್‌ರಿಂದ ಬಿಜೆಪಿಗೆ ಕಿರಿಕಿರಿ ಶುರುವಾಗಿದೆ. 65 ಶಾಸಕರದ್ದು ಒಂದು ನಿಲುವಾದ್ರೆ ಯತ್ನಾಳ್‌ದೇ ಬೇರೆ ನಿಲುವು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದೆ, ಸರಿಪಡಿಸುವವರೆಗೂ ನಾನು ಬಿಜೆಪಿ ಸಭೆಗೆ ಬರಲ್ಲ ಅಂತಾರೆ. ಇವರನ್ನ ಸಮಾಧಾನ ಮಾಡುವಷ್ಟರಲ್ಲಿ ಸುನಿಲ್ ಕುಮಾರ್, ಸಿ.ಸಿ. ಪಾಟೀಲ್ ಸುಸ್ತು ಹೊಡೆದು ಹೋಗಿದ್ದಾರೆ.

ಸಾವರ್ಕರ್ ಫೋಟೋ ತೆಗೆಯುವಂತೆ ಕೆಲ ಕೈ ಶಾಸಕರ ಒತ್ತಾಯ; ಇಂತಹ ಚೀಫ್ ಪಾಲಿಟಿಕ್ಸ್ ಬೇಡ ಎಂದ ಸ್ಪೀಕರ್:
2022ರಲ್ಲಿ ಅಂದಿನ ಸ್ಪೀಕರ್ ಆಗಿದ್ದ ಕಾಗೇರಿ ಅವರು ಬಹಳ ಮುತುವರ್ಜಿ ವಹಿಸಿ ವಿಧಾನ ಸಭೆಯಲ್ಲಿ ವೀರ ಸಾವರ್ಕರ್ ಫೋಟೋ ಅಳವಡಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬಿಜೆಪಿಯ ಕಾಲದ ಹಲವು ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದೆ. ಅದೇ ರೀತಿ ಸಾವರ್ಕರ್ ಫೋಟೊ ಸಹ ತೆಗೆಯುವಂತೆ ಸ್ಪೀಕರ್‌ಗೆ ಕೆಲ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಆದರೆ ಸ್ಪೀಕರ್ ಖಾದರ್ ಶಾಸಕರ ಮಾತು ಒಪ್ಪುತ್ತಿಲ್ಲ. ನಾನು ಕಾಗೇರಿ ಆಗಲು ಸಿದ್ಧವಿಲ್ಲ. ಸದ್ಯ ಸುಗಮವಾಗಿ ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಾಸಕರು ಜಮೀರ್ ಅಹಮದ್ ಖಾನ್ ಕಾಂಟ್ರೋವರ್ಸಿ ಹೇಳಿಕೆ ಪ್ರಸ್ತಾಪ ಮಾಡಿದ್ರೆ ಕೂಡಲೇ ಸಾವರ್ಕರ್ ಫೋಟೋ ಇಸ್ಯೂ ಜೀವಂತವಾಗಿ ಇಡಲು ಪ್ಲಾನ್ ಮಾಡಿದ್ದಾರೆ.

ಇದನ್ನೂ ಓದಿ | Assembly Session : ಸಚಿವ ಜಮೀರ್‌ ಅಹಮದ್ ವಜಾಕ್ಕೆ ಬಿಜೆಪಿ ಪಟ್ಟು;‌ ಸದನದಲ್ಲಿ ಕೋಲಾಹಲ

ಪಂಚರಾಜ್ಯಗಳ ಫಲಿತಾಂಶದ್ದೇ ಚರ್ಚೆ

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಗ್ಯಾರಂಟಿಗಳು ವರ್ಕೌಟ್ ಆಗ್ತಾವೆ ಅನ್ನೋ ಫಲಿತಾಂಶ ಬಂದಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಗ್ಯಾರಂಟಿಗಳಿಂದಲೇ ಅನ್ನೋದನ್ನ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶಲ್ಲಿ ಬಿಜೆಪಿ ಭಾರಿ ಬಹುಮತದಿಂದ ಗೆದ್ದು ಬಂದಿದ್ದರ ಹಿಂದೆ ಮೋದಿ ವರ್ಚಸ್ಸು ಮತ್ತು ಕಟು ಹಿಂದುತ್ವವೇ ಕಾರಣ ಅನ್ನೋ ಬಗ್ಗೆ ಚರ್ಚೆ ಆಗ್ತಿದೆ. ಹೀಗಾಗಿ ಉತ್ತರ ಭಾರತದಲ್ಲಿ ಹಿಂದು ಧರ್ಮ ವಿಚಾರವೇ ಪ್ರಮುಖ ಬಂಡವಾಳ. ಬಿಜೆಪಿಗೆ ಆಗಿದ್ರೆ ಕಾಂಗ್ರೆಸ್ ನಾಯಕರು ಕೊಡುವ ಕಾಂಟ್ರೋವರ್ಸಿ ಹೇಳಿಕೆಗಳು ವರದಾನವಾಗಿವೆ. ಇನ್ನು ಈ ಬಾರಿ ತೆಲಂಗಾಣದಲ್ಲಿ ಜಮೀರ್ ಪ್ರಚಾರ ಮಾಡಿದ 46 ಕ್ಷೇತ್ರಗಳ ಪೈಕಿ 38 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿರುವುದು ತೆಲಂಗಾಣದಲ್ಲೂ ಜಮೀರ್ ವರ್ಕೌಟ್ ಆಗಿ ಹೈಕಮಾಂಡ್ ಗೆ ಇನ್ನೂ ಹತ್ತಿರವಾಗಿದ್ದಾರೆ ಅನ್ನೋದು ಈಗ ಚರ್ಚೆಗೆ ಕಾರಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version