Site icon Vistara News

Sirsi Marikamba Temple: ಶಿರಸಿ ಮಾರಿಕಾಂಬಾ ಜಾತ್ರೆ ಡೇಟ್‌ ಫಿಕ್ಸ್;‌ ಮಾರ್ಚ್‌ 19ರಿಂದ 9 ದಿನ ಕಾರ್ಯಕ್ರಮ

Sirsi Marikamba Temple

ಶಿರಸಿ: ಎರಡು ವರ್ಷಕ್ಕೊಮ್ಮೆ ನಡೆಯಲ್ಪಡುವ ರಾಜ್ಯದಲ್ಲಿಯೇ ಅತಿದೊಡ್ಡ ಮಾರಿಕಾಂಬಾ ಜಾತ್ರೆ (Sirsi Marikamba Fair) ಎಂಬ ಖ್ಯಾತಿಯುಳ್ಳ ಶಿರಸಿಯ ಮಾರಿಕಾಂಬಾ ದೇವಿ (Sirsi Marikamba Temple) ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ. ಇದೇ ಮಾರ್ಚ್‌ 19ರಿಂದ ಮಾ.27ರವರೆಗೆ ಜಾತ್ರೆ ನಡೆಯಲಿದೆ.

ಭಾನುವಾರ ಶಿರಸಿಯ ದೇವಾಲಯದ ಸಭಾಂಗಣದಲ್ಲಿ ಜರುಗಿದ ಜಾತ್ರಾ ಮಹೋತ್ಸವ ದಿನಾಂಕ ಘೋಷಣಾ ಸಭೆಯಲ್ಲಿ ಗೋಪಾಲಕೃಷ್ಣ ದೇವಾಲಯದ ಪ್ರಧಾನ ಅರ್ಚಕ ಶರಣ ಆಚಾರ್ಯ ಅವರು ಮಾತನಾಡಿ, ಜಾತ್ರೆಯ ದಿನಾಂಕವನ್ನು ಘೋಷಣೆ ಮಾಡಿದರು. ಮಾರ್ಚ್‌ 19ರಿಂದ 27ರವರೆಗೆ ಒಟ್ಟು 9 ದಿನಗಳ ಕಾಲ ಈ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಶಿರಸಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ (ಸಂಗ್ರಹ ಚಿತ್ರ)

ಜಾತ್ರೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಅಜಯ ನಾಡಿಗ ಎಂಬುವವರು ಮುಹೂರ್ತ ದೀಪವನ್ನು ಬೆಳಗಿದರು. ಬಳಿಕ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಲಾಯಿತು.

ಜಾತ್ರೆಯ ಸಿದ್ಧತೆ, ವಿಧಿ ವಿಧಾನ ಬಗ್ಗೆ ಮಾಹಿತಿ

ಮಾರಿಕಾಂಬಾ ಜಾತ್ರೆಯು ಮಾರ್ಚ್‌ ನಡೆಯಲಿದ್ದರೂ ಸಹ ವಿಧಿ ವಿಧಾನಗಳು ಮುಂಚಿತವಾಗಿಯೇ ಪ್ರಾರಂಭವಾಗುತ್ತದೆ. ಅದರ ಭಾಗವಾಗಿ ಜ. 31ರಿಂದ ವಿಧಿವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಜನವರಿ 31 ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಪೂರ್ವ ವಿಧಿ–ವಿಧಾನಗಳು ಆರಂಭವಾಗಲಿದೆ ಎಂದು ಶರಣ ಆಚಾರ್ಯ ಮಾಹಿತಿ ನೀಡಿದರು.

ಫೆ.27 ರಂದು ಪೂರ್ವದಿಕ್ಕಿಗೆ ಮೊದಲ ಹೊರಬೀಡು, ಮಾ.1ರಂದು ಉತ್ತರ ದಿಕ್ಕಿಗೆ 2ನೇ ಹೊರಬೀಡು, ಮಾ.5ರಂದು ಪೂರ್ವ ದಿಕ್ಕಿಗೆ 3ನೇ ಹೊರಬೀಡು, ಮಾ.8ರಂದು ರಥ ಕಟ್ಟಲು ಮರ ಕಡಿಯಲು ಹೋಗುವುದು, ಅದೇ ದಿನ ಉತ್ತರ ದಿಕ್ಕಿಗೆ 4ನೇ ಹೊರಬೀಡು ಕಾರ್ಯಕ್ರಮವನ್ನು ನಡೆಸಲಾಗುವುದು. ಮಾ.12ರಂದು ರಥದ ಮರ ತರಲಾಗುತ್ತದೆ. ಅದೇ ದಿನ ರಾತ್ರಿ ಪೂರ್ವದಿಕ್ಕಿಗೆ ಅಂಕೆಯ ಹೊರಬೀಡು ನಡೆಯಲಿದೆ. ಮಾ. 13 ರಂದು ಅಂಕೆ ಹಾಕುವುದು ಹಾಗೂ ದೇವಿಯ ವಿಸರ್ಜನೆ ನಡೆಯಲಿದೆ ಎಂದು ಶರಣ ಆಚಾರ್ಯ ತಿಳಿಸಿದರು.

ಜಾತ್ರಾ ಕಲ್ಯಾಣ ಪ್ರತಿಷ್ಠೆ

ಮಾ.19ರ ಮಧ್ಯಾಹ್ನ 12.25ರಿಂದ ರಿಂದ 12.27ರ ಒಳಗೆ ದೇವಿಯ ರಥದ ಕಲಶದ ಪ್ರತಿಷ್ಠೆ ಹಾಗೂ ರಾತ್ರಿ 11.39 ರಿಂದ 11.45ರವರೆಗೆ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಮಾ.20ರಂದು ಬೆಳಗ್ಗೆ 7.27ರಿಂದ 7.39 ಗಂಟೆಯೊಳಗೆ ದೇವಿಯ ರಥಾರೋಹಣ ನಡೆಯಲಿದ್ದು, 8.59 ಗಂಟೆಯಿಂದ ಶೋಭಾಯಾತ್ರೆ ಜರುಗಲಿದೆ. ಮಧ್ಯಾಹ್ನ 1.10 ಗಂಟಡಯೊಳಗೆ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಜರುಗುವುದು. ಮಾ.21 ರಿಂದ ಭಕ್ತಾದಿಗಳ ಸೇವೆಗೆ ಅವಕಾಶವಿದೆ. ಮಾ.27ರಂದು ಬೆಳಗ್ಗೆ ಜಾತ್ರೆ ಮುಕ್ತಾಯವಾಗಲಿದೆ. ಯುಗಾದಿಯಂದು ದೇವಿಯ ಪುನರ್‌ ಪ್ರತಿಷ್ಠೆ ನಡೆಯಲಿದೆ ಎಂದು ಶರಣ ಆಚಾರ್ಯ ಹೇಳಿದರು.

ಇದನ್ನೂ ಓದಿ: ರಾಹುಲ್‌ ಗಾಂಧಿ ನೆಲ ಸ್ಪರ್ಶಿಸಿದಲ್ಲೆಲ್ಲ ಕಾಂಗ್ರೆಸ್‌ ಅವನತಿ; ನ್ಯಾಯವಲ್ಲ, ಡೋಂಗಿ ಯಾತ್ರೆ ಎಂದ ಅಶೋಕ್

ಸಭೆಯಲ್ಲಿ ಶಾಸಕ ಭೀಮಣ್ಣ ನಾಯ್ಕ, ಉಪವಿಭಾಗಾಧಿಕಾರಿ ಅಪರ್ಣ ರಮೇಶ, ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ರಾಮಚಂದ್ರ ನಾಯಕ, ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ, ಧರ್ಮದರ್ಶಿಗಳಾದ ಎಸ್.ಪಿ.ಶೆಟ್ಟಿ, ಸುಧೀರ್ ಹಂದ್ರಾಳ, ಬಾಬುದಾರ ಮುಖ್ಯಸ್ಥ ಜಗದೀಶ ಗೌಡ ಇತರರಿದ್ದರು.

Exit mobile version