ಬೆಂಗಳೂರು: ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಎಂಬ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಕೊನೆಗೂ ಸ್ಪಂದಿಸಿದೆ. ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೃದಯಭಾಗವಾದ ಕುಮಟಾ ತಾಲೂಕಿನ ಆಸುಪಾಸಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ನಿರ್ಮಾಣ ಮಾಡುವ ನಿರ್ಧಾರಕ್ಕೆ ಸರ್ಕಾರ ಈ ಹಿಂದೆಯೇ ಬಂದಿತ್ತು. ಕೆಲ ತಿಂಗಳಿನ ಹಿಂದೆ ಜಾಗದ ಹುಡುಕಾಟ ನಡೆಸಲಾಗಿತ್ತು.
ಸುದೀರ್ಘ ಹೋರಾಟಕ್ಕೆ ಕೊನೆಗೂ ಸ್ಪಂದನೆ:
ಮಲ್ಟಿ ಸ್ಪೆಶಾಲಿಟಿ ಅಥವಾ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಉತ್ತರ ಕನ್ನಡದ ಜನತೆ ಒತ್ತಾಯಿಸಿ, ತೀವ್ರ ಹೋರಾಟವನ್ನೂ ನಡೆಸಿದ್ದರು. 2019ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಧಾನಿ, ಮುಖ್ಯಮಂತ್ರಿಗಳ ಮಟ್ಟದಲ್ಲಿ ಗಮನ ಸೆಳೆಯಲು ಕ್ಯಾಂಪೇನ್‌ಗಳನ್ನು ನಡೆಸಿದ್ದರು. ಕೊನೆಗೂ ಬೇಡಿಕೆಗೆ ಸ್ಪಂದನೆ ಲಭಿಸಿದೆ. ಪ್ರತಿಪಕ್ಷಗಳೂ ಈ ಹೋರಾಟವನ್ನು ಬೆಂಬಲಿಸಿತ್ತು. ಟ್ವಿಟರ್, ಫೇಸ್‌ಬುಕ್ ಇತ್ಯಾದಿ ಜಾಲತಾಣಗಳಲ್ಲಿ ಅಭಿಯಾನದ ಜತೆಗೆ ಬೆಂಗಳೂರಿನಲ್ಲಿಯೂ 2022 ಜುಲೈ 30ರಂದು ಬೃಹತ್ ಪ್ರತಿಭಟನೆ ನಡೆದಿತ್ತು. ಅಕ್ಟೋಬರ್ ವೇಳೆಗೆ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಹೆಚ್ಚುತ್ತಿರುವ ಅಪಘಾತ, ಆರೋಗ್ಯ ಸಮಸ್ಯೆಗಳ ಪರಿಣಾಮ ಆಸ್ಪತ್ರೆ ನಿರ್ಮಾಣದ ಬೇಡಿಕೆ ಮತ್ತು ಒತ್ತಡ ತೀವ್ರವಾಗಿತ್ತು.
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರನ್ನೊಳಗೊಂಡ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿತ್ತು. ಬಳಿಕ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದರು.
ಕುಮಟಾದಲ್ಲಿಯೇ ಏಕೆ?
ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ವ್ಯಾಪ್ತಿಯನ್ನು ಗಮನಿಸಿದಾಗ ಕುಮಟಾವನ್ನು ಹೃದಯಭಾಗವೆಂದು ಪರಿಗಣಿಸಬಹುದಾಗಿದ್ದು, ತಾಲೂಕಿನ ಅಕ್ಕಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾಪವನ್ನು ಸಭೆಯಲ್ಲಿ ಇಡಲಾಗಿತ್ತು. ಈ ಬಗ್ಗೆ ಚರ್ಚೆ ನಡೆಸಿ ಕೊನೆಗೂ ಆರೋಗ್ಯ ಸಚಿವರು ಒಪ್ಪಿಗೆ ನೀಡಿದ್ದರು.