ಬೆಂಗಳೂರು: ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕ ಎಂಬ ಹಿಂದಿನ ಸಂಶೋಧನೆಗಳ ನಡುವೆ ಈಗ ಎಂ.ಎಸ್. ರಾಮಯ್ಯ ಯೂನಿವರ್ಸಿಟಿಯು ಸಂಶೋಧನೆ ನಡೆಸಿದ್ದು, ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ತಿಳಿಸಿದೆ. ಜತೆಗೆ, ಅಡಿಕೆಯಲ್ಲಿ ಅನೇಕ ಔಷಧೀಯ ಗುಣವಿದೆ ಎಂದು ತಿಳಿಸಿದೆ. ಈ ಕುರಿತು ವಿಧಾನಸೌಧದಲ್ಲಿ ಅಡಿಕೆ ಟಾಸ್ಕ್ ಫೋರ್ಸ್ (Areca News) ಸಭೆಯ ನಂತರ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ, ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಹಿಂದಿನ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ್ದರ ಬಗ್ಗೆ ಚರ್ಚೆ ಮಾತನಾಡಿದ್ದೇವೆ. ಅದರ ಕೇಸ್ ಈಗಲೂ ಸುಪ್ರೀಂಕೋರ್ಟ್ ನಲ್ಲಿದೆ. ಹಾಗಾಗಿ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆಲೋಚನೆ ಇತ್ತು.
ಹೀಗಾಗಿ ರಾಮಯ್ಯ ವಿವಿಗೆ ಒಂದು ವರ್ಷದ ಹಿಂದೆ ಸಂಶೋಧನೆ ಮಾಡೋಕೆ ಹೇಳಿದ್ವಿ. ಅಡಿಕೆ ಕಾರ್ಯಪಡೆಯಿಂದ ಜವಾಬ್ದಾರಿ ನೀಡಲಾಗಿತ್ತು. ಇವತ್ತು ಪ್ರಾಥಮಿಕ ವರದಿ ಬಂದಿದೆ. ಇದನ್ನು ಚರ್ಚೆ ಮಾಡಿದ್ದೇವೆ. ಸಂತೋಷಕರ ವಿಷಯ ಎಂದರೆ ಅಡಿಕೆ ಹಾನಿಕಾರಕ ಅಲ್ಲ, ಅಡಿಕೆಯಲ್ಲಿ ವೈದ್ಯಕೀಯ ಲಕ್ಷಣಗಳು ಇವೆ ಎಂದು ವರದಿಯಲ್ಲಿ ಹೇಳಿದ್ದಾರೆ. ಹಾಗಾಗಿ ಅಡಿಕೆ ಬಗ್ಗೆ ಇನ್ನೊಂದು ಪೂರ್ಣವಾದ ವರದಿ ಕೊಡ್ತಾರೆ.
ಬಿ.ಪಿ. ನಿಯಂತ್ರಣ, ಡಯಾಬಿಟಿಸ್ ಗೆ ಹೊಟ್ಟೆ ನೋವಿಗೆ ಔಷಧಿ ಆಗ್ತಾ ಇದೆ. ಗಾಯ ಗುಣಪಡಿಸುವ ಅಡಿಕೆ ಉತ್ತಮವಾಗಿರುವಂತೆ ಫಲಿತಾಂಶ ನೀಡಿದೆ. ಅದೇ ರೀತಿ ಎಲೆ ಚುಕ್ಕಿ ರೋಗಕ್ಕೆ ಸಂಶೋಧನೆಗೆ ಶಿವಮೊಗ್ಗ ವಿವಿಗೆ ಅನುದಾನ ನೀಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಅಡಿಕೆಯ ದಾರಣೆ ಬಗ್ಗೆ ವಿಶೇಷವಾಗಿ ಅಡಿಕೆಯ ಕನಿಷ್ಠ ಆಮದಿಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲು ಶೀಘ್ರದಲ್ಲೇ ಒಂದು ನಿಯೋಗ ಭೇಟಿ ಮಾಡಲು ನಿರ್ಣಯ ಆಗಿದೆ ಎಂದರು.
ಸಭೆಯಲ್ಲಿ ರಾಜ್ಯ ತೋಟಗಾರಿಕಾ ವಿಶ್ವ ವಿದ್ಯಾಲಯದ ಉಪ ಕುಲಪತಿ, R C ಜಗದೀಶ್ ಹಾಗೂ ರಾಜ್ಯ ಅಡಿಕೆ ಕಾರ್ಯಪಡೆಯ ರಾಜ್ಯ ಮಂಡಳಿಯ ಹಿರಿಯ ಸದಸ್ಯರು ಸೇರಿದಂತೆ, ರಾಜ್ಯ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: Areca News : ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಬರುವ ಅಮಿತ್ ಶಾ ಅಡಿಕೆ ಬೆಳೆಗಾರರಿಗೆ ನೀಡುವ ಸಿಹಿ ಸುದ್ದಿ ಏನು?
ಸಭೆಗೂ ಮುನ್ನ ಮಾಧ್ಯಮಗಳ ಜತೆಗೆ ಮಾತನಾಡಿದ್ದ ಆರಗ ಜ್ಞಾನೇಂದ್ರ, ಭದ್ರಾವತಿಯ ನಮ್ಮ ರಾಜ್ಯದ ಪ್ರತಿಷ್ಟಿತ ಕಬ್ಬಿಣ ಕಾರ್ಖಾನೆ. ಅದು ಮುಚ್ಚೊ ಹಂತಕ್ಕೆ ಬಂದಿದೆ. ಕೇಂದ್ರ ಸರ್ಕಾಕ್ಕೆ ವಿಶೇಷವಾಗಿ ಮಾತನಾಡುತ್ತಿದ್ದೇವೆ. ಪಾರ್ಲಿಮೆಂಟ್‌ನಲ್ಲಿ ಮುಚ್ಚುವ ಕಾರ್ಯ ಶುರುವಾಗಿದೆ ಎಂದಿದ್ದಾರೆ. ಹಾಗೆಂದ ಕೂಡಲೆ ಮುಚ್ಚಿದ್ದಾರೆ ಎಂದು ಅರ್ಥವಲ್ಲ.
ಈ ವಿಚಾರವಾಗಿ ನಾವು ಪ್ರಧಾನಿಗಳ ಜೊತೆ ಮಾತನಾಡಿದ್ದೇವೆ. ಇದನ್ನ ಮುಚ್ಚಲು ನಾವು ಬಿಡೋದಿಲ್ಲ. ಖಾಸಗೀಕರಣ ಮಾಡುವುದೋ ಅಥವಾ ಸರ್ಕಾರ ನಡೆಸುವುದೋ ಅದನ್ನ ಮುಂದಿನ ದಿನಗಳಲ್ಲಿ ಚರ್ಚೆ ಮಾಡ್ತೇವೆ. ಇದು ನಮ್ಮ ರಾಜ್ಯದ ಹೆಮ್ಮೆಯ ಕಾರ್ಖಾನೆ. ಮೈಸೂರು ಅರಸರು ಅದನ್ನ ಸ್ಥಾಪನೆ ಮಾಡಿರೋದು ಎಂದರು.