ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಬ್ರೂಕ್ ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಮಾರ್ಚ್ 1ರಂದು ನಡೆದ ಬಾಂಬ್ ಸ್ಫೋಟ (Blast in Bengaluru) ಬಿಜೆಪಿಯ ಚುನಾವಣಾ ಸಂಚು (Election Game plan) ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ ಸಚಿವ ಮಂಕಾಳು ವೈದ್ಯ (Minister Mankalu Vaidya)
ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ʻʻಇದು ಚುನಾವಣೆಗಾಗಿ ಬಿಜೆಪಿಯವರು ಮಾಡಿರುವ ಸಂಚು. ಬಿಜೆಪಿಯವರು ಚುನಾವಣೆಗಾಗಿ ಏನ್ ಬೇಕಾದ್ರೂ ಮಾಡ್ತಾರೆ.. ಚುನಾವಣೆ ಹೊತ್ತಲ್ಲಿ ಮತದಾರರ ಗಮನ ಸೆಳೆಯಲು ಸಂಚು ಮಾಡಲಾಗಿದೆ. ಸಂಚನ್ನು ಯಾರು, ಯಾವ ಪಕ್ಷದವರು ಮಾಡ್ತಾರೆ ಅಂತಾ ಎಲ್ಲರಿಗೂ ಗೊತ್ತಿದೆ.. ಯಾರೂ ಭಯ ಪಡುವ ಅಗತ್ಯವಿಲ್ಲ.ʼʼ ಎಂದು ಮಾಂಕಾಳು ವೈದ್ಯ ಹೇಳಿದ್ದಾರೆ.
ʻʻಬಿಜೆಪಿಯವ್ರು ಇದುವರೆಗೂ ಯಾವ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿ ಮಾತನಾಡಿದ್ದಾರೆ..? ಬಿಜೆಪಿಯವ್ರು ಬಡವರ ಪರವಾಗಿ ಯಾವ ಕಾರ್ಯಕ್ರಮ ನೀಡಿ ಚುನಾವಣೆ ಎದುರಿಸಿದ್ದಾರೆ..? ಅವರು ಇದುವರೆಗೂ ಇಂತದ್ದೇ ಮಾಡಿಕೊಂಡು ಚುನಾವಣೆ ಎದುರಿಸಿದ್ದುʼʼ ಎಂದು ಮುಂಡಗೋಡಿನಲ್ಲಿ ಸಚಿವ ಮಂಕಾಳು ವೈದ್ಯ ಗಂಭೀರ ಆರೋಪ ಮಾಡಿದ್ದಾರೆ.
ಇದರ ಜತೆಗೆ ರಾಮೇಶ್ವರಂ ಕೆಫೆಯಲ್ಲಿ ಯಾರು ಬಾಂಬ್ ಸ್ಫೋಟ ಮಾಡಿದ್ದಾರೆಯೋ ಅವರ ವಿರುದ್ಧ, ಯಾರು ಇದರಲ್ಲಿ ಭಾಗಿಯಾಗಿದ್ದಾರೆಯೋ ಅವರ ವಿರುದ್ಧ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಂಕಾಳು ವೈದ್ಯ ಹೇಳಿದ್ದಾರೆ.
ಭಟ್ಕಳ ಶಾಸಕರಾಗಿರುವ ಮಾಂಕಾಳು ವೈದ್ಯ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಕರಾವಳಿಯ ಪ್ರತಿನಿಧಿಯಾಗಿ ಅವರಿಗೆ ಅವಕಾಶ ಸಿಕ್ಕಿದೆ. ಯಾಕೆಂದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನ ಮಾತ್ರ ಗೆದ್ದಿತ್ತು. ಅದರಲ್ಲಿ ಒಬ್ಬರು ಸ್ಪೀಕರ್ ಯು.ಟಿ ಖಾದರ್ ಮತ್ತು ಇನ್ನೊಬ್ಬರು ಮೊದಲ ಬಾರಿ ಶಾಸಕ ಅಶೋಕ್ ರೈ. ಉಡುಪಿ ಜಿಲ್ಲೆಯಲ್ಲಿ ಯಾವ ಕಾಂಗ್ರೆಸ್ ಅಭ್ಯರ್ಥಿಯೂ ಗೆದ್ದಿರಲಿಲ್ಲ. ಹೀಗಾಗಿ ಮಾಂಕಾಳು ವೈದ್ಯ ಅವರಿಗೆ ಮಂತ್ರಿಯಾಗುವ ಯೋಗ ಒಲಿದಿತ್ತು.
ಮೂಲತಃ ಉದ್ಯಮಿಯಾಗಿರುವ ಮಾಂಕಾಳು ವೈದ್ಯ ಅವರು 90ರ ದಶಕದ ಉತ್ತರಾರ್ಧದಲ್ಲಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಮೊದಲು ಅವರು ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಭಟ್ಕಳದ ಮತಗಳು ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ವಿಭಜನೆಯಾದ ಕಾರಣ ಅವರ ಚುನಾವಣೆಯು ನಾಟಕೀಯ ತಿರುವು ಕಂಡಿತು. 2018ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಬಿಜೆಪಿಯ ಸುನೀಲ್ ನಾಯಕ್ ವಿರುದ್ಧ ಸೋತಿದ್ದ ಅವರು 2023ರಲ್ಲಿ 30,000 ಮತಗಳಿಂದ ಗೆದ್ದಿದ್ದಾರೆ.
ಇದೀಗ ಅವರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ವಿವಾದಿತ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.