ಬೆಳಗಾವಿ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ಏಳು ತಾಲೂಕುಗಳನ್ನು ಸೇರಿಸಿಕೊಂಡು ಶಿರಸಿಯನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂಬ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದ ನಿಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಂ ಹೆಬ್ಬಾರ್, ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮತ್ತಿತರರು ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು.
ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರು, ಶಿರಸಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು 38 ವರ್ಷದಿಂದ ಹೋರಾಟ ನಡೆಯುತ್ತಿದೆ. ಜಿಲ್ಲೆಯ ಬೇಡಿಕೆ ಸದ್ಯದಲ್ಲೇ ಈಡೇರುವ ಮುನ್ಸೂಚನೆ ಲಭಿಸಿದೆ. ಜಿಲ್ಲಾ ಕೇಂದ್ರದಲ್ಲಿ ಪ್ರತಿ ಕೆಲಸಕ್ಕೂ 100 ಕಿಲೋ ಮೀಟರ್ ಸಾಗಬೇಕು ಎಂಬ ಪರಿಸ್ಥಿತಿ ಈಗ ಇದೆ. ಕಾರವಾರವು ಗೋವಾ ಗಡಿ ಹತ್ತಿರ ಇರುವುದರಿಂದ ಬೇರೆ ತಾಲೂಕಿನವರು ಅಲ್ಲಿಗೆ ತೆರಳುವುದು ಕಷ್ಟವಾಗುತ್ತದೆ. ಅಭಿವೃದ್ಧಿ ಆಗಬೇಕೆಂದರೆ ಶಿರಸಿ ಜಿಲ್ಲೆ ಆಗಬೇಕು. ಸಿಎಂ ಸಹ ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಶಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ಇದು ಅನೇಕ ವರ್ಷಗಳಿಂದ ನಡೆಯುತ್ತಿರುವ ಹೋರಾಟ. 12 ತಾಲೂಕುಗಳನ್ನು ಹೊಂದಿರುವ ಬಹುದೊಡ್ಡ ಜಿಲ್ಲೆ ಆಗಿರುವುದರಿಂದ, ಹೆಚ್ಚು ಗುಡ್ಡಗಾಡು ಪ್ರದೇಶ ಇರುವುದರಿಂಧ ರಸ್ತೆ ಸಂಪರ್ಕದ ಸಮಸ್ಯೆಯೂ ಇದೆ. ಕಾರವಾರಕ್ಕೆ ಹೋಗಬೇಕಾದರೆ, ವರ್ಷದ ನಾಲ್ಕೈದು ತಿಂಗಳು ಸಂಚಾರ ಸಮಸ್ಯೆ ಇರುತ್ತದೆ. ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದ್ದೇವೆ, ಅವರಿಗೆ ಇದರ ವಿಚಾರ ತಿಳಿದಿದೆ. ಎಲ್ಲ ರಾಜಕೀಯ ಪಕ್ಷಗಳ ಕೇಂದ್ರ ಸ್ಥಾನ ಶಿರಸಿಯೇ ಆಗಿದೆ, ಶೈಕ್ಷಣಿಕ ಜಿಲ್ಲೆಯೂ ಆಗಿರುವುದರಿಂದ ಘಟ್ಟದ ಮೇಲಿನ ಏಳು ತಾಲೂಕು ಸೇರಿಸಿ ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದ್ದೇವೆ. ಹೊಸ ಜಿಲ್ಲೆಗಳನ್ನು ರೂಪಿಸುವಾಗ ಇದನ್ನೂ ಪರಿಗಣಿಸುವುದಾಗಿ ಹೇಳಿದ್ದಾರೆ. ಸದ್ಯದಲ್ಲೇ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಮಾತನಾಡಿ, ಸತತ 38 ವರ್ಷದ ಹೋರಾಟ ಕೊನೆಯ ಹಂತಕ್ಕೆ ಬಂದು ತಲುಪಿದೆ. ಕಾರವಾರಕ್ಕೆ ಹೋಗಲು ನಮಗೆ ಮೂರು ಗಂಟೆ ಬೇಕಾಗುತ್ತದೆ. ನಮಗಿಂತಲೂ ಹೆಚ್ಚಾಗಿ ಮುಂಡಗೋಡು, ಸಿದ್ದಾಪುರದವರಿಗೆ ಇನ್ನೂ ದೂರವಾಗುತ್ತದೆ. ಈ ಹೋರಾಟಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ್ ಅವರುಗಳು ಸಿಎಂ ಅವರಿಗೆ ಮನವರಿಕೆ ಮಾಡಿದ್ದಾರೆ. ಹೊಸ ಜಿಲ್ಲೆಗಳನ್ನು ಮಾಡುವಾಗ ಶಿರಸಿಗೆ ಪ್ರಾಶಸ್ತ್ಯ ನೀಡುತ್ತೇವೆ ಎಂಬ ಭರವಸೆಯನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ ಎಂದು ತಿಳಿಸಿದರು.
ಈದನ್ನೂ ಓದಿ | Siddapura News | ಶಿರಸಿ ಜಿಲ್ಲೆ ರಚನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜತೆ ಚರ್ಚೆ: ಮಾರುತಿ ನಾಯ್ಕ