ಶಿರಸಿ: ಗಣೇಶ ಚತುರ್ಥಿಯಂದು (Ganesh Chaturthi 2022) ಪೂಜಿಸಲಾಗುವ ಮಣ್ಣಿನ ಗಣಪತಿಯನ್ನು ಬಹಳ ಮೊದಲೇ ಸಿದ್ಧಪಡಿಸುವ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಗಣೇಶನ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿದ್ದರೂ, ಮಣ್ಣಿನಲ್ಲಿ ವಿಗ್ರಹವನ್ನು ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಇಲ್ಲಿಯ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಯುವತಿಯೊಬ್ಬರು ಗಣೇಶನ ಮೂರ್ತಿಯನ್ನು ಮಾಡುವ ಮೂಲಕ ಪೂಜಿಸುವವರಿಗೆ ಮಣ್ಣಿನ ಗಣಪ ದೊರೆಯುವಂತೆ ಮಾಡುತ್ತಿದ್ದಾರೆ.
ಇವರ ಹೆಸರು ರಾಜಶ್ರೀ ರಾಜರಾಮ್ ಭಟ್. ಶಿರಸಿ ತಾಲೂಕಿನ ಹೆಗ್ಗರಸಿಯವರು. ಧಾರವಾಡದ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯಲ್ಲಿ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಸಾಪ್ಟ್ ವೇರ್ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಗೌರಿ ಗಣೇಶ ಹಬ್ಬಕ್ಕೆಂದು ರಜೆ ಹಾಕಿ ಊರಿಗೆ ಬರುವ ಇವರು ತಮ್ಮ ಮನೆಯಲ್ಲಿ ಹಬ್ಬ ಆಚರಣೆಗಾಗಿ ಗಣೇಶನ ವಿಗ್ರಹವನ್ನು ತಾವೇ ನಿರ್ಮಿಸುತ್ತಾರೆ. ಯಾವ ಕಲಾವಿದರಿಗೂ ಕಡಿಮೆಯಿಲ್ಲದಂತೆ ಸುಂದರವಾದ ಪರಿಸರ ಸ್ನೇಹಿ, ಗಣಪನನ್ನು ತಯಾರಿಸುತ್ತಾರೆ. ಇದನ್ನು ಹವ್ಯಾಸವಾಗಿ ಬೆಳೆಸಿಕೊಂಡಿರುವ ಅವರು ಗಣಪತಿ ವಿಗ್ರಹ ಬೇಕೆಂದು ಕೇಳಿದವರಿಗೆಲ್ಲಾ ಈ ಸುಂದರ ವಿಗ್ರಹಗಳನ್ನು ಸಿದ್ಧಪಡಿಸಿ ನೀಡುತ್ತಾರೆ.
ಬಾಲ್ಯದಿಂದಲೂ ಮಣ್ಣಿನ ವಿಗ್ರಹ ರೂಪಿಸುವ ಕಲೆಯಲ್ಲಿ ಆಸಕ್ತಿ ಹೊಂದಿರುವ ಇವರು, ಗಣೇಶನ ಮೂರ್ತಿ ನಿರ್ಮಾಣ ಮನಸ್ಸಿಗೆ ಸಂತೋಷ ಉಂಟುಮಾಡುತ್ತದೆ. ಅದಕ್ಕೇ ಪ್ರತೀ ವರ್ಷ ಇವುಗಳನ್ನು ನಾನೇ ನಿರ್ಮಿಸುತ್ತೇನೆ ಎಂದಿದ್ದಾರೆ.
ಲಕ್ಷಗಳ ಲೆಕ್ಕದಲ್ಲಿ ವೇತನ ಪಡೆಯುವ ಇಂದಿನ ಯುವಜನತೆ ಇತ್ತೀಚಿನ ವರ್ಷಗಳಲ್ಲಿ ಐಶಾರಾಮಿ ಜೀವನ ನಡೆಸುತ್ತಾ, ಎಲ್ಲವನ್ನೂ ಮಾರುಕಟ್ಟೆಯಲ್ಲಿ ಕೊಳ್ಳುತ್ತಿದೆ. ಇವರ ನಡುವೆ ಈ ಯುವತಿ ಭಿನ್ನವಾಗಿ ಕಾಣುತ್ತಾರೆ.
ಇದನ್ನೂ ಓದಿ| Ganesh Chaturthi 2022 | ತತ್ವಮಯನಾದ ದೇವ ಗಣಪತಿ