Site icon Vistara News

Hanuman Flag : ಕೆರಗೋಡು ಬಳಿಕ ಭಟ್ಕಳದಲ್ಲಿ ಧ್ವಜ ದಂಗಲ್‌; ಸಾವರ್ಕರ್‌ ವೃತ್ತ, ಭಗವಾಧ್ವಜ ತೆರವಿಗೆ ಭುಗಿಲೆದ್ದ ಆಕ್ರೋಶ

Hanuman Flag Bhatkal Case2

ಕಾರವಾರ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹುಟ್ಟಿಕೊಂಡ ಹನುಮಾನ್‌ ಧ್ವಜ (Hanuman Flag) ಸಂಬಂಧಿಸಿದ (Dhwaja Dangal) ಧ್ವಜ ದಂಗಲ್‌ ಬೆಂಗಳೂರಿನ ಶಿವಾಜಿ ನಗರಕ್ಕೆ ಹೋಗಿ ಇದೀಗ ಕರಾವಳಿಯ ಭಟ್ಕಳಕ್ಕೆ ತಲುಪಿದೆ (Bhatkal Controversy). ಕೆರಗೋಡು ಮಾದರಿಯಲ್ಲಿ ಭಟ್ಕಳದ ತೆಂಗಿನಗುಂಡಿಯಲ್ಲಿ ಸ್ಥಾಪಿಸಲಾಗಿರುವ ಸಾವರ್ಕರ್‌ ವೃತ್ತವನ್ನು ನೆಲಸಮ ಮಾಡಲಾಗಿದೆ, ಅದರಲ್ಲಿದ್ದ ಸಾವರ್ಕರ್‌ ನಾಮಫಲಕವನ್ನು ತೆರವು ಮಾಡಲಾಗಿದೆ. ಜತೆಗೆ ಭಗವಾಧ್ವಜವನ್ನು (Police Vacate Savarkar nameplate, flag) ತೆಗೆದುಹಾಕಲಾಗಿದೆ. ಇದರಿಂದಾಗಿ ಭಟ್ಕಳದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಭಟ್ಕಳದ ತೆಂಗಿನಗುಂಡಿ ಬೀಚ್‌ನಲ್ಲಿ ಒಂದು ವೃತ್ತವಿದ್ದು ಅದರಲ್ಲಿ ಭಗವಾಧ್ವಜ ಏರಿಸಲಾಗಿದೆ. ಮಂಡ್ಯದ ಕೆರಗೋಡಿನಲ್ಲಿ ಸಾರ್ವಜನಿಕ ಜಾಗದಲ್ಲಿ ರಾಷ್ಟ್ರ ಧ್ವಜ, ನಾಡಧ್ವಜ ಬಿಟ್ಟು ಬೇರೆ ಧ್ವಜಗಳನ್ನು ಹಾಕುವಂತಿಲ್ಲ ಎಂಬ ಸೂಚನೆಯ ಬಗ್ಗೆ ಚರ್ಚೆ ಜೋರಾಗಿದೆ. ಸಾರ್ವಜನಿಕರು ತಮ್ಮೂರಿನಲ್ಲಿ ಹೀಗೆ ಅನಧಿಕೃತವಾಗಿ ಕಟ್ಟಿದ ಕಟ್ಟೆಗಳು, ಧ್ವಜಗಳ ಬಗ್ಗೆ ಗಮನ ಸೆಳೆಯುತ್ತಿದ್ದಾರೆ, ಕೆಲವು ಕಡೆ ಅವುಗಳನ್ನು ತೆರವುಗೊಳಿಸಬೇಕು ಎಂಬ ಒತ್ತಡವೂ ಸೃಷ್ಟಿಯಾಗಿದೆ. ಬೆಂಗಳೂರಿನ ಶಿವಾಜಿ ನಗರದಲ್ಲೂ ಇದೇ ಪ್ರಶ್ನೆ ಉದ್ಭವವಾಗಿ ಅಲ್ಲಿ ಬಿಬಿಎಂಪಿ ಧ್ವಜ ಸ್ತಂಭದಲ್ಲಿ ಹಾರಿಸಲಾಗಿದ್ದ ಹಸಿರು ಬಾವುಟವನ್ನು ಪೊಲೀಸರು ತೆರವು ಮಾಡಿಸಿದರು. ಈ ನಡುವೆ ಭಟ್ಕಳದ ತೆಂಗಿನಗುಂಡಿ ಬೀಚ್‌ನಲ್ಲಿ ನಿರ್ಮಿಸಲಾದ ವೀರ ಸಾರ್ವಕರ್ ವೃತ್ತ ಮತ್ತು ಭಗವಾಧ್ವಜದ ಮೇಲೆ ಇದಕ್ಕೂ ಮೊದಲೇ ಕಣ್ಣು ಬಿದ್ದಿತ್ತು.

ಭಟ್ಕಳದ ತೆಂಗಿನಗುಂಡಿಯಲ್ಲಿದ್ದ ಕಟ್ಟೆ ಮತ್ತು ಅದರಲ್ಲಿ ಹಾಕಿದ್ದ ಸಾವರ್ಕರ್‌ ವೃತ್ತದ ನಾಮಫಲಕ

Hanuman Flag : ರಾಮ ಮಂದಿರ ಲೋಕಾರ್ಪಣೆ ಸಂಭ್ರಮಾಚರಣೆ ನಡೆದಿತ್ತು

ತೆಂಗಿನಗುಂಡಿ ಗ್ರಾಮದ ಬಂದರು ರಸ್ತೆ ಬಳಿ ಈ ಹಿಂದೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದು ಕಟ್ಟೆ ನಿರ್ಮಿಸಿ, ವೀರ ಸಾವರ್ಕರ್ ವೃತ್ತ ಎಂದು ನಾಮಫಲಕ ಅಳವಡಿಸಲಾಗಿತ್ತು. ಇದೇ ವೃತ್ತದಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡ ಜನವರಿ 22 ರಂದು ಸಂಭ್ರಮಾಚರಣೆ ನಡೆಸಿದ್ದ ಹಿಂದೂ ಕಾರ್ಯಕರ್ತರು ಇದೇ ಕಟ್ಟೆಯಲ್ಲಿ ಧ್ವಜ ಕಂಬವನ್ನ ನೆಟ್ಟು ಭಗವಾಧ್ವಜವನ್ನು ಹಾರಿಸಿದ್ದರು.

ಭಟ್ಕಳದ ತೆಂಗಿನಗುಂಡಿಯಲ್ಲಿ ಇದ್ದ ಸಾವರ್ಕರ್‌ ವೃತ್ತವನ್ನು ತೆರವುಗೊಳಿಸುತ್ತಿರುವುದು

ಆದರೆ ಕಳೆದ ಶನಿವಾರ ಪೊಲೀಸರು ಜೆಸಿಬಿ ಬಳಸಿ ಏಕಾಏಕಿ ಧ್ವಜದ ಕಂಬ ಸಹಿತ ಕಟ್ಟೆಯನ್ನೂ ತೆರವುಗೊಳಿಸಿದ್ದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವೀರ ಸಾವರ್ಕರ್ ನಾಮಫಲಕ ಹಾಗೂ ಧ್ವಜದ ಕಟ್ಟೆ ತೆರವುಗೊಳಿಸಿದ್ದನ್ನ ಪ್ರಶ್ನಿಸಿ ಮಂಗಳವಾರ ಹೆಬಳೆ ಗ್ರಾಮ ಪಂಚಾಯತ್ ಎದುರು ಬಿಜೆಪಿ ಮುಖಂಡ ಗೋವಿಂದ್ ನಾಯ್ಕ ನೇತೃತ್ವದಲ್ಲಿ ಪಂಚಾಯತ್‌ನ ಕೆಲ ಸದಸ್ಯರು ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Hanuman Flag Bhatkal Case1

ಪಂಚಾಯತ್ ಗಮನಕ್ಕೆ ತಂದು ಅಳವಡಿಸಲಾಗಿದ್ದ ವೀರ ಸಾವರ್ಕರ್ ನಾಮಫಲಕವನ್ನು ಯಾವುದೇ ಸೂಚನೆ ನೀಡದೇ ತೆರವುಗೊಳಿಸಿದ್ದು ಅಲ್ಲಿದ್ದ ಧ್ವಜದ ಕಟ್ಟೆಯನ್ನು ಜೆಸಿಬಿ ಬಳಸಿ ತೆಗೆದುಹಾಕಲು ಸೂಚನೆ ನೀಡಿದ ಕುರಿತು ಪ್ರತಿಭಟನಾಕಾರರು ಪಂಚಾಯತ್ ಪಿಡಿಓ ಅವರನ್ನು ಪ್ರಶ್ನಿಸಿದರು. ಅಲ್ಲದೇ ನಾಮಫಲಕ ಅಳವಡಿಸಿದ್ದಕ್ಕೆ ಯಾರಿಂದ ವಿರೋಧ ವ್ಯಕ್ತವಾಗಿದೆ ಎನ್ನುವುದನ್ನು ಬಹಿರಂಗಪಡಿಸುವಂತೆ ಬಿಜೆಪಿ ಮುಖಂಡ ಗೋವಿಂದ್ ನಾಯ್ಕ ಒತ್ತಾಯಿಸಿ, ತರಾಟೆಗೆ ತೆಗೆದುಕೊಂಡರು.

ಈ ವೇಳೆ ಅನಧಿಕೃತವಾಗಿ ಅಳವಡಿಕೆ ಮಾಡಿದ್ದರಿಂದ ನಾಮಫಲಕ ತೆರವುಗೊಳಿಸಿದ್ದಾಗಿ ಪಿಡಿಓ ತಿಳಿಸಿದ್ದು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಗ್ರಾಮದಲ್ಲಿ ಇನ್ನೂ ಹಲವಾರು ಅನಧಿಕೃತ ನಾಮಫಲಕಗಳಿದ್ದು ಅವುಗಳನ್ನು ತೆರವುಗೊಳಿಸುವಂತೆ ಪಂಚಾಯಿತಿ ಗಮನಕ್ಕೆ ತರಲಾಗಿತ್ತು. ಆದರೆ ಅನ್ಯಕೋಮಿನವರ ಅನಧಿಕೃತ ನಾಮಫಲಕಗಳನ್ನ ತೆರವುಗೊಳಿಸದೇ ಕೇವಲ ವೀರ ಸಾವರ್ಕರ್ ನಾಮಫಲಕವನ್ನ ತೆರವುಗೊಳಿಸಿರುವುದು ಖಂಡನೀಯವಾಗಿದ್ದು, ಉಳಿದ ಅನಧಿಕೃತ ನಾಮಫಲಕಗಳನ್ನು ತೆರವುಗೊಳಿಸಿದಲ್ಲಿ ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯೋದಾಗಿ ಪಂಚಾಯತ್ ಸದಸ್ಯರು ಎಚ್ಚರಿಸಿದ್ದಾರೆ.

Hanuman Flag Bhatkal Case1

Hanuman Flag : ಮತ್ತೆ ಧ್ವಜ ಸ್ತಂಭ ಸ್ಥಾಪನೆಗೆ ಪ್ರಯತ್ನ, ವಾಗ್ವಾದ

ಪ್ರತಿಭಟನೆ ಬಳಿಕ ಮದ್ಯಾಹ್ನದ ವೇಳೆ ತೆಂಗಿನಗುಂಡಿ ಬಂದರು ರಸ್ತೆಗೆ ತೆರಳಿದ ಹಿಂದೂ ಕಾರ್ಯಕರ್ತರು, ಮತ್ತೆ ಧ್ವಜದ ಕಟ್ಟೆ ನಿರ್ಮಿಸಿ ಕಂಬವನ್ನು ಸ್ಥಾಪಿಸಲು ಮುಂದಾದರು. ಇದು ಪೊಲೀಸರು ಮತ್ತು ಹಿಂದೂ ಕಾರ್ಯಕರ್ತರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಪೊಲೀಸರಿಗೆ ಮನವಿ ಮಾಡಿದ ಹಿಂದೂ ಕಾರ್ಯಕರ್ತರು ಗ್ರಾಮದಲ್ಲಿ ಇತರೆ ಅನಧಿಕೃತ ನಾಮಫಲಕಗಳು ಸಹ ಇದ್ದು ಅವುಗಳನ್ನ ತೆರವುಗೊಳಿಸಿದಲ್ಲಿ ತಾವಾಗಿಯೇ ಧ್ವಜಕಟ್ಟೆಯನ್ನ ತೆಗೆದುಹಾಕುತ್ತೇವೆ. ಇಲ್ಲವಾದಲ್ಲಿ ಈ ಕಟ್ಟೆಯನ್ನು ತೆರವುಗೊಳಿಸಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ : Hanuman Flag : ಮಂಡ್ಯಕ್ಕೆ ಬೆಂಕಿ ಹಚ್ಚಿದ್ದು ನಾನಲ್ಲ, ಸರ್ಕಾರ; ಚೆಲುವರಾಯ ಸ್ವಾಮಿಗೆ HDK ತಿರುಗೇಟು

ಇದಾದ ಬಳಿಕ ಅನಧಿಕೃತ ನಾಮಫಲಕಗಳ ತೆರವಿಗೆ 15 ದಿನಗಳ ಗಡುವು ನೀಡಿದ ಹಿಂದೂ ಕಾರ್ಯಕರ್ತರು ಅಲ್ಲಿಯವರೆಗೆ ತಾವು ನಿರ್ಮಿಸಿದ ಕಟ್ಟೆಯನ್ನೂ ಸಹ ತೆಗೆಯದಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Exit mobile version