ಕಾರವಾರ: ಮೀನುಗಾರ ಮುಖಂಡ ರಾಜು ತಾಂಡೇಲ್ ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ. ರಾಜು ತಾಂಡೇಲ್ ಜಿಲ್ಲಾ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷರಾಗಿದ್ದರು. ಬೆಳಗಿನ ಜಾವ 3:30ರ ವೇಳೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಅಂತಿಮ ದರ್ಶನ ಪಡೆದರು.
ಜಿಲ್ಲಾ ಆಸ್ಪತ್ರೆಯಿಂದ ಹೊರಟ ಅಂತಿಮ ಮೆರವಣಿಗೆಯಲ್ಲಿ ಶಾಸಕ ಸತೀಶ್ ಸೈಲ್, ಮಾಜಿ ಸಚಿವ ಆನಂದ ಅಸ್ನೋಟಿಕರ್, ಮೀನುಗಾರ ಮುಖಂಡರು, ನೂರಾರು ಮೀನುಗಾರರು ಭಾಗಿಯಾಗಿದ್ದರು. ಕಾರವಾರ ತಾಲೂಕಿನ ಚಿತ್ತಾಕುಲದ ಆಜಾದ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:Assault Case : ಬೆಂಗಳೂರಿನಲ್ಲಿ ನಿಲ್ಲದ ರೋಡ್ ರೇಜ್ ಕಿರಿಕ್; ಕಾರಿನ ಮೇಲೆ ಕಲ್ಲು ಎತ್ತಿಹಾಕಿ ಪುಂಡಾಟ
ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರುಪಾಲು
ನದಿ ಪಾತ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯೊಬ್ಬ ನೀರುಪಾಲಾಗಿದ್ದಾರೆ. ಚಿತ್ರದುರ್ಗದ ಕೆಲ್ಲೋಡು ಬಳಿಯ ವೇದಾವತಿ ನದಿ ಪಾತ್ರದಲ್ಲಿ ಘಟನೆ ನಡೆದಿದೆ. ಜಾನಕಲ್ ಗ್ರಾಮದ ಶಿವು ನೀರಲ್ಲಿ ಕೊಚ್ಚಿ ಹೋದವರು.
ತುಂಬಿ ಹರಿಯುತ್ತಿದ್ದ ವೇದವತಿ ನದಿ ನೀರಲ್ಲಿ ಮೀನಿಗಾಗಿ ಬಲೆ ಹಾಕುವಾಗ ಶಿವು ಮುಗ್ಗರಿಸಿ ಬಿದ್ದಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ನದಿ ಪಾತ್ರಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಕೊಚ್ಚಿ ಹೋದ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಶ್ರೀರಾಂಪುರ ಪೊಲೀಸ್ ಠಾಣೆ ಪಿಎಸ್‌ಐ ಮಧು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಳ್ಳ ದಾಟುವಾಗ ನೀರಲ್ಲಿ ಸಿಕ್ಕಿಕೊಂಡ ವ್ಯಕ್ತಿ
ವ್ಯಕ್ತಿಯೊಬ್ಬರು ಹಳ್ಳ ದಾಟುವಾಗಲೇ ನೋಡ ನೋಡುತ್ತಿದ್ದಂತೆ ನೀರು ರಭಸವಾಗಿ ಹರಿದು ಬಂದಿದೆ. ಬೈಕ್ ಸಮೇತ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಮೈ ಜುಮ್ ಎನ್ನಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಾವಣಗೆರೆಯ ಹರಪನಹಳ್ಳಿಯ ಹೊಸಹಳ್ಳಿ ಸೇತುವೆ ಬಳಿ ಘಟನೆ ನಡೆದಿದೆ. ಮಲ್ಲೇಶ್(61) ಸಾವಿನ ದವಡೆಯಿಂದ ಪಾರಾದವರು. ಸ್ಥಳೀಯರು ಮಲ್ಲೇಶ್‌ರ ಕೈ ಹಿಡಿದು ಎಳೆದು ಪಾರು ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ