ಕಾರವಾರ/ಉಡುಪಿ: ರಾಜ್ಯದ ಕರಾವಳಿ ಭಾಗದಲ್ಲಿ ವರುಣನ ಆರ್ಭಟ (Rain News) ಮುಂದುವರಿದಿದ್ದು, ಉತ್ತರ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆ ಸೇರಿ ಕರಾವಳಿಯಾದ್ಯಂತ ಶನಿವಾರ (ಜುಲೈ 6) ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆಯ (Weather News) ಕುರಿತು ಹವಾಮಾನ ಇಲಾಖೆ ವರದಿ ನೀಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆ-ಕಾಲೇಜುಗಳಿಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಜೆ ಘೋಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 6ರಂದು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ರಜೆ ಘೋಷಣೆ ಮಾಡಿದ್ದಾರೆ. ಪದವಿ ಕಾಲೇಜು ಹೊರತುಪಡಿಸಿ ಉಳಿದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಹಲವು ಕಟ್ಟಡಗಳು ಕುಸಿದಿವೆ.
ಉಡುಪಿ ಜಿಲ್ಲೆಯಲ್ಲೂ ರಜೆ
ಮಳೆಯ ಹಿನ್ನೆಲೆಯಲ್ಲಿ ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕುಗಳು ಸೇರಿ ಜಿಲ್ಲಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿ ಪೂರ್ವ ವಿಭಾಗಕ್ಕೆ ರಜೆ ಘೋಷಿಸಲಾಗಿದೆ. ಆದರೆ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮಾ ,ಎಂಜಿನಿಯರಿಂಗ್, ಐಟಿಐ ವಿದ್ಯಾಸಂಸ್ಥೆಗಳಿಗೆ ರಜೆ ಇಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಎರಡು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ವೇದಗಂಗಾ ಹಾಗೂ ದೂದಗಂಗಾ ನದಿ ಮೈದುಂಬಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಬಾರವಾಡ-ಕುನ್ನೂರ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ. ದೂದಗಂಗಾ ನದಿಯಿಂದ ಕಾರದಗಾ-ಭೋಜ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಕೃಷ್ಣಾ ನದಿಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಸೂಚನೆ ನೀಡಿದೆ. ಆದರೆ ಜಿಲ್ಲಾಡಳಿತದ ಮನವಿಗೆ ಕ್ಯಾರೇ ಎನ್ನದ ಜನರು ನದಿಯಲ್ಲಿ ಇಳಿದು ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿ ಮೀನು ಹಿಡಿಯಲು ಮುಂದಾಗಿದ್ದಾರೆ. ಹೀಗಾಗಿ ನದಿ ಬಳಿ ಬಂದೋಬಸ್ತ್ ಸಲುವಾಗಿ ಜಿಲ್ಲಾಡಳಿತದಿಂದ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ