Site icon Vistara News

Karwar News | ನಿಧಿಗಾಗಿ ಅರಣ್ಯದಲ್ಲಿ ಬಾವಿ ತೆಗೆಯುತ್ತಿದ್ದ ಮೂವರು ಪೊಲೀಸರ ವಶಕ್ಕೆ

Hidden Treasure

ಕಾರವಾರ: ಆಧುನಿಕತೆ ಎಷ್ಟೇ ಬೆಳೆದರೂ, ಮೌಢ್ಯ ಎಂದಿಗೂ ಹೋಗುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಕರಾವಳಿ ನಗರಿ ಕಾರವಾರದ ಹಳ್ಳಿಯೊಂದರಲ್ಲಿ ಘಟನೆ ನಡೆದಿದೆ. ದೇವಿ ಕನಸಿನಲ್ಲಿ ಬಂದು ಹೇಳಿದ್ದಾಳೆ ಎಂದು ಕಾಡಲ್ಲಿ ಕಲ್ಲಿಗೆ ಪೂಜೆ ಮಾಡಿ ಬಾವಿಯನ್ನೇ ತೋಡಿದ್ದಾನೆ. ಹೀಗೆ ನಿಧಿ ಆಸೆಗಾಗಿ ದಟ್ಟ ಅರಣ್ಯದಲ್ಲಿ ಅಕ್ರಮವಾಗಿ ಬಾವಿ ತೆಗೆಯಲು ಹೋದ ನಾಲ್ವರು ಪೊಲೀಸರ ಅತಿಥಿಯಾಗಿದ್ದಾರೆ. ಇಂತಹದ್ದೊಂದು ವಿಚಿತ್ರ ಘಟನೆ ನಡೆದಿರೋದು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿ.

ಕಾರವಾರ ತಾಲೂಕಿನ ಶಿರವಾಡ ಮೂಲದ ಹಿದಾಯತ್ ಅಬ್ದುಲ್‌ಘನಿ ರಾಣೇಬೆನ್ನೂರು ಪ್ರಮುಖ ಆರೋಪಿಯಾಗಿದ್ದಾನೆ. ರುಸ್ತುಂ ರಜಾಕ್‌ಸಾಬ್ ಪಠಾಣ್, ಹರ್ಷದ್ಅಲಿ ಹೈದರ್‌ಅಲಿ ಅನ್ಸಾರಿ ಹಾಗೂ ಸರ್ಫರಾಜ್ ಹಬೀಬುಲ್ಲಾ ಸಲ್ಮಾನಿ ಆತನ ಸಹಚರರು.

ಆರೋಪಿಗಳು ದಟ್ಟ ಅರಣ್ಯದಲ್ಲಿ ಕಲ್ಲಿಗೆ ಹೂವು, ನಿಂಬೆಹಣ್ಣಿನ ಹಾರ ಹಾಕಿ ಅರಿಶಿಣ, ಕುಂಕುಮ ಇಟ್ಟು ಪೂಜೆ ಮಾಡಿದ್ದಾರೆ. ಇನ್ನೊಂದೆಡೆ ಪೂಜೆ ಮಾಡಿದ ಸ್ಥಳದ ಪಕ್ಕದಲ್ಲೇ ದೊಡ್ಡ ಬಾವಿ ತೆಗೆಯಲಾಗಿದೆ. ಶಿರವಾಡ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ 195ರ ಅರಣ್ಯ ಪ್ರದೇಶದಲ್ಲಿ ಯಾರೋ ಅಪರಿಚಿತರು ಬಾವಿ ತೆಗೆಯುತ್ತಿದ್ದಾರೆ ಎನ್ನುವ ಮಾಹಿತಿ ಅರಣ್ಯ ಇಲಾಖೆಗೆ ತಿಳಿದು ಬಂದಿತ್ತು. ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದಾಗ ಪ್ರಮುಖ ಆರೋಪಿ ವ್ಯಕ್ತಿಯೊಬ್ಬ ತನಗೆ ಮಾರಿಕಾಂಬೆ ಅಮ್ಮ ಕನಸಿನಲ್ಲಿ ಬಂದು ಹೇಳಿದ್ದಾಳೆ. ಇಲ್ಲಿ ಬಾವಿ ತೋಡಿ ಈ ನೀರಿನಿಂದ ಅಭಿಷೇಕ ಮಾಡುವಂತೆ ಸೂಚನೆ ನೀಡಿದ್ದರಿಂದ ತಾನು ಬಾವಿ ತೆಗೆಯುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗೆ ನಿಧಿ ಶೋಧಕ್ಕಾಗಿ ಬಾವಿ ತೆಗೆಯುತ್ತಿರುವುದು ಗಮನಕ್ಕೆ ಬಂದಿದ್ದು ತಕ್ಷಣ ಸ್ಥಳದಲ್ಲಿದ್ದ ನಾಲ್ವರನ್ನೂ ವಶಕ್ಕೆ ಪಡೆದುಕೊಂಡು ಬಾವಿ ತೋಡುತ್ತಿದ್ದ ಸಲಕರಣೆಗಳನ್ನ ಜಪ್ತು ಮಾಡಿದ್ದಾರೆ.

15 ಅಡಿ ಬಾವಿ

ಆರೋಪಿಗಳು ಕಳೆದ ಎಳ್ಳಮವಾಸ್ಯೆಯಂದು ಕಲ್ಲಿಗೆ ಪೂಜೆ ಸಲ್ಲಿಸಿ ಬಾವಿ ತೋಡಲು ಆರಂಭಿಸಿದ್ದು ಸುಮಾರು ನಾಲ್ಕು ಅಡಿ ಸುತ್ತಳತೆಯಲ್ಲಿ ಬರೋಬ್ಬರಿ 15 ಅಡಿ ಮಣ್ಣು ಅಗೆದು ಬಾವಿ ತೋಡಿದ್ದಾರೆ. ಪ್ರಮುಖ ಆರೋಪಿ ಹಿದಾಯತ್ ಅಬ್ದುಲ್‌ಘನಿ ಗುಜರಿ ವ್ಯಾಪಾರಿಯಾಗಿದ್ದು ಶಿರವಾಡದಲ್ಲೇ ಅಂಗಡಿ ಹೊಂದಿದ್ದಾನೆ. ಅಲ್ಲದೇ ಕಟ್ಟಡ ನಿರ್ಮಾಣ ಕೆಲಸವನ್ನೂ ಮಾಡಿಕೊಂಡಿದ್ದ ಎನ್ನಲಾಗದೆ. ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ Elephant attack | ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ರೈತ ಬಲಿ

Exit mobile version