ಹೊನ್ನಾವರ: ಪಟ್ಟಣದ ಶರಾವತಿ ಸೇತುವೆ ಮೇಲಿಂದ ಇಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ರಾತ್ರಿ ವೇಳೆ ಹಾಗೂ ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಇಬ್ಬರೂ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ. ಇಬ್ಬರು ಪ್ರೇಮಿಗಳು ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಯುವತಿಯ ಶವವು ಶರಾವತಿ ನದಿಗೆ ಹೊಂದಿಕೊಂಡಿರುವ ಟೊಂಕ ಸಮೀಪ ಸಿಕ್ಕಿದ್ದು, ಇನ್ನೊಬ್ಬರ ಪತ್ತೆ ಕಾರ್ಯ ಮುಂದುವರೆದಿದೆ. ಸೇತುವೆ ಪಕ್ಕ ಇಬ್ಬರ ಚಪ್ಪಲಿ ಹಾಗೂ ಬ್ಯಾಗ್, ಬಸ್ ಪ್ರಯಾಣದ ಟಿಕೇಟ್ ಪತ್ತೆ ಆಗಿವೆ. ಇವರ ಗುರುತು ಮತ್ತಿತರ ವಿವರಗಳು ತಿಳಿದುಬರಬೇಕಿವೆ.
ಸೇತುವೆ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಇನ್ನೊಂದು ಶವದ ಪತ್ತೆ ನಡೆಯುತ್ತಿದೆ. ಸ್ಥಳಕ್ಕೆ ಹೊನ್ನಾವರ ಸಿ.ಪಿ.ಐ. ಮಂಜುನಾಥ ಇ.ಓ, ಪಿಎಸೈ ಪ್ರವೀಣಕುಮಾರ, ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.
ಸಾಲ ಪಾವತಿಗೆ ನೋಟೀಸ್, ನೊಂದ ರೈತ ಆತ್ಮಹತ್ಯೆ
ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಮೂಗುಡ್ತಿ ಗ್ರಾಮದ ಕೋಮಲಾಪುರ ನಿವಾಸಿ ಮಂಕಪ್ಪ (85) ಅವರು ಆತ್ಮಹತ್ಯೆ (Farmer suicide) ಮಾಡಿಕೊಂಡಿದ್ದಾರೆ. ಸಾಲದ ಬಾಧೆಯಿಂದ ನೊಂದಿದ್ದ ಅವರು ಕಳೆ ನಾಶಕ ಸೇವಿಸಿ ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಕಪ್ಪ ಅವರು ಗುರುವಾರ ಸಂಜೆ ವಿಷ ಸೇವಿಸಿದ್ದರು. ತಕ್ಷಣ ಅವರನ್ನು ರಿಪ್ಪನ್‌ಪೇಟೆಯ ಸರ್ಕಾರಿ ಅಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಇಂದು ನಿಧನ ಹೊಂದಿದ್ದಾರೆ.
ಇವರು ತಳಲೆ ವಿ.ಎಸ್.ಎಸ್.ಎನ್.ಬಿ.ಯಲ್ಲಿ 1,15,000 ಬೆಳೆ ಸಾಲ ಮತ್ತು 50,000 ಸಾವಿರ ವೈಯಕ್ತಿಕ ಸಾಲ ಹಾಗೂ ಕೈಗಡ ಸಾಲ ಸಹ 3,50,000 (ಮೂರುವರೆ) ಲಕ್ಷ ರೂ ಸಾಲ ಮಾಡಿದ್ದರು. ಈ ಬಾರಿ ಬೆಳೆ ಸರಿಯಾಗಿ ಬಂದಿರಲಿಲ್ಲ. ಜತೆಗೆ ಬೇಸಿಗೆ ಬಿರುಬಿಸಿಲಿನಿಂದಾಗಿ ತೋಟ ಒಣಗುತ್ತಿದ್ದು ಪಡೆದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ತಳಲೆ ಸಹಕಾರ ಬ್ಯಾಂಕ್ ನೋಟಿಸಿನಿಂದಾಗಿ ಬೇಸತ್ತು ವಿಷ ಸೇವಿಸಿದ್ದಾರೆಂದು ಮಗ ಪುಟ್ಟಸ್ವಾಮಿ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.