ಕಾರವಾರ: ಕಳೆದ ವಾರ ನಡೆದ ಮುಸ್ಲಿಮರ ಈದ್ ಮೆರವಣಿಗೆ (Eid Procession) ವೇಳೆ ರಾಷ್ಟ್ರ ಧ್ವಜಕ್ಕೆ ಅಪಮಾನ (Disrespecting National Flag) ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತ್ರಿವರ್ಣ ಧ್ವಜದ ಅಶೋಕ ಚಕ್ರ ತೆಗೆದು ಅರ್ಧಚಂದ್ರದೊಂದಿಗೆ ಉರ್ದು ಬರವಣಿಗೆ ಬರೆಸಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದಲ್ಲಿ ನಡೆದಿದ್ದ ಘಟನೆ ಇದಾಗಿದೆ.
ಮಿರ್ಜಾನ್‌ನ ಜಮಾತ್ ಉಲ್ ಮುಸ್ಲಮಿನ್ ಕಮಿಟಿ ನಡೆಸಿದ್ದ ಮೆರವಣಿಗೆ ವೇಳೆ ಯುವಕರು ಅತ್ಯಂತ ಉತ್ಸಾಹದಿಂದ ರಾಷ್ಟ್ರ ಧ್ವಜವನ್ನು ಬೀಸುವ ದೃಶ್ಯಗಳು ವೈರಲ್ ಆಗಿವೆ. ಹೆಚ್ಚಿನವರು ಈದ್‌ನಲ್ಲಿ ಬಳಸುವ ಮುಸ್ಲಿಂ ಧ್ವಜಗಳನ್ನು ಬಳಸಿದ್ದರೆ ನಡುವೆ ದೊಡ್ಡ ಧ್ವಜವನ್ನು ಬಳಸಲಾಗಿದೆ. ಇದು ತ್ರಿವರ್ಣದಲ್ಲಿದೆ. ಕೇಸರಿ, ಬಿಳಿ ಹಸಿರು ಧ್ವಜವನ್ನು ಬಳಸಲಾಗಿದ್ದು, ಅದರಲ್ಲಿ ಬಿಳಿ ಬಣ್ಣದಲ್ಲಿ ಅಶೋಕ ಚಕ್ರ ಇರಬೇಕಾದ ಜಾಗದಲ್ಲಿ ಅರ್ಧ ಚಂದ್ರನ ಚಿತ್ರವನ್ನು ಹಾಕಲಾಗಿದೆ. ಜತೆಗೆ ಕೇಸರಿ ಮತ್ತು ಹಸಿರು ಬಣ್ಣದಲ್ಲಿ ಕೂಡಾ ಇದೇ ರೀತಿಯ ಅರ್ಧ ಚಂದ್ರ ಮತ್ತು ನಕ್ಷತ್ರಗಳ ಚಿತ್ರಗಳನ್ನು ಹಾಕಲಾಗಿದೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಡಿತ್ತು.
ಮಿರ್ಜಾನಾ ಪೊಲೀಸರು ಫೇಸ್‌ಬುಕ್, ಇನ್‌ಸ್ಟಾ ಗ್ರಾಂ ಖಾತೆಗಳನ್ನು ಚೆಕ್ ಮಾಡುತ್ತಿರುವಾಗ, ಕೇಸರಿ ಸಾಮ್ರಾಟ್ ಎಂಬ ಖಾತೆಯಲ್ಲಿ ಈ ವಿಡಿಯೊ ಗಮನಕ್ಕೆ ಬಂದಿತ್ತು. ಅದರಲ್ಲಿ ʻʻಇದು ಕೇರಳ, ಪಶ್ಚಿಮ ಬಂಗಾಳ ಅಲ್ಲ. ನಮ್ಮ ಉತ್ತರ ಕನ್ನಡದ ಕುಮಟಾದ ಮಿರ್ಜಾನ. ಇಲ್ಲಿ ನಮ್ಮ ಬಾವುಟದಲ್ಲಿ ಅಶೋಕ ಚಕ್ರ ಇರುವ ಜಾಗದಲ್ಲಿ ಅರ್ಧ ಚಂದ್ರ ಬಂದು ಕೂತಿದೆ. ಮುಂದಿನ ದಿನದಲ್ಲಿ ಕೇಸರಿ ಬಣ್ಣ ಅಳಿಸಿ ಶಾಶ್ವತ ಹಸಿರು ಬಣ್ಣಕ್ಕೆ ಬದಲಾಯಿಸುತ್ತಾರೆ ಜಾಗೋ ಭಾರತೀಯ_ಜಾಗೋʼ ಎಂಬ ಬರೆದ್ದನ್ನು ಗಮನಿಸಲಾಗಿತ್ತು.
ವಿಡಿಯೋದಲ್ಲಿ ಹಸಿರು, ನೀಲಿ-ಕೆಂಪು, ಕೆಂಪು-ಹಳದಿ ಬಾವುಟಗಳನ್ನು ಹಾರಿಸಲಾಗಿತ್ತು. ಇವುಗಳ ನಡುವೆ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೋಲುವಂತೆ ಮಾಡಲಾಗಿತ್ತು. ಕೇಸರಿ, ಬಿಳಿ ಹಸಿರು ಬಣ್ಣ ಇರುವ ಜಾಗದಲ್ಲಿ ನಕ್ಷತ್ರ ಮತ್ತು ಚಂದ್ರಾಕೃತಿಯ ಚಿತ್ರವನ್ನು ಬರೆಯಲಾಗಿತ್ತು.
ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಜತೆಗೆ ರಾಷ್ಟ್ರಧ್ವಜಕ್ಕೆ ಅಪಮಾನ ತಡೆಗಟ್ಟುವ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಆರೋಪಿಗಳ ಪತ್ತೆ ಮಾಡಿ ಬಂಧಿಸಲು ಕೂಡಾ ಪೊಲೀಸರು ಮುಂದಾಗಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧ್ವಜ ಹಾರಾಟದ ದೃಶ್ಯವನ್ನು ಇಲ್ಲಿ ನೋಡಿ
ಇದನ್ನೂ ಓದಿ: National Flag: ತ್ರಿವರ್ಣ ಧ್ವಜದ ಅಶೋಕ ಚಕ್ರ ಜಾಗದಲ್ಲಿ ಮದೀನಾ ಗುಂಬಜ್ ಚಿತ್ರ ಹಾಕಿದವ ಅರೆಸ್ಟ್
ಈ ನಡುವೆ, ತ್ರಿವರ್ಣದಲ್ಲಿ ಈ ರೀತಿ ಬಳಸುವುದು ತಪ್ಪೇ? ಎಲ್ಲಾ ತ್ರಿವರ್ಣಗಳನ್ನು ರಾಷ್ಟ್ರ ಧ್ವಜವೆಂದೇ ಪರಿಗಣಿಸಲಾಗುತ್ತದೆಯೇ ಎಂಬ ಪ್ರಶ್ನೆಗಳನ್ನು ಕೂಡಾ ಕೇಳಲಾಗುತ್ತಿದ್ದು, ಪೊಲೀಸರು ಮತ್ತು ನ್ಯಾಯಾಲಯ ಈ ಪ್ರಕರಣವನ್ನು ಹೇಗೆ ಪರಿಗಣಿಸುತ್ತದೆ ಎನ್ನುವುದರ ಆಧಾರದ ಮೇಲೆ ಮುಂದಿನ ಕ್ರಮ ಜರುಗಲಿದೆ.