Site icon Vistara News

Road Accident : ಅಂತ್ಯಸಂಸ್ಕಾರ ಮುಗಿಸಿ ಬರುತ್ತಿದ್ದ ದಂಪತಿ ಮೇಲೆ ಮುರಿದು ಬಿದ್ದ ಬೃಹತ್‌ ಮರ!

Road Accident A huge tree fell on the bike Riders are serious

ಕಾರವಾರ/ಉಡುಪಿ: ಭಾರಿ ಮಳೆ ಎಫೆಕ್ಟ್‌ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿ ಮೇಲೆ ಬೃಹತ್ ಮರ (Road Accident) ಬಿದ್ದಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಗರಬಸ್ತಿಕೇರಿಯಲ್ಲಿ ಘಟನೆ ನಡೆದಿದೆ. ಅನಿಲಗೋಡ ಗ್ರಾಮದ ಸವಾರ ಬಾಬು ನಾಯ್ಕ(52), ಭಾಗೀರಥಿ ನಾಯ್ಕ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದೆ.

ಈ ದಂಪತಿ ಸಂಬಂಧಿಯೊಬ್ಬರ ಶವಸಂಸ್ಕಾರಕ್ಕೆ ಬೈಕ್‌ನಲ್ಲಿ ಹೋಗಿ ವಾಪಸ್ ಬರುತ್ತಿದ್ದರು. ಈ ವೇಳೆ ಏಕಾಏಕಿ ಬೃಹತ್‌ ಮರವು ಇವರಿಬ್ಬರ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಸವಾರರನ್ನು ಕೂಡಲೇ ಸ್ಥಳೀಯರು ಹಾಗೂ ಭಟ್ಕಳದ ಬಿಜೆಪಿ ಮುಖಂಡರು ರಕ್ಷಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಡರಾತ್ರಿ ಹೊತ್ತಿ ಉರಿದ ಕಾರು

ತಡರಾತ್ರಿ ಕಾರೊಂದು ಧಗಧಗನೆ ಹೊತ್ತಿ ಉರಿದಿದೆ. ಉಡುಪಿಯ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದ ಎದುರು ಘಟನೆ ನಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ರಿಡ್ಜ್ ಕಾರು ಬೆಂಕಿಗಾಹುತಿ ಆಗಿದೆ. ಚಾಲಕ ಕಾರನ್ನು ರಸ್ತೆ ಬದಿ ನಿಲ್ಲಿಸಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಕಾರಿನ ಬಾನೆಟ್‌ನಲ್ಲಿ ಹೊಗೆ ಕಂಡು ಕಾರು ಚಾಲಕ ಹೊರಬಂದಿದ್ದು, ಕ್ಷಣದಲ್ಲೇ ಹೊತ್ತಿ ಉರಿದಿದೆ. ಕಾರು ಮಾಲೀಕನ ಮಾಹಿತಿ ಮೇಲೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲೆಗೆ ಕಾರು ಸಂಪೂರ್ಣ ಸುಟ್ಟುಹೋಗಿದೆ.

ಇದನ್ನೂ ಓದಿ: Haveri Accident: ಹಾವೇರಿ ಅಪಘಾತ ಪ್ರಕರಣ; ಭಾರತ ಅಂಧರ ಪುಟ್‌ಬಾಲ್ ತಂಡದ ಕ್ಯಾಪ್ಟನ್ ಕೂಡ ಸಾವು

ಪೂಜೆ ಮಾಡಿಸಿಕೊಂಡು ಬಂದ ಹೊಸ ವಾಹನ 13 ಜನರ ಬಲಿ ಪಡೆಯಿತು!

ಹಾವೇರಿ: ಬ್ಯಾಡಗಿಯಲ್ಲಿ (Haveri Accident) ಇಂದು ಮುಂಜಾನೆ 13 ಮಂದಿಯನ್ನು ಬಲಿ ಪಡೆದುಕೊಂಡ ಅಪಘಾತ (Road Accident) ಸಂಭವಿಸಿದ ಟಿಟಿ ವಾಹನವನ್ನು 15 ದಿನಗಳ ಹಿಂದೆಯಷ್ಟೇ ಖರೀದಿಸಲಾಗಿತ್ತು ಎಂದು ತಿಳಿದುಬಂದಿದೆ. ವಾಹನದ ಪೂಜೆಗಾಗಿ (Vehicle Puja) ಕುಟುಂಬ ತೆರಳಿದ್ದು, ಪೂಜೆ ಮುಗಿಸಿಕೊಂಡು ಮರಳಿ ಬರುತ್ತಿತ್ತು.

ಕಳೆದ 15 ದಿನದ ಹಿಂದಷ್ಟೇ ಹೊಸ ಸೆಕೆಂಡ್ ಹ್ಯಾಂಡ್ ಟೆಂಪೊ ಟ್ರಾಕ್ಸ್‌ ವಾಹನ ಖರೀದಿ ಮಾಡಿದ್ದ ಕುಟುಂಬ, ವಾಹನಕ್ಕೆ ಪೂಜೆ ಮಾಡಿಸಲು ಮನೆ ದೇವರು ಯಲ್ಲಮ್ಮ ದೇವಾಲಯಕ್ಕೆ ತೆರಳಿದ್ದರು. ನಾಗೇಶ್‌ ಕುಟುಂಬಸ್ಥರು ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಮ್ಮ ದೇವಾಲಯಕ್ಕೆ ಸೋಮವಾರ ರಾತ್ರಿ ತೆರಳಿದ್ದರು. ವಾಹನಕ್ಕೆ ಪೂಜೆ ಮಾಡಿಸಿಕೊಂಡು ಮರಳುತ್ತಿದ್ದಾಗ ಈ ಘೋರ ದುರಂತ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಬಳಿಯ ಎಮ್ಮಿಹಟ್ಟಿ ಗ್ರಾಮದವರು.

ಟಿಟಿ ವಾಹನ ಖರೀದಿಸಿ ದೇವರ ದರ್ಶನಕ್ಕೆ ಕುಟುಂಬ ಸಮೇತ ತೆರಳಿದ್ದ ಚಾಲಕ ಆದರ್ಶ, ಪೂಜೆಯ ಬಳಿಕ ಅದರ ಫೋಟೋಗಳನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದರು. ಸೋಮವಾರದಿಂದ ದೇವರ ದರ್ಶನಕ್ಕೆ ಹೊರಟಿದ್ದ ಆದರ್ಶ, ನಿನ್ನೆ ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ಟೆಂಪಲ್‌ನಲ್ಲಿ ವಾಹನ ಪೂಜೆ ಮಾಡಿಸಿ ಪೂಜೆ ಪೋಟೋಗಳನ್ನ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದರು. ಇಂದು ವಾಹನ ಛಿದ್ರಛಿದ್ರವಾಗಿದೆಯಲ್ಲದೆ ಇಡೀ ಕುಟುಂಬವನ್ನು ಬಲಿ ತೆಗೆದುಕೊಂಡಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ನಡೆದಿದೆ. ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿ ನಂಬರ್ ಕೆಎ 51 ಡಿ3530ಗೆ ಟಿಟಿ ವಾಹನ ಸಂಖ್ಯೆ ಕೆಎ01 ಎಬಿ4760 ಡಿಕ್ಕಿ ಹೊಡೆದಿದೆ. ರಸ್ತೆ ಬದಿ ನಿಲ್ಲಿಸಿದ್ದ ಲಾರಿಯನ್ನು ಕಾಣದೆ ಟಿಟಿ ಚಾಲಕ ಆದರ್ಶ ಇದಕ್ಕೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ರಸ್ತೆಯಲ್ಲಿ ಮಂಜು ಕವಿದಿದ್ದ ಕಾರಣ ಬಹುಶಃ ಲಾರಿ ಕಾಣಿಸಿರಲಾರದು. ಬೆಳಗಿನ ಜಾವ ನಿದ್ರೆಯ ಮಂಪರಿನಲ್ಲಿ ಈ ಅಪಘಾತ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.

ನಿಂತಿದ್ದ ಲಾರಿಗೆ ಗುದ್ದಿದ ಪರಿಣಾಮ ಟಿಟಿ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ. ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಹೊರ ತೆಗೆದರು. ಸ್ಥಳಕ್ಕೆ ಹಾವೇರಿ ಎಸ್‌ಪಿ ಅಂಶುಕುಮಾರ ಭೇಟಿ ನೀಡಿ ಪರಿಶೀಲಿಸಿದರು.

ಟಿಟಿ ವಾಹನದಲ್ಲಿ 17 ಜನ ಪ್ರಯಾಣ ಮಾಡುತ್ತಿದ್ದರು. 13 ಜನರ ಸಾವಿಗೀಡಾಗಿದ್ದು, 4 ಜನ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಪರಶುರಾಮ್ (45), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (50), ಸುಭದ್ರಾ ಭಾಯಿ (65), ಪುಣ್ಯ (50), ಮಂಜುಳಾಬಾಯಿ (57), ಆದರ್ಶ್ (23), ಮಾನಸಾ (24), ರೂಪಾ (40), ಮಂಜುಳಾ (50) ಎಂದು ಗುರುತಿಸಲಾಗಿದೆ. 4 ವರ್ಷದ ಹಾಗೂ 6 ವರ್ಷದ ಇಬ್ಬರು ಮಕ್ಕಳು ಸಹ ಮೃತಪಟ್ಟಿದ್ದಾರೆ. ಅರ್ಪಿತಾ, ಅರುಣಾ, ಅನ್ನಪೂರ್ಣ ಆಸ್ಪತ್ರೆಯಲ್ಲಿರುವ ಗಾಯಾಳುಗಳು.

13 ಜನರ ಸಾವಿನ ಸುದ್ದಿ ಕೇಳಿ ಎಮ್ಮೆಹಟ್ಟಿ ಗ್ರಾಮದ ಜನತೆ ಶಾಕ್ ಆಗಿದ್ದು, ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃತ ವಿಶಾಲಾಕ್ಷಮ್ಮ, ಆದರ್ಶ್, ನಾಗೇಶ್, ಭಾಗ್ಯ, ಮಾನಸ, ಸುಭದ್ರತಾಯಿ ಮೂಲತಃ ಎಮ್ಮೆಹಟ್ಟಿ ಗ್ರಾಮದವರು. ಪರಶುರಾಮ್, ರೂಪ ದಂಪತಿಗಳು ಶಿವಮೊಗ್ಗ ನಗರದ ಹಾಲ್ಕೋಳ ನಿವಾಸಿಗಳು. ಮಂಜುಳಬಾಯಿ, ಮಂಜುಳ ಭದ್ರಾವತಿ ತಾಲೂಕಿನ ಕಲ್ಯಾಳ್ ಸರ್ಕಲ್‌ನವರು. ಅಂಜು ಕಡೂರು ತಾಲೂಕಿನ ಬೀರೂರು ನಿವಾಸಿ. ಪುಣ್ಯ ಬಾಯಿ ಭದ್ರಾವತಿ ತಾಲೂಕಿನ ಮಾಚೇನಹಳ್ಳಿ ಹಾಲಿನ ಡೈರಿ ಗ್ರಾಮದ ನಿವಾಸಿ.

ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಮ್ಮೆಹಟ್ಟಿ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version