ಕಾರವಾರ: ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾರೆ. ಮುಂಡಗೋಡ ಗ್ರಾಮದ ನಿವಾಸಿ ಫಯಾಜ್ ರೋಣ, ಪತ್ನಿ ಅಫ್ರೀನಾ ಬಾನು, ಅಣ್ಣನ ಮಗ ಅಯಾನ್ ರೋಣ ಮೃತ ದುರ್ದೈವಿಗಳು.
ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ರೋಣ ಮೆಡಿಕಲ್ಸ್ ಮಾಲೀಕರಾಗಿದ್ದ ಫಯಾಜ್ ರೋಣ ತಮ್ಮ ಕುಟುಂಬ ಸಮೇತ ಹಜ್‌ಗೆ ತೆರಳಿದ್ದರು. ಮಾರ್ಚ್ 26 ರಂದು ಮಕ್ಕಾ ಮದೀನಾ ದರ್ಶನಕ್ಕೆ ತೆರಳಿ, ಏಪ್ರಿಲ್ 6ರ ರಾತ್ರಿ ಮಕ್ಕಾ ಮದೀನಾ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಫಯಾಜ್ ರೋಣ ಅವರ ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿ ಯುವಕನ ಪ್ರಾಣ ತೆಗೆದ ಚಾಲಕ
ಯಾದಗಿರಿಯ ಶಹಾಪೂರ ಪಟ್ಟಣದಲ್ಲಿ ನಿನ್ನೆ ಶನಿವಾರ ಭೀಕರ ಅಪಘಾತ ಸಂಭವಿಸಿದೆ. ಟಿಪ್ಪರ್ ಲಾರಿ ಚಾಲಕ ಮದ್ಯ ಸೇವಿಸಿ (Drunk and Drive)ಯದ್ವಾತದ್ವಾ ವಾಹನ ಚಲಾಯಿಸಿ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಸಿಸಿ ಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿದೆ.
ಚಾಲಕ ಜೀವನ್ ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ್ದ. ಈ ವೇಳೆ ನಿಯಂತ್ರಣಕ್ಕೆ ಸಿಗದೇ ಮೊದಲು ರಸ್ತೆ ಬದಿ ಇದ್ದ ಮರ ಹಾಗೂ ಟ್ರಾಕ್ಟರ್‌ಗೆ ಗುದ್ದಿದ್ದಾನೆ. ಇತ್ತ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಕಂಡು ಸ್ಥಳೀಯರಿಂದ ಲಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ. ಸದ್ಯ ಶಹಾಪೂರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿ ಜೀವನ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: Temperature Warning: ಏಪ್ರಿಲ್ ಮೊದಲ ವಾರದಲ್ಲೇ ರೆಕಾರ್ಡ್ ಬರೆದ ಸೂರ್ಯ; ಬೆಂಗಳೂರಿನಲ್ಲಿ ಹೆಚ್ಚಾದ ತಾಪಮಾನ
ಹಿಂಬದಿಯಿಂದ ಬಂದು ಗುದ್ದಿದ ಗೂಡ್ಸ್ ವಾಹನ; 4 ಪೀಸ್ ಆದ ಟ್ರಾಕ್ಟರ್, ರೈತ ಸಾವು
ಬೆಳಗಾವಿ: ಭೀಕರ ರಸ್ತೆ ಅಪಘಾತದಲ್ಲಿ (Road Accident) ರೈತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಟ್ರಾಕ್ಟರ್‌ನಲ್ಲಿ ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದಾಗ, ವೇಗವಾಗಿ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರಾಕ್ಟರ್ ಸಂಪೂರ್ಣ ಪುಡಿ ಪುಡಿಯಾಗಿದ್ದು, ಚಕ್ರಗಳೆಲ್ಲ ದೂರಕ್ಕೆ ಹಾರಿದೆ. ಬೆಳಗಾವಿ ತಾಲೂಕಿನ ಸುವರ್ಣಸೌಧದ ಬಳಿ ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.
ಬಸ್ತವಾಡ ಗ್ರಾಮದ ಮಲ್ಲಪ್ಪ ದೊಡ್ಡಕಲ್ಲನ್ನವರ (41) ಮೃತ ದುರ್ದೈವಿ. ಬೆಳಗಾವಿ ಮಾರ್ಕೆಟ್‌ಗೆ ಕೊತ್ತಂಬರಿ ಸೊಪ್ಪು ಸಾಗಿಸಲು ಟ್ರಾಕ್ಟರ್‌ನಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಗುದ್ದಿದೆ. ಗುದ್ದಿದ ರಭಸಕ್ಕೆ ಟ್ರಾಕ್ಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಗೂಡ್ಸ್ ಲಾರಿ ಮುಂಭಾಗವು ಜಖಂಗೊಂಡಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿತ್ರದುರ್ಗದಲ್ಲಿ ಕಣಿವೆಗೆ ಬಸ್ ಉರುಳಿ ನಾಲ್ವರ ಸಾವು, 10 ಮಂದಿಗೆ ಗಾಯ
ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ (Holalkere) ತಾಲೂಕಿನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಹೊಳಲ್ಕೆರೆ ಪಟ್ಟಣದ ಬಳಿಯ ಕಣಿವೆಗೆ ಸೀಬರ್ಡ್ ಎಂಬ ಖಾಸಗಿ ಬಸ್ ಪಲ್ಟಿಯಾಗಿ (Road Accident) ನಾಲ್ವರು ಮೃತಪಟ್ಟಿದ್ದಾರೆ. ಭಾನುವಾರ (ಏಪ್ರಿಲ್ 7) ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವೇಗವಾಗಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಕಣಿವೆಗೆ ಪಲ್ಟಿಯಾಗಿದೆ. ನಾಲ್ವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಾಯಾಳುಗಳಿಗೆ ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸುರೇಶ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಬಸ್ ಬೆಂಗಳೂರಿನಿಂದ ಗೋಕರ್ಣದ ಕಡೆಗೆ ಹೊರಟಿತ್ತು. ಬಸ್‌ನಲ್ಲಿ ಸುಮಾರು 38 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ನಿದ್ದೆಯ ಮಂಪರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಹೊಳಲ್ಕೆರೆ ಮಾತ್ರವಲ್ಲ ಚಿತ್ರದುರ್ಗ, ಶಿವಮೊಗ್ಗದ ಆಸ್ಪತ್ರೆಗಳಿಗೂ ರವಾನಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ