Site icon Vistara News

Self Harming : ಪೊಲೀಸ್‌ ಠಾಣೆ ಎದುರೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು

Self harming

ಕಾರವಾರ: ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಮಾನಸಿಕ ಕಿರುಕುಳ (Self Harming) ನೀಡುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. ರಾಮನಗರ ಹನುಮಾನ್ ಗಲ್ಲಿಯ ನಿವಾಸಿ ಭಾಸ್ಕರ್ ಬೋಂಡೆಲ್ಕರ್ ಮೃತ ದುರ್ದೈವಿ.

ಈ ಹಿಂದೆ‌‌ ಜೂಜಾಟ ಪ್ರಕರಣ‌ ಸಂಬಂಧ ಭಾಸ್ಕರ್ ಮೇಲೆ ಪ್ರಕರಣ ದಾಖಲು ಮಾಡಲಾಗಿತ್ತು. ಈ ನಡುವೆ ಕಳೆದ ಗುರುವಾರ ಜಮೀನು ವಿಚಾರಕ್ಕೆ ಭಾಸ್ಕರ್‌ ಮದ್ಯ ಸೇವಿಸಿ ಬೈಕ್‌ ಮೂಲಕ ಠಾಣೆಗೆ ತೆರಳಿದ್ದ. ಮದ್ಯ ಸೇವಿಸಿದ್ದರಿಂದ ಬೈಕ್ ಠಾಣೆಯಲ್ಲಿ ಬಿಟ್ಟು ಹೋಗುವಂತೆ ಪಿಎಸ್ಐ ಬಸವರಾಜ್‌ ಸೂಚಿಸಿದ್ದರು.

ಇಷ್ಟಕ್ಕೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮದ್ಯದ ಅಮಲಿನಲ್ಲಿ ಭಾಸ್ಕರ್‌ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಬೆಂಕಿ ನಂದಿಸಿ ಗಂಭೀರವಾದ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಭಾಸ್ಕರ್‌ನನ್ನು ಬೆಳಗಾವಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇನ್ನೂ ಆಸ್ಪತ್ರೆಗೆ ಹೋಗುವಾಗ ವಿಡಿಯೋ ಮಾಡಿ‌ ಪೊಲೀಸ್ ಕಿರುಕುಳ ಬಗ್ಗೆ ತಿಳಿಸಿದ್ದ. ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಭಾಸ್ಕರ್‌ ಶನಿವಾರ ಮೃತಪಟ್ಟಿದ್ದಾರೆ.

ಠಾಣೆ ಎದುರು ಪ್ರತಿಭಟನೆ

ಜೋಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣೆ ಎದುರು ವ್ಯಕ್ತಿ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಸಾವು ಖಂಡಿಸಿ ಕುಣಬಿ ಸಮುದಾಯವು ಬೃಹತ್ ಪ್ರತಿಭಟನೆ ನಡೆಸಿದೆ. ಪೊಲೀಸ್ ಕಿರುಕುಳಕ್ಕೆ ಬೇಸತ್ತು ಬೆಂಕಿ ಹಚ್ಚಿಕೊಂಡಿದ್ದಾಗಿ ಭಾಸ್ಕರ್ ವಿಡಿಯೋ ಮಾಡಿದ್ದ. ಹೀಗಾಗಿ ಆತನ ಸಾವಿಗೆ ಪೊಲೀಸರೇ ನೇರ ಹೊಣೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟಿಸಿದರು. ರಾಮನಗರದ ಶಿವಾಜಿ ವೃತ್ತದಿಂದ ಪೊಲೀಸ್ ಠಾಣೆವರೆಗೆ ಮೆರವಣಿಗೆ ನಡೆಸಿ, ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.

Sanke Bite.. Drowned in water

ಕೊಪ್ಪಳದಲ್ಲಿ ಕರೆಂಟ್‌ ಶಾಕ್‌ಗೆ ವ್ಯಕ್ತಿ ಸಾವು

ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಬಸವರಾಜ್ ಚನ್ನಪ್ಪ ಬಂಡಾರಿ (50) ಮೃತ ದುರ್ದೈವಿ. ಲೈನ್‌ಮ್ಯಾನ್‌ವೊಬ್ಬ ವಿದ್ಯುತ್ ದುರಸ್ಥಿಗಾಗಿ ಕಲಬುರಗಿ ತಾಲೂಕಿನ ಲಿಂಗನಬಂಡಿ ಗ್ರಾಮದ ನಿವಾಸಿಯಾಗಿರುವ ಚನ್ನಪ್ಪನನ್ನು ಜತೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆ ಲೈನ್‌ಮ್ಯಾನ್‌ ನಾಪತ್ತೆ ಆಗಿದ್ದಾನೆ. ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Electric shock : ನೇರಳೆ ಮರವೇರಿದ ಬಾಲಕನಿಗೆ ಕರೆಂಟ್‌ ಶಾಕ್‌; ಕೆಳಗೆ ಬಿದ್ದೊಡನೆ ಹಾರಿಹೋಯ್ತು ಪ್ರಾಣಪಕ್ಷಿ

ನಿದ್ದೆಗೆ ಜಾರಿದ 3 ವರ್ಷದ ಬಾಲಕನನ್ನು ಕಚ್ಚಿ ಸಾಯಿಸಿದ ನಾಗರಹಾವು

ಚಿಕ್ಕಬಳ್ಳಾಪುರ: ನಾಗರಹಾವು ಕಚ್ಚಿ (Snake Bite) 3 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೀಕ್ಷಿತ್ (3) ಮೃತ ದುರ್ದೈವಿ.

ಮಾಲತಿ-ಸುರೇಶ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಮನೆಯ ಕಾಂಪೌಂಡ್‌ನ ಮುಂದೆ ಮಲಗಿದ್ದಾಗ ನಾಗರಹಾವು ಕಚ್ಚಿದೆ. ಕೂಡಲೇ ಅಸ್ವಸ್ಥಗೊಂಡಿದ್ದ ದೀಕ್ಷಿತ್‌ನನ್ನು ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಸಕಾಲಕ್ಕೆ ಬಾಗೇಪಲ್ಲಿ ಆಸ್ಪತ್ರೆಯ ಸ್ಟಾಪ್ ನರ್ಸ್ ಬೋಮ್ಮಣ್ಣ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವೈದ್ಯರು ಬಂದು ನೋಡುವಷ್ಟರಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಪೋಷಕರು ಗೋಳಾಡಿದ್ದಾರೆ.

ಮೀನು ಹಿಡಿಯಲು ನದಿಗೆ ಇಳಿದವನು ನಾಪತ್ತೆ

ಕೃಷ್ಣ ನದಿಯಲ್ಲಿ ಮೀನುಗಾರಿಕೆಗೆ ಇಳಿದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕುಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಾವುಸಾಬ್ ಗಬಾಡೆ ನಾಪತ್ತೆಯಾದವರು.

ನಾಪತ್ತೆಯಾಗಿರುವ ಬಾವುಸಾಬ್‌ಗಾಗಿ ಹುಡುಕಾಟ

ನದಿಯಲ್ಲಿ ನಾಪತ್ತೆಯಾದ ಮೀನುಗಾರ ಬಾವುಸಾಬ್‌ ಗಬಾಡೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬನಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನದಿಯಲ್ಲಿ ಶೋಧಕಾರ್ಯ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version