Site icon Vistara News

ಆರ್‌. ವಿ. ದೇಶಪಾಂಡೆ ಜನ್ಮ ದಿನಾಂಕದ ಕುರಿತು ಅನುಮಾನ: ತನಿಖೆಗೆ ಸದನ ಸಮಿತಿ ರಚಿಸಲು ಸಿದ್ದರಾಮಯ್ಯ ಆಗ್ರಹ!

assembly session will be for three days from monday

ವಿಧಾನಸಭೆ: ಮಾಜಿ ಸಚಿವ ಆರ್‌. ವಿ. ದೇಶಪಾಂಡೆ ಅವರ ಜನ್ಮ ದಿನಾಂಕದ ಕುರಿತು ಅನುಮಾನಗಳಿದ್ದು, ಇದರ ತನಿಖೆ ನಡೆಸಲು ಸದನ ಸಮಿತಿ ರಚನೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಹಾಗೆಂದು ಇದು ಗಂಭೀರವಾಗಿ ಮಾಡಿದ ಆರೋಪವೂ ಅಲ್ಲ, ನಿಜವಾಗಿ ಸದನ ಸಮಿತಿಗೆ ಒತ್ತಾಯವನ್ನೂ ಮಾಡಿಲ್ಲ. ಆರ್‌. ವಿ. ದೇಶಪಾಂಡೆ ಅವರಿಗೆ 2022ನೇ ಸಾಲಿನ ಉತ್ತಮ ಶಾಸಕ ಪ್ರಶಸ್ತಿಯನ್ನು ಪ್ರದಾನ ಮಾಡಿದ ನಂತರ ಸಿದ್ದರಾಮಯ್ಯ ಹೇಳಿದ ಆತ್ಮೀಯ ಮಾತು ಇದು.

ಪ್ರಶಸ್ತಿ ಪ್ರದಾನದ ನಂತರ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಕೃಷ್ಣಬೈರೇಗೌಡ, ಆರ್‌. ವಿ. ದೇಶಪಾಂಡೆ ಅವರ ಬರ್ತ್ ಸರ್ಟಿಫಿಕೇಟ್ ಬಗ್ಗೆಯೇ ಅನುಮಾನ ಇದೆ. 75 ವರ್ಷ ಆಗಿದೆ ಎಂದು ಆರ್‌. ವಿ. ದೇಶಪಾಂಡೆ ಅವರು ಹೇಳಿದಾಗ ರಾಹುಲ್ ಗಾಂಧಿ ಕೂಡಾ ಅಚ್ಚರಿ ವ್ಯಕ್ತಪಡಿಸಿದ್ದರು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇಶಪಾಂಡೆ ವಯಸ್ಸಿನ ಬಗ್ಗೆ ತನಿಖೆ ಆಗಲಿ. ಬೇಕಾದರೆ ಸದನ ಸಮಿತಿ ರಚನೆ ಮಾಡಿ ಎಂದು ಹಾಸ್ಯಚಟಾಕಿ ಹಾರಿಸಿದರು. ನಮ್ಮಪ್ಪ ಹೊಲ ಉಳುವಾಗ ದೇಶಪಾಂಡೆ ಅಪ್ಪ ಲಾಯರ್ ಆಗಿದ್ದರು ಎಂದು ಹೇಳಿದರು.

ಯಡಿಯೂರಪ್ಪ ಇನ್ನೊಂದು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಈಗಲೇ ಚುನಾವಣೆಯಿಂದ ನಿವೃತ್ತನಾಗುವ ಬಗ್ಗೆ ಹಲವು ಬಾರಿ ದೇಶಪಾಂಡೆ ಹೇಳಿದ್ದರು ಎಂದರು. ಇದಕ್ಕೆ ದೇಶಪಾಂಡೆ ಅನುಮೋದಿಸಿದರು.

ನಾನು ಇನ್ನೊಂದು ಚುನಾವಣೆಗೆ ಸ್ಫರ್ಧಿಸಿ ನಿವೃತ್ತಿ ಆಗಬೇಕು ಅಂತಿದ್ದೀನಿ. ನನ್ನ ಜತೆ ದೇಶಪಾಂಡೆ ಇರಬೇಕು, ಇನ್ನೊಂದು ಚುನಾವಣೆಗೆ ಸ್ಫರ್ಧೆ ಮಾಡಿ ನೀನು ನಿವೃತ್ತನಾಗಿಬಿಡು ಎಂದು ದೇಶಪಾಂಡೆ ಅವರಿಗೆ ಸಿದ್ದರಾಮಯ್ಯ ಹೇಳಿದರು.

ದೇಶಪಾಂಡೆ ವಯಸ್ಸಿನ ಬಗ್ಗೆ ಮಾತನಾಡಿದ ನಂತರ ತಮ್ಮ ವಯಸ್ಸಿನ ಬಗ್ಗೆಯೂ ಮಾತನಾಡಿದ ಸಿದ್ದರಾಮಯ್ಯ, ನನ್ನ ವಯಸ್ಸಿನಲ್ಲಿಯೂ ಐದಾರು ತಿಂಗಳು ಹೆಚ್ಚು ಕಡಿಮೆ ಇರಬಹುದು. ನನ್ನ ಜನ್ಮ ದಿನಾಂಕವನ್ನು, 03/08/1947 ಅಂತ ಸ್ಕೂಲ್‌ನಲ್ಲಿ ಮೇಷ್ಟ್ರು ಬರೆದುಕೊಂಡಿದ್ದರು.

ನಮಗೆ ರಾಜಪ್ಪ ಅಂತ ಹೆಡ್ ಮೇಷ್ಟ್ರು ಇದ್ದರು. ನಾನು ಐದನೇ ತರಗತಿಗೆ ನೇರ ಸೇರಿಕೊಂಡಿದ್ದು. ನಮ್ಮಪ್ಪ ಹೆಬ್ವೆಟ್ಟು, ದೇಶಪಾಂಡೆ ಅಪ್ಪ ಲಾಯರ್. ಹಾಗಾಗಿ ದೇಶಪಾಂಡೆ ವಯಸ್ಸು ಸರಿಯಾಗಿದೆ. ನನ್ನ ಜನ್ಮದಿನಾಂಕ ನಾಲ್ಕೈದು ತಿಂಗಳು ಹೆಚ್ಚು ಕಡಿಮೆ ಇದ್ದರೂ ಇರಬಹುದು. ದೇಶಪಾಂಡೆ ಆರೋಗ್ಯವೂ ಚೆನಾಗಿದೆ, ಆದರೆ ದೈಹಿಕವಾಗಿ ಬಳಲಿದ್ದಾನೆ ಎಂದರು.

ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ನಿಮ್ಮಪ್ಪ ಹೊಲ ಉಳುತ್ತಿದ್ದರು, ಅವರಪ್ಪ ಲಾಯರ್‌ ಆಗಿದ್ದರು. ಆದರೆ ನೀವು ತುಂಬಾ ಫಾಸ್ಟು. ಅವರನ್ನು ಓವರ್‌ಟೇಕ್‌ ಮಾಡಿ ನೀವು ಮೊದಲು ಸಿಎಂ ಆಗಿಬಿಟ್ಟಿರಿ ಎಂದು ಕಾಲೆಳೆದರು.

ಇದನ್ನೂ ಓದಿ | ಆರ್‌. ವಿ. ದೇಶಪಾಂಡೆ | ನಾಲ್ಕು ದಶಕದ ರಾಜಕಾರಣಿಗೆ ಉತ್ತಮ ಶಾಸಕ ಪ್ರಶಸ್ತಿ: ಕುಟುಂಬ, ಜನತೆಗೆ ಶ್ರೇಯ ನೀಡಿದ ಮಾಜಿ ಸಚಿವ

Exit mobile version