ಶಿರಸಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಬಿಜೆಪಿ ನಾಯಕರು ಬಿಡಿ, ಅವರ ಮನೆ ನಾಯಿ ಕೂಡ ಪ್ರಾಣ ಬಿಟ್ಟಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಲೇವಡಿ ಮಾಡಿದರು.
ಇಲ್ಲಿ ಶನಿವಾರ (ಡಿ.೧೭) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಏನು ಮಾತನಾಡಿದರೂ ವಿವಾದ ಸೃಷ್ಟಿಸಲಾಗುತ್ತಿದೆ. ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ಸದಾ ಹೋರಾಡುತ್ತಿದೆ. ಆದರೂ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಹೇಳಿಕೆಯನ್ನು ಬಿಜೆಪಿಯವರು ತಿರುಚಿ ಪ್ರಚಾರ ಮಾಡುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಬಿಡದ ಪಕ್ಷದವರಿಂದ ಭಯೋತ್ಪಾದನೆ, ಹೋರಾಟದ ಪಾಠ ನಮಗೆ ಬೇಕಿಲ್ಲ ಎಂದರು.
ಮಲೆನಾಡು, ಕರಾವಳಿ ಭಾಗದಲ್ಲಿ ಈ ಹಿಂದಿನಿಂದಲೂ ಉಳುವವನಿಗೆ ಭೂಮಿ ನೀಡುವ ಕಾರ್ಯ ಕಾಂಗ್ರೆಸ್‌ನಿಂದ ಆಗುತ್ತಿತ್ತು. ಆದರೆ, ೨೦೧೪ರಿಂದೀಚೆಗೆ ಉಳ್ಳವರಿಗೆ ಭೂಮಿ ನೀಡಲಾಗುತ್ತಿದೆ. ನಿರಂತರವಾಗಿ ಬಡವರಿಗೆ ಒಕ್ಕಲೆಬ್ಬಿಸುತ್ತಿರುವ ಕಾರ್ಯ ಆಗುತ್ತಿದೆ. ಅರಣ್ಯ ಹಕ್ಕು ಕಾಯ್ದೆ ಬಂದ ನಂತರವೂ ಇದು ಮುಂದುವರಿದಿದೆ. ಕೃಷಿ ಕಾನೂನಿಗೆ ತಿದ್ದುಪಡಿ ತಂದು ಅಭಿವೃದ್ಧಿ ಹೆಸರಲ್ಲಿ ಉದ್ಯಮಿಗಳಿಗೆ ಭೂಮಿ ಹಂಚಿಕೆ ಆಗುತ್ತಿದೆ. ಬಿಜೆಪಿಯಿಂದ ಅರಣ್ಯ ಅತಿಕ್ರಮಣದಾರರ ವಿರುದ್ಧ ಕುತಂತ್ರ ನಡೆದಿದೆ. ಸಮಾಜವಾದ ಸಿದ್ಧಾಂತದಿಂದ ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಕೋಮುವಾದ ಸಿದ್ಧಾಂತವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ | INDvsBAN | ಕೊಹ್ಲಿ ಮರ್ಯಾದೆ ಕಾಪಾಡಿದ ಪಂತ್; ಕೈ ಮುಗಿದು ಅಭಿನಂದಿಸಿದ ನಾಯಕ
ಹೊಸ ಪಿಂಚಣಿ ಯೋಜನೆ ವಿರುದ್ಧ ಕಾಂಗ್ರೆಸ್ ಇದೆ. ಹಳೇ ಪಿಂಚಣಿ ಯೋಜನೆಗಾಗಿ ನಾವು ಹೋರಾಡುತ್ತೇವೆ ಎಂದ ಅವರು, ರಾಜ್ಯದ ಗಡಿ ವಿವಾದ ಇತ್ಯರ್ಥ ವಿಷಯ ಮುಖ್ಯಮಂತ್ರಿಗಳ ಸ್ವತ್ತಲ್ಲ. ಸರ್ವ ಪಕ್ಷಗಳ ನಿಯೋಗ ಇರಬೇಕು ಎಂದರು.
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜನವರಿ ವೇಳೆಗೆ ಅಂತಿಮಗೊಳಿಸಿ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಶಿರಸಿ ಪ್ರತ್ಯೇಕ ಜಿಲ್ಲೆ ಸಂಬಂಧ ರಾಜ್ಯ ಸರ್ಕಾರ ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆ ಕಾರ್ಯ ಮಾಡುತ್ತದೆ ಎಂದರು. ಕಾಂಗ್ರೆಸ್ ಜಿಲ್ಲಾ ಮಟ್ಟದ ಪದಾಧಿಕಾರಿಗಳಾದ ಎಸ್.ಕೆ.ಭಾಗವತ, ರವೀಂದ್ರ ನಾಯ್ಕ, ಪುಷ್ಪಾ ನಾಯ್ಕ ಇತರರಿದ್ದರು.
ಇದನ್ನೂ ಓದಿ | BJP Protest | ಪಾಕ್ ಸಚಿವ ಭುಟ್ಟೋ ವಿರುದ್ಧ ರಾಜ್ಯಾದ್ಯಂತ ಆಕ್ರೋಶ; ಕ್ಷಮಾಯಾಚನೆಗೆ ಒತ್ತಾಯ