Site icon Vistara News

ಹೊಲವನ್ನೆ ನಾಶ ಮಾಡುತ್ತಿರುವ ಸೈನಿಕ ಹುಳುಗಳು

ಸೈನಿಕ ಹುಳುಗಳು

ಉತ್ತರಕನ್ನಡ: ಹೊನ್ನಾವರ ತಾಲೂಕಿನ ಹಲವೆಡೆ ಕೋಟ್ಯಾಂತರ ಸೈನಿಕ ಹುಳುಗಳು ರೈತರು ಬೆಳೆದ ಬೆಳೆ, ಹೊಲವನ್ನೆಲ್ಲ ನಾಶ ಮಾಡುತ್ತಿವೆ. ಇದ್ದಕ್ಕಿದ್ದಂತೆ ಹುಳುಗಳು ಮುತ್ತಿಗೆ ಹಾಕಿರುವುದರಿಂದ ರೈತವರ್ಗಕ್ಕೆ ಆತಂಕ ಮೂಡಿಸಿದೆ. ಹೊನ್ನಾವರ ತಾಲೂಕಿನ ಗ್ರಾಮಗಳಾದ ಕಡ್ನೀರು, ಶಿರೂರು, ಹೊದ್ಕೆ, ತೊರಗೋಡು, ಬಾಸಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಓರಿಯಂಟಲ್ ಸೈನಿಕ ಹುಳುವಿನ ಬಾಧೆ ಅತಿಯಾಗಿದೆ.

ಅಲ್ಲದೆ ರೈತರ ಗದ್ದೆಗಳಲ್ಲಿ ಅಕಾಲಿಕ ಮಳೆಗೆ ಬೆಳೆದ ಹುಲ್ಲುಗಳು ಹಸುಗಳಿಗೆ ಸಿಗದೆ ಹುಳುವಿನ ಪಾಲಾಗುತ್ತಿದೆ. ತಾಲೂಕಿನ ಇತರೆ ಗ್ರಾಮಗಳ ವ್ಯಾಪ್ತಿಯಲ್ಲೂ ಕೀಟ ಬಾಧೆ ಹೆಚ್ಚಾಗಿದೆ. ಕೇವಲ ಎರಡು-ಮೂರು ದಿನಗಳಲ್ಲಿ ನೂರಾರು ಎಕರೆಯಲ್ಲಿನ ಹುಲುಸಾಗಿ ಬೆಳೆದ ಹುಲ್ಲುಗಳು ಹುಳಕ್ಕೆ ಆಹುತಿಯಾಗಿದೆ.

ಕೃಷಿ ಜಮೀನಿನ ತುಂಬೆಲ್ಲಾ ಹುಳುಗಳು ದಾಳಿ ನಡೆಸುತ್ತಿದ್ದು, ಮನೆಯ ಸುತ್ತಮುತ್ತಲೂ ಇದು ಆವರಿಸಿ ಆತಂಕ ಸೃಷ್ಟಿಮಾಡಿದೆ. ಇನ್ನು ಈ ಕೀಟಬಾಧೆಯಿಂದ ರೈತರ ಹೊಲಗಳಲ್ಲಿ ವಿಪರೀತ ಸೈನಿಕ ಹುಳುಗಳು ಲಗ್ಗೆಯಿಟ್ಟಿದ್ದು, ಅಕಾಲಿಕ ಮಳೆಯಿಂದ ಹುಲುಸಾಗಿ ಬೆಳೆದ ಹುಲ್ಲುಗಳನ್ನು ಕೀಟಗಳು ಬುಡ ಸಮೇತ ಕಟಾವು ಮಾಡಿವೆ. ಇದರಿಂದ ಹಸುಗಳಿಗೆ ಮೇವು ಸಿಗದಂತಾಗಿದೆ. ಕೀಟಗಳು ಮತ್ತಿಗೆ ಹಾಕಿದ್ದರಿಂದ ಎರಡು ದಿನಗಳಲ್ಲಿ ಹಸುರಿನ ಹುಲ್ಲುಗಳು ಸಂಪೂರ್ಣವಾಗಿ ನಾಶವಾಗಿರುವುದು ಕಂಡುಬರುತ್ತಿದೆ.

ರೈತ ತಿಮ್ಮಪ್ಪ ನಾಯ್ಕ

ಈ ಕುರಿತು ಮಾತನಾಡಿರುವ ಕಡ್ನೀರು ರೈತ ತಿಮ್ಮಪ್ಪ ನಾಯ್ಕ, ನಾನೊಬ್ಬ ಸಾಮಾನ್ಯ ಕೃತಷಿಕ. ಭತ್ತ, ಅಡಕೆ ಬೆಳೆಯುತ್ತೇವೆ. ಸೈನಿಕ ಹುಳದಿಂದಾಗಿ ನಮಗೆ ಜೀವಿಸುವುದೇ ಕಷ್ಟವಾಗಿದೆ. 2009ರಲ್ಲಿ ಇದೇ ಹುಳ ಇದೇ ರೀತಿ ಬಂದು ಎಲ್ಲ ಸಸಿಗಳನ್ನು ತಿಂಉಕೊಂಡು ಹೋಗಿತ್ತು. ಈ ವರ್ಷವೂ ನಮ್ಮನ್ನು ಈ ಹುಳು ಕಾಡುತ್ತಿದೆ. ಆದರೆ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಎಂದು ತಿಳಿಯುತ್ತಿಲ್ಲ ಸರ್ಕಾರ ಈ ಕುರಿತು ಮಾರ್ಗದರ್ಶನ, ಸಹಕಾರ ನೀಡಿ ರೈತರಿಗೆ ಸಹಾಯ ಮಾಡಬೇಕು ಎಂದು ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

ಸೈನಿಕ ಹುಳುವಿನ ಕಾಟದಿಂದ ರೈತರು ಮುಂಗಾರು ಪ್ರವೇಶಕ್ಕೂ ಮುಂಚಿತವಾಗಿ ಭತ್ತದ ಬೀಜ ಬಿತ್ತನೆ ಮಾಡುತ್ತಿದ್ದರು. ಆದರೆ ಕೀಟಗಳ ಕಾಟಕ್ಕೆ ಈ ವರ್ಷದ ಭತ್ತದ ಬೆಳೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ರೈತರಿಗೆ ವರ್ಷದಲ್ಲಿ ಕಾಣಿಸಿಕೊಳ್ಳಬಹುದಾದ ಬೆಂಕಿ ರೋಗ, ಎರೆ ಹುಳು ರೋಗ ಮಾತ್ರ ಆಗಾಗ ಕಾಣಿಸಿಕೊಳ್ಳತ್ತಾ ಇತ್ತು.‌ ಈಗ ಈ ಸೈನಿಕ ಹುಳುವಿನಿಂದಾಗಿ ರೈತರಿಗೆ ಮುಂದಿನ ಬೆಳೆ-ಬೇಸಾಯ ಹೇಗೆ ಎಂಬ ಚಿಂತೆ ಶುರುವಾಗಿದೆ.

ಇದನ್ನೂ ಓದಿ | ಮೂರು ದಿನದ ಮಳೆಗೆ ಕೃಷಿ ಫುಲ್‌ಸ್ಟಾಪ್‌: ಸಂಕಸ್ಟಕ್ಕೆ ಸಿಲುಕಿದ ರೈತರು

Exit mobile version