Site icon Vistara News

ಅಂಕೋಲಾದಲ್ಲಿ ಇಬ್ಬರು ಅಂತಾರಾಜ್ಯ ಮೊಬೈಲ್‌ ಕಳ್ಳರ ಬಂಧನ

ಕಳ್ಳರ ಬಂಧನ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಸ್ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿ, 7 ಮೊಬೈಲ್ ಹ್ಯಾಂಡ್ ಸೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಕೇರಳದ ಕಾಸರಗೋಡು ಮೂಲದ ಟೋನಿ ಜಾನ್ ಜೇಮ್ಸ್ (34), ಹುಬ್ಬಳ್ಳಿಯ ಗದಗ ರಸ್ತೆ ನಿವಾಸಿ ಮಹಮ್ಮದ್ ಅಲಿ ಮೆಹಬೂಬ್ ಸಾಬ ಕುಂದಗೋಳ(38) ಬಂಧಿತರು. ಬಂಧಿತ ಮಹ್ಮದ್‌ನಿಂದ ಜಿಯೋ ಲೈಫ್ ಕೀ ಪ್ಯಾಡ್ ಮೊಬೈಲ್ ಪೋನ್, ಐಟೆಲ್ ಕಂಪನಿಯ ಕೀ ಪ್ಯಾಡ್ ಮೊಬೈಲ್ ಪೋನ್, ಒಪ್ಪೊ ಕಂಪನಿಯ A15 ಎಸ್ ಹ್ಯಾಂಡ್ ಸೆಟ್‌ ಮತ್ತು 1,260 ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಟೋನಿ ಜೇಮ್ಸ್ ಎಂಬಾತನಿಂದ ರಿಯಲ್ ಮಿ ಸಿ15 ಹ್ಯಾಂಡ್ ಸೆಟ್‌, ರೆಡ್ ಮಿ 10 ಹ್ಯಾಂಡ್ ಸೆಟ್ ಮತ್ತು ಸ್ಯಾಮಸಂಗ್ ಕೀ ಪ್ಯಾಡ್ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಅಂಕೋಲಾ ಪಿಎಸ್‌ಐ ಮಹಾಂತೇಶ ವಾಲ್ಮೀಕಿ ಅವರು ಅಂಕೋಲಾ ಬಸ್ ನಿಲ್ದಾಣದ ಬಳಿ ಗಸ್ತಿನಲ್ಲಿದ್ದಾಗ ಸಂಶಯಾಸ್ಪದವಾಗಿ ಕಂಡುಬಂದ ಆರೋಪಿಗಳು, ಪೊಲೀಸ್ ಜೀಪ್ ಕಂಡೊಡನೆ ಓಡಿ ಹೋಗುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಅವರನ್ನು ಬೆನ್ನತ್ತಿ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು‌. ಈ ವೇಳೆ ಇವರು ಸಾರ್ವಜನಿಕರ ಮೊಬೈಲ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲು, ಗುರುವಾರ ಶ್ರೀಗಳಿಗೆ ನೋಟಿಸ್‌ ಸಾಧ್ಯತೆ

Exit mobile version