ಕಾರವಾರ: ಅಂಕೋಲಾ- ಶಿರೂರು ಹೆದ್ದಾರಿಯಲ್ಲಿ (Ankola Shiruru Lanslide) ಗುಡ್ಡ ಕುಸಿದ (Uttara Kannada Landslide) ಪ್ರಕರಣದಲ್ಲಿ ಇನ್ನೊಂದು ಅವಾಂತರ ಉಂಟಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಡ್ಡ ಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ (Gangavali River) ಬಿದ್ದ ಪರಿಣಾಮ ನದಿ ಬದಿಯ ಉಳುವರೆ ಗ್ರಾಮಕ್ಕೂ ಡ್ಯಾಮೇಜ್ ಆಗಿದೆ. ಸುನಾಮಿ ಅಲೆಯ ರೀತಿ ಗ್ರಾಮಕ್ಕೆ ನೀರು ನುಗ್ಗಿದ್ದು, ನೀರಿನ ರಭಸಕ್ಕೆ ಮೂರು ಮನೆಗಳು ನಾಶವಾಗಿ (homes collapse) ಮಹಿಳೆಯೊಬ್ಬರು (Woman swept) ಕೊಚ್ಚಿಹೋಗಿದ್ದಾರೆ.
ನೀರು ನುಗ್ಗಿದ ರಭಸದಿಂದ ಮೂರು ಮನೆಗಳು ನೆಲಸಮವಾಗಿವೆ. ಮನೆಯಲ್ಲಿದ್ದ ಸೀಥಿಗೌಡ (65) ಎನ್ನುವ ವೃದ್ಧೆ ನಾಪತ್ತೆಯಾಗಿದ್ದಾರೆ. 14 ಜನರಿಗೆ ಗಾಯವಾಗಿದ್ದು, ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಎನ್‌ಡಿಆರ್‌ಎಫ್ ಹಾಗೂ ತಾಲೂಕು ಆಡಳಿತದಿಂದ ಮಹಿಳೆಗಾಗಿ ಶೋಧಕಾರ್ಯ ಆರಂಭವಾಗಿದೆ.
ಕುಮಟ ತಾಲ್ಲೂಕು ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಉಳುವರೆ ಗ್ರಾಮದ ಗಣಪತಿ ಬೊಮ್ಮಾ ಗೌಡ, ಸಾವಿತ್ರಿ ನೀಲಾ ಗೌಡ, ದಿವ್ಯಾ ನೀಲಾ ಗೌಡ, ಆಶಾ ಮಂಗೇಶ ಗೌಡ, ಹರ್ಶಿತಾ ಗಣಪತಿ ಗೌಡ, ದಿಕ್ಷಾ ವಿನಾಯಕ ಗೌಡ, ದೀಪಾ ಹೂವಾ ಗೌಡ, ಧನ್ಯ ಹೂವಾ ಗೌಡ, ಹೂವಾ ಸೋಮಾ ಗೌಡ, ಸೋಮಾ ಅನಂತ ಗೌಡ, ಮಂಗೇಶ ಮಾಣಿ ಗೌಡ, ನೀಲಾ ಮುದ್ದು ಗೌಡ, ನಾಗೀ ಬೊಮ್ಮಾ ಗೌಡ, ತಮ್ಮಣ್ಣಿ ಅನಂತ ಗೌಡ ಗಾಯಗೊಂಡವರು.
ಸ್ಥಳಕ್ಕೆ ಅಂಕೋಲ ತಹಶೀಲ್ದಾರ್ ಅನಂತ ಶಂಕರ ಭೇಟಿ ನೀಡಿದ್ದಾರೆ. ಈಗಾಗಲೇ ನಾಲ್ಕು ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರಿಗಾಗಿ ಶೋಧ ನಡೆಯುತ್ತಿದೆ ಎಂದಿದ್ದಾರೆ. ಖಚಿತವಾಗಿ ಎಷ್ಟು ಜನ ಮಣ್ಣಿನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಇಲ್ಲ. ಎನ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಮೃತದೇಹ ಹುಡುಕಾಟ ನಡೆಯುತ್ತಿದೆ. ನೀರಿನಲ್ಲಿ ಒಬ್ಬರ ಮೃತದೇಹ ಹೋಗಿರುವ ಶಂಕೆ ಇದೆ. ಮಣ್ಣಿನಲ್ಲಿ ಒಬ್ಬರು ಸಿಲುಕಿಕೊಂಡಿದ್ದಾರೆ ಎಂದಿದ್ದಾರೆ.
ತೆರವಾಗದ ಗುಡ್ಡದ ಮಣ್ಣು
ಶಿರಸಿ ತಾಲ್ಲೂಕಿನ ರಾಗಿಹೊಸಳ್ಳಿ ಬಳಿ ನಿನ್ನೆ ಗುಡ್ಡ ಜರಿದು ಅಪಾರ ಪ್ರಮಾಣದ ಮಣ್ಣು ಹೆದ್ದಾರಿಯ ಮೇಲೆ ಕೂತಿದ್ದು, ನಿನ್ನೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ ತೆರವಾಗಿಲ್ಲ. ಇದರಿಂದ ಕುಮಟಾ- ಶಿರಸಿ ರಾಷ್ಟ್ರೀಯ ಹೆದ್ದಾರಿ 766EEಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಹೆದ್ದಾರಿಯ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಮರ ಸಹಿತ ಗುಡ್ಡ ಕುಸಿದಿದ್ದು, ಶಿರಸಿ-ಕುಮಟಾ ಹೆದ್ದಾರಿ ನಿನ್ನೆಯಿಂದ ಬಂದ್ ಆಗಿದೆ. ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಗುಡ್ಡ ಕೊರೆಯಲಾಗಿತ್ತು. ಜೆಸಿಬಿ ಮೂಲಕ ನಿನ್ನೆಯಿಂದ ಮಣ್ಣು ತೆರವು ನಡೆಯುತ್ತಿದ್ದು, ಇನ್ನೂ 50 ಮೀಟರ್‌ನಷ್ಟು ಮಣ್ಣು ತೆರವು ಬಾಕಿಯಿದೆ.
ಶೃಂಗೇರಿಯಲ್ಲಿ ನೆರೆ
ಚಿಕ್ಕಮಗಳೂರು: ಚಿಕ್ಕಮಗಳೂರಿನ ಕೆರೆಕಟ್ಟೆ, ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶೃಂಗೇರಿಯಲ್ಲಿ ತುಂಗಾ ನದಿ ಆರ್ಭಟದಿಂದ ಹರಿಯುತ್ತಿದೆ. ತುಂಗಾ ನದಿ ಅಬ್ಬರಕ್ಕೆ ಭಾರತಿ ತೀರ್ಥ ರಸ್ತೆ ಜಲಾವೃತವಾಗಿದ್ದು, ಪಟ್ಟಣದ ಗಾಂಧಿ ಮೈದಾನ ಸಂಪೂರ್ಣ ಮುಳುಗಡೆಯಾಗಿದೆ. ನದಿ ಪಾತ್ರದ ಅಂಗಡಿ ಮುಂಗಟ್ಟು, ಮನೆಗಳು ಜಲಾವೃತವಾಗಿವೆ. ಶೃಂಗೇರಿಯಲ್ಲಿ ನಿನ್ನೆಯಿಂದಲೂ ನೆರೆ ಪರಿಸ್ಥಿತಿ ತಗ್ಗಿಲ್ಲ. ಭಾರತಿ ತೀರ್ಥ ರಸ್ತೆ ಮುಳುಗಡೆ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರ ನಿಷೇಧಿಸಲಾಗಿದೆ.
ಇದನ್ನೂ ಓದಿ: Landslide: ಶಿರೂರಿನಲ್ಲಿ ಕುಸಿದ ಗುಡ್ಡದಡಿ 5 ಶವ ಪತ್ತೆ, ಇನ್ನುಳಿದವರಿಗೆ ಹುಡುಕಾಟ; ಗೋಕರ್ಣದಲ್ಲೂ ಭೂಕುಸಿತ