Site icon Vistara News

ಗೇಟ್‌ಪಾಸ್ ನೀಡಿದ್ದ ಪದಾಧಿಕಾರಿಗಳಿಗೆ ಮತ್ತೆ ಬಿಜೆಪಿ ಮಣೆ! ಶಾಸಕ ಹೆಬ್ಬಾರ್, ಸುನೀಲ್ ನಾಯ್ಕಗೆ ಸಂದೇಶ ರವಾನಿಸಿತಾ ಪಕ್ಷ?

List of reappointed office bearers of Yallapur and Bhatkal assembly constituencies

ಕಾರವಾರ: ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ (MLA Shivaram Hebbar) ಅವರು ಕಾಂಗ್ರೆಸ್ (Congress) ಪಕ್ಷವನ್ನು ಸೇರಲಿದ್ದಾರೆಂಬ ಗುಸು ಗುಸು ಸುದ್ದಿ ಜಾರಿಯಲ್ಲಿರುವಾಗಲೇ, ಬಿಜೆಪಿ ಅವರಿಗೆ ಶಾಕ್ ನೀಡಿದೆ. ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ಗೇಟ್‌ಪಾಸ್ ನೀಡಲಾಗಿದ್ದ ಪದಾಧಿಕಾರಿಗಳಿಗೇ ಬಿಜೆಪಿ ಈಗ ಮತ್ತೆ ಮಣೆ ಹಾಕಿದೆ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಶಾಸಕರಾಗಿ ಶಿವರಾಮ್ ಹೆಬ್ಬಾರ್ ಅವರು ಮರು ಆಯ್ಕೆಗೊಂಡಿದ್ದರು. ಆದರೆ, ಚುನಾವಣೆ ವೇಳೆ, ಪಕ್ಷದಲ್ಲಿದ್ದುಕೊಂಡೇ ಕೆಲವರು ನನ್ನ ವಿರುದ್ದ ಚಟುವಟಿಕೆ ನಡೆಸಿದ್ದರು. ಪಕ್ಷದ ಪದಾಧಿಕಾರಿಗಳೇ ನನ್ನ ಎದುರಾಳಿಗಳ ಪರ ಪ್ರಚಾರ ಮಾಡಿದ್ದರು. ಪರಿಣಾಮ ಅಲ್ಪಮತಗಳಿಂದ ಗೆಲ್ಲುವಂತಾಯಿತು ಎಂದು ಶಾಸಕ ಶಿವರಾಮ ಹೆಬ್ಬಾರ್ ಆಕ್ರೋಶ ಹೊರ ಹಾಕಿದ್ದರು. ಪಕ್ಷಕ್ಕೆ ದ್ರೋಹ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹೈಕಮಾಂಡ್‌ಗೆ ದೂರು ನೀಡಿದ್ದರು. ಅದರಂತೆ ಜಿಲ್ಲೆಯಲ್ಲಿ ಸೋಲು ಕಂಡ ಬಿಜೆಪಿಯ ಅಭ್ಯರ್ಥಿಗಳೂ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದರು.

ಶಾಸಕರು ಹಾಗೂ ಸೋತ ಅಭ್ಯರ್ಥಿಗಳಿಂದ ಕೇಳಿಬಂದ ದೂರಿನಂತೆ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಹಲವರನ್ನು ಪಕ್ಷದ ಪದಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಂದ ಮುಕ್ತಗೊಳಿಸಿತ್ತು. ಈ ಪೈಕಿ ಯಲ್ಲಾಪುರ, ಶಿರಸಿ, ಭಟ್ಕಳ ಹಾಗೂ ಕಾರವಾರ ಕ್ಷೇತ್ರದ ಪದಾಧಿಕಾರಿಗಳೂ ಇದ್ದರು. ಆದರೆ, ರಾಜ್ಯ ಸಮಿತಿ ನಿರ್ದೇಶನದ ಮೇರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರು ಕೇವಲ ಯಲ್ಲಾಪುರ ಮತ್ತು ಭಟ್ಕಳ ಕ್ಷೇತ್ರದಲ್ಲಿ ವಜಾಗೊಂಡಿದ್ದ ಪದಾಧಿಕಾರಿಗಳನ್ನು ಮಾತ್ರ ಮರುನೇಮಕ ಮಾಡಿದ್ದಾರೆ. ಬಿಜೆಪಿಯ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: Vande Bharat Train: ವಂದೇ ಭಾರತ್ ರೈಲಿನಿಂದಾಗಿ ವಿಮಾನ ಪ್ರಯಾಣ ಮತ್ತಷ್ಟು ಅಗ್ಗ!

ಭಟ್ಕಳ ಕ್ಷೇತ್ರದಲ್ಲಿ ಸುನೀಲ್ ನಾಯ್ಕ ಸಹ ವಿಧಾನಸಭಾ ಚುನಾವಣಾ ಸೋಲಿನ ಬಳಿಕ ಪಕ್ಷದ ಚಟುವಟಿಕೆಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಇದು ಕೂಡ ಪಕ್ಷದ ಪ್ರಮುಖರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕಾರಣದಿಂದ ಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ಆರೋಪಕ್ಕೆ ಗುರಿಯಾಗಿದ್ದವರಲ್ಲಿ ಕೇವಲ ಯಲ್ಲಾಪುರ ಮತ್ತು ಭಟ್ಕಳ ಕ್ಷೇತ್ರದ ಪದಾಧಿಕಾರಿಗಳನ್ನು ಮಾತ್ರ ರಾಜ್ಯ ಬಿಜೆಪಿ ಸಮಿತಿ ಮರುನೇಮಕಗೊಳಿಸಿದ್ದಾರೆ. ಹಾಗಾಗಿ, ಹೆಬ್ಬಾರ್ ಹಾಗೂ ಸುನೀಲ್ ನಾಯ್ಕ ಅವರ ವಿರೋಧಿಗಳು ಇದೀಗ ಮತ್ತೆ ಪಕ್ಷಕ್ಕೆ ಮರಳಿದಂತಾಗಿದೆ.

ಮರುನೇಮಕಗೊಂಡ ಪದಾಧಿಕಾರಿಗಳ ಪಟ್ಟಿ

ಯಲ್ಲಾಪುರ ವಿಧಾನಸಭಾ ಕ್ಷೇತ್ರ

ಕಲ್ಪನಾ ಗಜಾನನ ನಾಯ್ಕ (ಜಿಲ್ಲಾ ಉಪಾಧ್ಯಕ್ಷರು), ಬಾಬು ಬಾಂದೇಕರ (ಶಕ್ತಿ ಕೇಂದ್ರ ಪ್ರಮುಖರು, ಸಬಗೇರಿ), ಕೆ.ಟಿ.ಹೆಗಡೆ (ತಾಲೂಕಾ ಮಾಧ್ಯಮ ಪ್ರಕೋಷ್ಠದ ಸಂಚಾಲಕರು), ವಿಠ್ಠಲ ಜಾನು ಪಾಂಡ್ರಮಿಶೆ (ತಾಲೂಕಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ), ಗಣಪತಿ ಆರ್ ಗಾಂವ್ಕರ್, ಮಾನಿಗದ್ದೆ ( ಜಿಲ್ಲಾ ವಿಶೇಷ ಆಮಂತ್ರಿತರು).

ಇದನ್ನೂ ಓದಿ: Six Legged Calf: ಬಹಳ ದಿನ ಬದಕಲ್ಲ ಎಂದಿದ್ದ ಆರು ಕಾಲಿನ ಕರು, ಈಗ ದಷ್ಟಪುಷ್ಟವಾಗಿದೆ!

ಭಟ್ಕಳ ವಿಧಾನಸಭಾ ಕ್ಷೇತ್ರ

ರವಿ ನಾಯ್ಕ (ಅಧ್ಯಕ್ಷರು, ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ), ಸುರೇಶ ತಿಮ್ಮಪ್ಪ ನಾಯ್ಕ (ಸಂಚಾಲಕರು ಜಿಲ್ಲಾ ಕಾನೂನು ಪ್ರಕೋಷ್ಠ), ವಿಷ್ಣುಮೂರ್ತಿ ಹೆಗಡೆ (ಪ್ರ.ಕಾರ್ಯದರ್ಶಿ. ಜಿಲ್ಲಾ ರೈತ ಮೋರ್ಚಾ), ಮುಕುಂದ ಮಂಜುನಾಥ ನಾಯ್ಕ (ಸಂಚಾಲಕರು, ಜಿಲ್ಲಾ ಕಾರ್ಮಿಕ ಪ್ರಕೋಷ್ಠ), ಈಶ್ವರ ನಾರಾಯಣ ನಾಯ್ಕ (ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಪ್ರಭಾರಿ).

Exit mobile version