ಕಾರವಾರ: ವಿಧಾನಸಭೆ ಸ್ಪೀಕರ್ ವಿಶವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಅತ್ಯಂತ ಮೃದು ಸ್ವಭಾವದವರಾಗಿದ್ದರೂ, ಅದ್ಯಾವಾಗ ಉಗ್ರರೂಪ ತಾಳುತ್ತಾರೆ ಎನ್ನುವುದೇ ತಿಳಿಯುವುದಿಲ್ಲ ಎಂದು ಮಾಜಿ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿ ವತಿಯಿಂದ ಶಿರಸಿಯ ಶ್ರೀ ಮಾರಿಕಾಂಬ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಕಾಗೇರಿಯವರಿಗೆ ಸನ್ಮಾನ ಎಂದ ಕೂಡಲೆ ಆಶ್ಚರ್ಯವಾಯಿತು. ಇದು ಎಲ್ಲ ಸ್ನೇಹಿತರೂ ಆಯೋಜಿಸಿರುವ ಕಾರ್ಯಕ್ರಮ ಎಂದು ನಂತರ ತಿಳಿಯಿತು. ಕಾಗೇರಿಯವರು ಸಭಾಪತಿ ಸ್ಥಾನವನ್ನು ಪಕ್ಷಾತೀತವಾಗಿ, ಜವಾಬ್ದಾರಿಯುತವಾಗಿ ನಿಭಾಯಿಸಿದ್ದಾರೆ. ಆ ಸ್ಥಾನದಲ್ಲಿ ಕುಳಿತು ಪಕ್ಷಾತೀತವಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅವರು ಬಹಳ ಮೃದು ಸ್ವಭಾವದವರು, ಸುಖಾ ಸುಮ್ಮನೆ ಯಾರೊಂದಿಗೂ ಜಗಳಕ್ಕೆ ಹೋಗುವುದಿಲ್ಲ. ಆದರೆ ಯಾವಾಗ ಉಗ್ರ ರೂಪ ತಾಳುತ್ತಾರೆ ಗೊತ್ತಾಗುವುದೇ ಇಲ್ಲ. ವಿಧಾನಸಭೆಯಲ್ಲಿ ಇ ವಿಧಾನ್ ಅನುಷ್ಠಾನ ಮಾಡಲು ಕಾಗೇರಿಯವರು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮಿಬ್ಬರ ರಾಜಕೀಯ ಸಿದ್ಧಾಂತ ಏನೇ ಇದ್ದರೂ ಅವರೊಬ್ಬ ಒಳ್ಳೆಯ ವ್ಯಕ್ತಿ ಎಂದರು.
ಈ ಭಾಗದಲ್ಲಿ ಅರಣ್ಯ ಅತಿಕ್ರಮಣ ಬಹಳ ದೊಡ್ಡ ಸಮಸ್ಯೆ. ಕೆಲವು ಸಮಸ್ಯೆಗಳು ಬಗೆಹರಿದಿವೆಯಾದರೂ ಇನ್ನೂ ಸಾವಿರಾರು ಕುಟುಂಬಗಳಿಗೆ ಸಮಸ್ಯೆ ಉಳಿದುಕೊಂಡಿದೆ. ಗೌಳಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಪ್ರಯತ್ನ ನಡೆಯುತ್ತಿದೆ. ಕುಲಶಾಸ್ತ್ರ ಅಧ್ಯಯನ ನಡೆಯಬೇಕಿದೆ, ಅದಕ್ಕೆ ರಾಜ್ಯ ಸರ್ಕಾರ ಸಹಕರಿಸಬೇಕು. ಅದೇ ರೀತಿ, ಹಾಲಕ್ಕಿ ಸಮಾಜದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ. ಕುಡುಮಿ ಜನಾಂಗವೂ ಸಾಕಷ್ಟು ಹಿಂದುಳಿದಿದೆ. ಇವರಿಗೂ ನ್ಯಾಯ ಸಿಗಬೇಕಿದೆ ಎಂದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧ್ಯಕ್ಷ ಸ್ಥಾನ ಎಂದರೆ ತಂತಿ ಮೇಲಿನ ನಡಿಗೆಯಂತೆ. ಕಳೆದ ಮೂರೂವರೆ ವರ್ಷದಿಂದ ಕಾಗೇರಿಯವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಇಂದು ತಮ್ಮ ಮನೆಯ ಕಾರ್ಯಕ್ರಮದಂತೆ ಈ ಅಭಿನಂದನಾ ಸಮಾರಂಭ ನಡೆಯುತ್ತಿದೆ.
ವಿಧಾನ ಮಂಡಲ ಅಧಿವೇಶನ ಯಾವ ರೀತಿ ನಡೆಯಬೇಕು ಎನ್ನುವ ಕುರಿತು ಅಧ್ಯಯನ ಮಾಡುತ್ತಿದ್ದೇವೆ. ಕಾಲೇಜುಗಳಲ್ಲಿ ಹಾಗೂ ಯುವಕರಲ್ಲಿಯೂ ಸಂವಿಧಾನದ ಕುರಿತು ಕಾಗೇರಿಯವರು ಮಾರ್ಗದರ್ಶನ ಮಾಡುತ್ತಿದ್ದಾರೆ. ಸರಳ ಹಾಗೂ ಸಜ್ಜನರಾದ ಕಾಗೇರಿಯವರನ್ನು ಅಭಿನಂದಿಸುವುದೆಂದರೆ ನಮ್ಮನ್ನೇ ನಾವು ಅಭಿನಂದಿಸಿದಂತೆ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಅರಣ್ಯ ಅತಿಕ್ರಮಣ ಎನ್ನುವುದು ಬ್ರಿಟಿಷರು ಬಿಟ್ಟುಹೋಗುವಾಗ ಬಂದಂತಹ ಬಳುವಳಿ. ಇಷ್ಟು ವರ್ಷದಲ್ಲಿ ದೇಶ ಹಾಗೂ ರಾಜ್ಯದಲ್ಲಿ ಅನೇಕ ಸರ್ಕಾರಗಳು ಬಂದರೂ ಈ ಸಮಸ್ಯೆಗೆ ತಾತ್ವಿಕ ಹಾಗೂ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯವಾಗಿಲ್ಲ. ಆದರೆ, ಯಾವುದೇ ಅತಿಕ್ರಮಣಕಾರರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸಕಾರಾತ್ಮಕ ಹೆಜ್ಜೆ ಇಟ್ಟಿದ್ದಾರೆ ಎಂದರು.
ಕಾಗೇರಿಯವರು ಆರು ಬಾರಿ ಶಾಸಕರಾಗಿ ಅತ್ಯಂತ ಒಳ್ಳೆಯ ಕೆಲಸ ಮಾಡಿದ್ದಾರೆ. ಸಚಿವರಾಗಿ, ವಿಧಾನಸಭೆಯ ಅಧ್ಯಕ್ಷರಾಗಿ ಮಾರ್ಗದರ್ಶಕರಾಗಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ, ದೇಶದಲ್ಲೆ ಅತ್ಯುತ್ತಮ ಹೆಜ್ಜೆಯನ್ನು ಇಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಅವಧಿಯಲ್ಲಿ ಮತ್ತಷ್ಟು ಉತ್ತಮ ಕೆಲಸ ಆಗಲಿ ಎಂದರು. ಕದಂಬೋತ್ಸವವನ್ನು ನಡೆಸಲು ಸರ್ವ ಸಹಕಾರ ನೀಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಮಾತನಾಡಿ, ಒಬ್ಬ ಸಭಾಧ್ಯಕ್ಷನಾಗಿ ವಿಧಾನಸಭೆಯ ಗೌರವವನ್ನು ಹೇಗೆ ಕಾಪಾಡಿಕೊಂಡು ಬರಬೇಕು ಎನ್ನುವುದನ್ನು ಕಾಗೇರಿಯವರು ತೋರಿಸಿಕೊಟ್ಟಿದ್ದಾರೆ. ಸಭಾಧ್ಯಕ್ಷರ ಪೀಠದ ಘನತೆ ಗೌರವವನ್ನು ಕಾಪಾಡಿಕೊಳ್ಳುವುದರ ಜತೆಗೆ ತಮ್ಮ ಕ್ಷೇತ್ರದ ಕಾರ್ಯವನ್ನೂ ನಡೆಸುತ್ತಿದ್ದಾರೆ. ಇಂದು 242 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಭೂಮಿಪೂಜೆ ಕೊಟ್ಟಿದ್ದು ಅವರ ಕಾರ್ಯಕ್ಷಮತೆಗೆ ಹಿಡಿದ ಕನ್ನಡಿ. ಕಾಗೇರಿಯವರಿಗೆ ದೇವರು ಉತ್ತಮ ಆರೋಗ್ಯ, ಆಯಸ್ಸು ಕೊಡಲಿ ಎಂದು ಹಾರೈಸಿದರು.
ಇದನ್ನೂ ಓದಿ | Sirsi News | ಜ.15 ಕ್ಕೆ ನಮ್ಮ ಹೆಮ್ಮೆ ನಮ್ಮ ಕಾಗೇರಿ ಅಭಿನಂದನಾ ಸಮಾರಂಭ