ಕಾರವಾರ: ಕರ್ನಾಟಕದ ಅತ್ಯಂತ ಸಜ್ಜನ, ಮಾರ್ಗದರ್ಶಿ ರಾಜಕಾರಣಿಗಳಲ್ಲೊಬ್ಬರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರ (Vishveshwar Hegde Kageri) ಅನುಭವ ಹಾಗೂ ರಾಜಕಾರಣದ ಲಾಭವನ್ನು ಇಡೀ ರಾಜ್ಯ ಪಡೆಯುವಂತಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾ ಸಮಿತಿ ವತಿಯಿಂದ ಶಿರಸಿಯ ಶ್ರೀ ಮಾರಿಕಾಂಬ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಒಬ್ಬ ಅಪರೂಪದ ರಾಜಕಾರಣಿ. ಒಬ್ಬ ಕಾರ್ಯಕರ್ತನಾಗಿ, ಸಾಮಾಜಿಕ ಸೇವೆ ಹಾಗೂ ಸಂಘಟನೆಯ ಮೂಲಕ ರಾಜಕೀಯಕ್ಕೆ ಬಂದವರು. ಇಂದು ಪ್ರತಿಯೊಬ್ರ ಮನೆಯಲ್ಲಿ, ಮನದಲ್ಲಿ ಜಾಗ ಪಡೆದು ಮುಂದೆ ಬಂದವರು. ಅವರಿಗೆ ವ್ಯಕ್ತಿಗತವಾಗಿ ಯಾರೂ ಗಾಡ್‌ಫಾದರ್‌ಗಳಿಲ್ಲ. ನಿರಂತರ ಪರಿಶ್ರಮದಿಂದ ಎಲ್ಲರ ಮನಸ್ಸನ್ನು ಗೆದ್ದು, ತನ್ನ ಕಾಯಕ ಹಾಗೂ ಸಾಮರ್ಥ್ಯದಿಂದ ಮುಂದೆ ಬಂದವರು ಕಾಗೇರಿ. ಸಂಘಟನೆಯೇ ಅವರಿಗೆ ಗಾಡ್ ಫಾದರ್. ಅದರ ತತ್ವಗಳೇ ಅವರಿಗೆ ಆದರ್ಶ. ಎಲ್ಲಿಯೂ ರಾಜಿ ಮಾಡಿಕೊಳ್ಳದ ಜೀವನ ಅವರದ್ದು.
ಕೆಲವು ವಿಷಯಗಳಲ್ಲಿ ಅವರ ನಿಲುವು ಬಹಳ ಕಠಿಣ. ಆದರೆ ಜನಹಿತದ ವಿಚಾರಗಳಿಗೆ ಆದ್ಯತೆ ನೀಡುತ್ತಾರೆ. ಸ್ಥಿತಪ್ರಜ್ಞ ಸ್ಥಿತಿಯನ್ನು ಮೊದಲಿನಿಂದಲೂ ಹೊಂದಿದ್ದಾರೆ. ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಏಳನೇ ಬಾರಿಯೂ ಖಂಡಿತ ಆಯ್ಕೆ ಆಗುತ್ತಾರೆ. ಇಷ್ಟೆಲ್ಲ ಅಧಿಕಾರದ ನಡುವೆಯೂ ಕರ್ತವ್ಯದ ಸಂಬಂಧ ಇದೆಯೇ ಹೊರತಾಗಿ ಗರ್ವ, ಅಹಂಕಾರ ಬಂದಿಲ್ಲ. ಒಬ್ಬ ಸ್ನೇಹಿತರ ಜತೆಗೆ ಮಾತನಾಡುತ್ತಿದ್ದೇವೆ ಎನ್ನುವ ಭಾವನೆ ಇರುತ್ತದೆ, ಏಕೆಂದರೆ ಅವರ ಸ್ಥಾನಕ್ಕೆ ಎಂದೂ ಅವರು ಅಂಟಿಕೊಂಡವರಲ್ಲ ಎಂದರು.
ಯಾವ ಕೆಲಸವನ್ನು ಅವರಿಗೆ ವಹಿಸಿಕೊಟ್ಟರೂ ಶೇಕಡಾ ನೂರು ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಅವರು ಮಂತ್ರಿಯಾಗಿದ್ದಾಗ, ಶಿಕ್ಷಣ ಇಲಾಖೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಭಾಧ್ಯಕ್ಷರಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತ, ಸುತ್ತಾಡಿಕೊಂಡು ಇರಬಹುದಾಗಿತ್ತು. ಆದರೆ ಆ ಸ್ಥಾನಕ್ಕೆ ಬದ್ಧತೆಯನ್ನು ಹೊಂದಿ ಸಂವಿಧಾನದ ಬಗ್ಗೆ ಒಂದು ಚಿಂತನ ಮಂಥನ ಮಾಡಿಸಿದರು. ಚುನಾವಣಾ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ತರಬೇಕು, ಮುಕ್ತ ಹಾಗೂ ನ್ಯಾಯಸಮ್ಮತ ಬದಲಾವಣೆ ತರಬೇಕು ಎನ್ನುವುದರ ಕುರಿತು ಚರ್ಚೆ ನಡೆಸಿದರು. ಪದೇಪದೆ ಚುನಾವಣೆಗಳು ನಡೆಯುತ್ತಿರುವುದರಿಂದ ಅಭಿವೃದ್ಧಿಗೆ ಕುಂದುಂಟಾಗುತ್ತಿದ್ದು, ಒಂದು ದೇಶ ಒಂದು ಚುನಾವಣೆ ಕುರಿತು ಆಲೋಚಿಸಬೇಕು ಎಂದು ತಿಳಿಸಿಕೊಟ್ಟರು. ಜನಪ್ರತಿನಿಧಿಗಳ ಕರ್ತವ್ಯವನ್ನೂ ತಿಳಿಸಿಕೊಟ್ಟರು.
ಇಷ್ಟೆಲ್ಲ ಕಾರ್ಯ ಮಾಡಿದ ಕಾಗೇರಿ ಅವರಿಗೆ ಒಳ್ಳೆಯ ಭವಿಷ್ಯ ಇದೆ. ಇಷ್ಟೆಲ್ಲ ಸಾಧನೆಗಳು ಆದಮೇಲೆ ಶಿಖರಕ್ಕೆ ಹೋಗಲೇಬೇಕು. ಇದರ ಪರಿಣಾಮ ರಾಜ್ಯಕ್ಕೆ ಆಬೇಕಾದರೆ ಅವರು ಶಿಖರಕ್ಕೆ ಏರಲೇಬೇಕು. ಹಾಗೆ ಆಗುತ್ತದೆ ಎಂಬ ವಿಶ್ವಾಸವಿದೆ.
ಶಿರಸಿಯಲ್ಲಿ ಇಬ್ಬರಿಗೂ ಸೇರುತ್ತದೆ ಎನ್ನುವುದು ಗೊತ್ತಿರಲಿಲ್ಲ. ಅವರೂ ಪತ್ರ ಕಳಿಸುತ್ತಿದ್ದರು, ಇವರೂ ಪತ್ರ ಕಳಿಸುತ್ತಿದ್ದರು. ಏನಯ್ಯ ನೀನು ಸಭಾಧ್ಯಕ್ಷರ ಕ್ಷೇತ್ರದಲ್ಲಿ ಚಟುವಟಿಕೆ ನಡೆಸುತ್ತಿದ್ದೀಯ ಎಂದು ಕೇಳಿದೆ. ಅದಕ್ಕೆ, ತಾಲೂಕಿನ ಕೆಲ ಭಾಗಗಳು ತಮಗೂ ಸೇರುತ್ತವೆ ಎಂದರು. ಇಬ್ಬರ ಕಾರಣಕ್ಕೆ 700-800 ಕೋಟಿ ರೂ. ಅನುದಾನ ತಂದಿದ್ದಾರೆ.
ಅರಣ್ಯವಾಸಿಗಳ ಕುರಿತು ಈಗಾಗಲೆ ಸುಪ್ರೀಂಕೋರ್ಟ್‌ನಲ್ಲಿ ಒಂದಿ ಅಫಿಡವಿಟ್ ಸಲ್ಲಿಸಿದೆ. ಮತ್ತೊಂದು ಅಫಿಡವಿಟ್ ಸಲ್ಲಿಸುತ್ತೇವೆ. ನಮ್ಮ ಸರ್ಕಾರ ಇರುವವರೆಗೆ ಯಾವುದೇ ಒಕ್ಕಲೆಬ್ಬಿಸುವ ಕಾರ್ಯ ಮಾಡುವುದಿಲ್ಲ. ಅರಣ್ಯ ಸಚಿವನೂ ಆಗಿರುವುದರಿಂದ ಈ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ.
ಕಾರವಾರ ಮೆಡಿಕಲ್ ಕಾಲೇಜಿನಲ್ಲಿ, ಸೂಪರ್ ಸ್ಪೆಷಾಲಿಟಿಯ ಎಲ್ಲ ವಿಭಾಗಗಳೂ ಲಭಿಸುತ್ತವೆ. ಘಟ್ಟದ ಮೇಲಿನ ಭಾಗಕ್ಕೆ ಅನುಕೂಲವಾಗಲು ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡುತ್ತೇವೆ. ಈ ಭಾಗಕ್ಕೆ ವಿಶ್ವವಿದ್ಯಾಲಯ ಬೇಕು ಎಂಬ ಬೇಡಿಕೆ ಇತ್ತು. ಪರಿಸರ ಅಧ್ಯಯನಕ್ಕಾಗಿ ಒಂದು ವಿಶ್ವವಿದ್ಯಾಲಯವನ್ನು ಉತ್ತರ ಕನ್ನಡದಲ್ಲಿ ಸ್ಥಾಪನೆ ಮಾಡುತ್ತೇವೆ. ಬದಲಾಗುತ್ತಿರುವ ಪರಿಸರವನ್ನು ಈ ವಿವಿ ಅಧ್ಯಯನ ಮಾಡುತ್ತದೆ.
ನಮ್ಮ ನಾಡನ್ನು ಕಟ್ಟುವಲ್ಲಿ ಈ ಭಾಗ ಪ್ರಮುಖ ಪಾತ್ರವನ್ನು ವಹಿಸಲಿ. ಆತ್ಮೀಯರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಇದನ್ನೂ ಓದಿ | Vishveshwar Hegde Kageri | ಮೃದು ಸ್ವಭಾವದ ಕಾಗೇರಿ ಯಾವಾಗ ಉಗ್ರ ರೂಪ ತಾಳುತ್ತಾರೆ ಗೊತ್ತಾಗೊಲ್ಲ: ಮಾಜಿ ಸಚಿವ ದೇಶಪಾಂಡೆ ಮಾತು