Site icon Vistara News

Uttara Kannada Lok Sabha Constituency: ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಜಯಭೇರಿ?

Uttara Kannada Lok Sabha Constituency

Will BJP Win Again In Uttara Kannada Lok Sabha Constituency

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಈ ಎರಡೂ ಪಕ್ಷಗಳು ಪ್ರಬಲವಾಗಿವೆ. 1996ರವರೆಗೂ ಇಲ್ಲಿ ಕಾಂಗ್ರೆಸ್‌ ಅಧಿಪತ್ಯ ಸಾಧಿಸಿತ್ತು. ಆದರೆ 1996ರ ಲೋಕಸಭೆ ಚುನಾವಣೆಯಲ್ಲಿ ಅನಂತ್‌ ಕುಮಾರ್‌ ಹೆಗಡೆ ಗೆಲುವಿನ ಮೂಲಕ ಬಿಜೆಪಿ ಇಲ್ಲಿ ಖಾತೆ ತೆರೆಯಿತು. ಅಲ್ಲಿಂದ ಅನಂತ್‌ ಕುಮಾರ್‌ ಹೆಗಡೆ ನಿರಂತರ ಏಳು ಬಾರಿ ಸ್ಪರ್ಧಿಸಿ ಆರು ಬಾರಿ ಜಯಭೇರಿ ಬಾರಿಸಿದ್ದರು. ಒಮ್ಮೆ ಮಾತ್ರ 1999ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಾರ್ಗರೇಟ್‌ ಆಳ್ವಾ ವಿರುದ್ಧ ಪರಾಭವ ಅನುಭವಿಸಿದ್ದರು. ಆದರೆ ಈ ಬಾರಿ ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್‌ ಅವರನ್ನು ಕಣಕ್ಕಿಳಿಸಲಾಗಿದೆ.

ಹಿಂದೆ ಇದು ಕೆನರಾ ಕ್ಷೇತ್ರ

ಈ ಕ್ಷೇತ್ರವನ್ನು ಮೊದಲು ಕೆನರಾ ಲೋಕಸಭಾ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. 2008ರಲ್ಲಿ ಕ್ಷೇತ್ರ ಮರು ವಿಂಗಡಣೆ ಆದ ಬಳಿಕ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಎಂದು ಬದಲಾಯಿತು. ಈ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ವಿಶೇಷ ಅಂದರೆ ಇದರಲ್ಲಿ ಬೆಳಗಾವಿಯ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳೂ ಸೇರಿಕೊಂಡಿವೆ.

ಬಿಜೆಪಿ, ಕಾಂಗ್ರೆಸ್‌ ಸಮಬಲ

ಲೋಕಸಭಾ ಚುನಾವಣೆ ಹಿನ್ನೆಲೆ ಗಮನಿಸಿದರೆ ಈ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತ ಬಂದಿದೆ. ಆದರೆ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕಾರವಾರ, ಶಿರಸಿ, ಹಳಿಯಾಳ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಕುಮಟಾ ಮತ್ತು ಯಲ್ಲಾಪುರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿತ್ತು. ಆದರೆ ಕಿತ್ತೂರಿನಲ್ಲಿ ಕಾಂಗ್ರೆಸ್‌ ಶಾಸಕರಿದ್ದರೆ, ಖಾನಾಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ್‌ ಅವರು ಈಗ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಅವರನ್ನು ಸುಮಾರು 60 ಸಾವಿರ ಮತಗಳ ಭಾರಿ ಅಂತರದಿಂದ ಪರಾಭವಗೊಳಿಸಿದ್ದರು. ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲ ಹೊಂದಿದೆಯಾದರೂ, ಜನಮಾನಸದಲ್ಲಿ ಮೋದಿ ಅವರ ಮೇಲಿನ ಅಭಿಮಾನ ಜೋರಾಗಿದೆ. ಹಾಗಾಗಿ ಬಿಜೆಪಿ ಈ ಬಾರಿಯೂ ಇಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ ಉತ್ತರ ಕನ್ನಡದವರಲ್ಲ ಎನ್ನುವುದು ಕೂಡ ಬಿಜೆಪಿಗೆ ವರದಾನವಾಗಿದೆ. ಹಿಂದಿನ ಎಲ್ಲ ಚುನಾವಣೆಗಳಲ್ಲಿ ಕಿತ್ತೂರು ಮತ್ತು ಖಾನಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಭಾರೀ ಲೀಡ್‌ ಸಿಗುತ್ತಿತ್ತು. ಆದರೆ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಖಾನಾಪುರದವರು. ಹಾಗಾಗಿ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಎಷ್ಟು ಮತಗಳು ಬೀಳುತ್ತವೆ ಎನ್ನುವುದೂ ಮಹತ್ವದ್ದಾಗಿದೆ.

ಕ್ಷೇತ್ರದ ಚುನಾವಣಾ ಹಿನ್ನೋಟ

1952ರ ಕೆನರಾ ಲೋಕಸಭೆ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜೋಕಿಂ ಆಳ್ವಾ ಅವರು ನಿರಾಯಾಸವಾಗಿ ಗೆಲುವು ಸಾಧಿಸಿದ್ದರು. ಇವರು ಕಾಂಗ್ರೆಸ್‌ ನಾಯಕಿಯಾಗಿದ್ದ ಮಾರ್ಗರೇಟ್ ಆಳ್ವಾ ಅವರ ಮಾವ. ಮುಂದೆ 1957, 1962ರಲ್ಲೂ ಇವರು ಜಯ ಸಾಧಿಸಿದ್ದರು. 1967ರಲ್ಲಿ ಚುಟುಕು ಖ್ಯಾತಿಯ ದಿನಕರ ದೇಸಾಯಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. 1971ರಲ್ಲಿ ಕಾಂಗ್ರೆಸ್‌ನ ಬಿ ವಿ ನಾಯ್ಕ್ ಗೆಲುವು ಸಾಧಿಸಿದರು. 1977ರಲ್ಲಿ ಕಾಂಗ್ರೆಸ್‌ನ ಬಿ ಪಿ ಕದಂ ಗೆದ್ದರು. ಆ ಬಳಿಕ 1980ರಿಂದ 1991ರವರೆಗೆ ನಿರಂತರ ನಾಲ್ಕು ಚುನಾವಣೆಗಳಲ್ಲಿ ಜಿ ದೇವರಾಯ ನಾಯ್ಕ್ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದರು. 1996ರ ನಂತರ ಹಿಂದೂ ಜಾಗರಣ ವೇದಿಕೆಯಿಂದ ಬಿಜೆಪಿ ಪ್ರವೇಶಿಸಿದ ಅನಂತ್ ಕುಮಾರ್ ಹೆಗಡೆ ಜಯಭೇರಿ ಬಾರಿಸುತ್ತ ಬಂದರು.

ಘಟಾನುಘಟಿಗಳನ್ನು ಸೋಲಿಸಿದ ಕ್ಷೇತ್ರ ಇದು!

ಈ ಲೋಕಸಭಾ ಕ್ಷೇತ್ರದಲ್ಲಿ ದಿನಕರ ದೇಸಾಯಿ, ಶಿವರಾಮ ಕಾರಂತ, ರಾಮಕೃಷ್ಣ ಹೆಗಡೆ, ಅನಂತ್‌ ನಾಗ್‌ ಸೋತು ಹೋಗಿದ್ದರು! ನಾಡಿನ ಖ್ಯಾತ ಕವಿ ಮತ್ತು ಶಿಕ್ಷಣ ತಜ್ಞರಾಗಿದ್ದ ದಿನಕರ ದೇಸಾಯಿ ಅವರು 1971ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಎಲ್ಲ ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸದೆ ದಿನಕರ ದೇಸಾಯಿ ಅವರಿಗೆ ಬೆಂಬಲ ಘೋಷಿಸಿದ್ದವು. ಆದರೆ ದಿನಕರ ದೇಸಾಯಿ ಸೋತು ಹೋದರು. ಕಾಂಗ್ರೆಸ್‌ ಅಭ್ಯರ್ಥಿ ಬಿ ವಿ ನಾಯಕ್‌ 1,61,296 ಮತಗಳನ್ನು ಗಳಿಸಿದರೆ, ದಿನಕರ ದೇಸಾಯಿ ಅವರಿಗೆ ಬಿದ್ದಿದ್ದು ಕೇವಲ 64,517 ಮತಗಳು.

ಉತ್ತರ ಕನ್ನಡವು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹುಟ್ಟೂರು. ಆದರೆ 1977ರ ಲೋಕಸಭೆ ಚುನಾವಣೆಯಲ್ಲಿ ಜನತಾ ಪರಿವಾರದ ಭಾರತೀಯ ಲೋಕ ದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆ ಅವರು ಸೋಲು ಅನುಭವಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಬಿ ಪಿ ಕದಂ 1,95,974 ಮತಗಳನ್ನು ಪಡೆದು ಗೆದ್ದರೆ, ರಾಮಕೃಷ್ಣ ಹೆಗಡೆ ಅವರಿಗೆ 1,61,580 ಮತಗಳು ಬಿದ್ದಿದ್ದವು.

1989ರಲ್ಲಿ ಇದೇ ಕ್ಷೇತ್ರದಿಂದ ಖ್ಯಾತ ಸಾಹಿತಿ ಶಿವರಾಮ ಕಾರಂತರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅವರ ಸ್ಪರ್ಧೆಗೂ ಒಂದು ಕಾರಣ ಇತ್ತು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಆಗ ಕೈಗಾ ವಿರೋಧಿ ಹೋರಾಟ ಭುಗಿಲೆದ್ದಿತ್ತು. ಶಿವರಾಮ ಕಾರಂತರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ಪರಿಸರವಾದಿಗಳೆಲ್ಲರ ಒತ್ತಾಸೆಯ ಮೇರೆಗೆ ಅವರು ಚುನಾವಣೆಗೆ ಸ್ಪರ್ಧಿಸಿದ್ದರು. ಆ ವರ್ಷ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೇ ನಡೆದಿದ್ದವು. ಬಿಜೆಪಿ ಪಕ್ಷವು ಕೆನರಾ ಲೋಕಸಭೆಗೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೆ ಶಿವರಾಮ ಕಾರಂತರಿಗೆ ಬೆಂಬಲ ನೀಡಿತು. ಶಿವರಾಮ ಕಾರಂತರ ಪರ ಪ್ರಚಾರ ಜೋರಾಗಿ ನಡೆಯಿತು. ಆದರೆ ಶಿವರಾಮ ಕಾರಂತರು ಒಂದು ದಿನವೂ ಪ್ರಚಾರದಲ್ಲಿ ಭಾಗಿಯಾಗದೆ ವಿದೇಶ ಪ್ರವಾಸಕ್ಕೆ ಹೊರಟರು! ಮತ್ತೊಂದು ವಿಶೇಷ ಏನೆಂದರೆ, ಜನತಾ ದಳದ ಅಭ್ಯರ್ಥಿಯಾಗಿ ಜನಪ್ರಿಯ ನಟ ಅನಂತ್‌ನಾಗ್‌ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ದೇವರಾಯ ನಾಯ್ಕ್‌ 2,40,571 ಮತಗಳನ್ನು ಪಡೆದು ಜಯಶಾಲಿಯಾದರು. 2,೦9,003 ಮತ ಪಡೆದ ಅನಂತ್‌ನಾಗ್‌ ದ್ವಿತೀಯ ಸ್ಥಾನಿಯಾದರು. ರೈತ ಸಂಘದ ಅಭ್ಯರ್ಥಿ ಬಸಣ್ಣ 80,566 ಮತಗಳನ್ನು ಪಡೆದು ಮೂರನೇ ಸ್ಥಾನಿಯಾದರೆ, ಶಿವರಾಮ ಕಾರಂತರಿಗೆ ಸಿಕ್ಕಿದ್ದು ಕೇವಲ 58,902 ಮತಗಳು.

2014ರ ಚುನಾವಣೆ ಫಲಿತಾಂಶ
ಅನಂತ್ ಕುಮಾರ್ ಹೆಗಡೆ, ಬಿಜೆಪಿ: 5.46 ಲಕ್ಷ ಮತ
ಪ್ರಶಾಂತ್ ಆರ್ ದೇಶಪಾಂಡೆ, ಕಾಂಗ್ರೆಸ್‌: 4.06 ಲಕ್ಷ ಮತ
ಗೆಲುವಿನ ಅಂತರ: 1 ಲಕ್ಷಕ್ಕೂ ಅಧಿಕ

2019ರ ಚುನಾವಣೆ ಫಲಿತಾಂಶ
ಅನಂತ್ ಕುಮಾರ್ ಹೆಗಡೆ, ಬಿಜೆಪಿ: 7.86 ಲಕ್ಷ ಮತ
ಆನಂದ್‌ ಅಸ್ನೋಟಿಕರ್‌, ಕಾಂಗ್ರೆಸ್‌: 3.06 ಲಕ್ಷ ಮತ
ಗೆಲುವಿನ ಅಂತರ: 4.8 ಲಕ್ಷ

ಇದನ್ನೂ ಓದಿ: Shivamogga Lok Sabha Constituency: ತ್ರಿಕೋನ ಕದನದ ಶಿವಮೊಗ್ಗದಲ್ಲಿ ಯಾರಿಗೆ ವಿಜಯದ ಮಾಲೆ?

Exit mobile version