Site icon Vistara News

Filmfare OTT Awards | ಫಿಲ್ಮ್ ಫೇರ್ ಒಟಿಟಿ ಅವಾರ್ಡ್ಸ್‌ಗೆ ನಟಿ, ಕನ್ನಡತಿ ಆದ್ಯಾ ಆನಂದ್ ನಾಮಿನೇಟ್

Adhya Anand Filmfare OTT Awards Crushed Series

ಕಾರವಾರ: ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ಸ್ (Filmfare OTT Awards) ನಾಮಿನೇಟೆಡ್ ಸಂಬಂಧ ಸಿರೀಸ್ ಹಾಗೂ ನಟ-ನಟಿಯರ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿಯ ಅವಾರ್ಡ್ಸ್‌ಗೆ ಕನ್ನಡದ ಕುವರಿ, ಕ್ರಷ್ಡ್ ಸಿರೀಸ್ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿರುವ ಉತ್ತರ ಕನ್ನಡ ಜಿಲ್ಲೆಯ ಆದ್ಯಾ ಆನಂದ್ ನಾಮಿನೇಟ್ ಆಗಿದ್ದಾರೆ. ಈ ಮೂಲಕ ಈ ಅವಾರ್ಡ್ಸ್‌ಗೆ ನಾಮಿನೇಟ್ ಆದ ಅತಿ ಕಿರಿಯ ನಟಿ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ.

2021ರ ಆಗಸ್ಟ್ 1ರಿಂದ 2022ರ ಜುಲೈ 31ರ ಒಳಗೆ ಬಿಡುಗಡೆಯಾದ ಹಿಂದಿ ವೆಬ್ ಒರಿಜಿನಲ್‌ಗಳನ್ನು ಫಿಲ್ಮ್ ಫೇರ್ ಒಟಿಟಿ ಅವಾರ್ಡ್ಸ್‌ಗೆ ನಾಮಿನೇಟ್ ಮಾಡಲಾಗುತ್ತದೆ. ಅದರಂತೆ ಈ ವರ್ಷದ ಜನವರಿಯಲ್ಲಿ ‘ಅಮೆಜಾನ್ ಮಿನಿ ಟಿವಿ’ಯಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆಗಳನ್ನು ಗಳಿಸಿದ್ದ ರೊಮ್ಯಾಂಟಿಕ್ ಮತ್ತು ಕಾಮಿಡಿ ಕಥಾ ಹಂದರದ ‘ಕ್ರಷ್ಡ್’ ಸಿರೀಸ್ ಈ ಬಾರಿಯ ಫಿಲ್ಮ್ ಫೇರ್ ಒಟಿಟಿ ಅವಾರ್ಡ್ಸ್‌ನ ‘ಬೆಸ್ಟ್ ಸಿರೀಸ್’ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಜತೆಗೆ ಈ ಸಿರೀಸ್‌ನಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ್ದ ಆದ್ಯಾ ಆನಂದ್ ಕೂಡ ‘ಬೆಸ್ಟ್ ಆ್ಯಕ್ಟರ್ ಫೀಮೇಲ್’ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

‘ಬಾಂಬೆ ಬೇಗಮ್’ ವೆಬ್ ಸಿರೀಸ್ ಮೂಲಕ ಭಾರತೀಯ ಕಿರುತೆರೆ ಪ್ರವೇಶಿಸಿದ್ದ ಆದ್ಯಾ, ಕ್ರಷ್ಡ್ ಸಿರೀಸ್‌ನಲ್ಲಿ ‘ಮಥುರ್’ ಎಂಬ ಪಾತ್ರದಲ್ಲಿ ಮುದ್ದು ಮುದ್ದಾಗಿ ನಟಿಸಿದ್ದರು. ಈಕೆಯ ನಟನೆಗಂತೂ ಯುವಕರು ಫಿದಾ ಆಗಿದ್ದರು. ಟಾಕ್ ಆಫ್ ದಿ ಟೌನ್ ಆಗಿದ್ದ ‘ಕ್ರಷ್ಡ್’ನಲ್ಲಿನ ತಮ್ಮ ನಟನೆಯಿಂದಾಗಿ ಆದ್ಯಾ ಇಂಟರ್ನೆಟ್ ಸೆನ್ಸೇಶನ್ ಕೂಡ ಆಗಿದ್ದಳು. ‘ಕ್ರಷ್ಡ್’, ಶಾಲಾ ದಿನಗಳಲ್ಲಿ ಅನುಭವಕ್ಕೆ ಬರುವ ರೊಮ್ಯಾಂಟಿಕ್ ಪ್ರೇಮ ಕಥನವಾಗಿದ್ದು, ಎಲ್ಲ ವಯಸ್ಸಿನವರಿಗೂ ಒಗ್ಗುವ ಸುಂದರ ಕಥೆಯನ್ನು ಹೊಂದಿದೆ. ಹೀನಾ ಡಿಸೋಜಾ ಮತ್ತು ಮಂದರ್ ಕುರುಂಡ್ಕರ್ ನಿರ್ದೇಶನದ ಈ ಸರಣಿಯಲ್ಲಿ ರುದ್ರಾಕ್ಷ್ ಜೈಸ್ವಾಲ್ ಮತ್ತು ಆದ್ಯಾ ಆನಂದ್ ಲೀಡ್ ರೋಲ್‌ನಲ್ಲಿ ನಟಿಸಿದ್ದರು.

ಡಿ.1 ರಂದು ‘ಕ್ರಷ್ಡ್’ನ ಸಿರೀಸ್- 2 ಕೂಡ ಬಿಡುಗಡೆಯಾಗಿದ್ದು, ಇದರ ನಡುವೆಯೇ ಮೊದಲ ಸಿರೀಸ್‌ನಲ್ಲಿ ಆದ್ಯಾ ಬೆಸ್ಟ್ ಆ್ಯಕ್ಟರ್ ಅವಾರ್ಡ್‌ಗೆ ನಾಮಿನೇಟ್ ಆಗಿರುವುದು ಚಿತ್ರ ತಂಡದ ಖುಷಿಯನ್ನು ಇಮ್ಮಡಿಗೊಳಿಸಿದೆ. ಆದ್ಯಾ ಫಿಲ್ಮ್ ಫೇರ್ ಜತೆಗೆ ಇನ್ನೂ ಎರಡು ಅವಾರ್ಡ್ಸ್‌ಗೆ ನಾಮಿನೇಟ್ ಆಗಿದ್ದಾರೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಆದ್ಯಾ, ಕನ್ನಡದಲ್ಲೂ ನಟನೆಗೆ ಅವಕಾಶಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

“ಫಿಲ್ಮ್‌ಫೇರ್‌ಗೆ ನಾಮಿನೇಶನ್ ಆಗಿರುವುದು ನನಗೆ ಬಹಳ ಖುಷಿ ತಂದಿದೆ. ಸಿಂಗಾಪುರದಲ್ಲಿ ಸಿಕ್ಕಿದ್ದಕ್ಕಿಂತ ಹೆಚ್ಚು ಪ್ರೀತಿ ನನಗೆ ನನ್ನ ದೇಶದಲ್ಲಿ ಸಿಗುತ್ತಿದೆ. ಹಿಂದಿಯಲ್ಲಿ ನಟಿಸಿದ ಎರಡೂ ಸಿರೀಸ್‌ಗಳಿಂದ ನನಗೆ ಜನರಿಂದ ಉತ್ತಮ ಪ್ರತಿಕ್ರಿಯೆಗಳು ಸಿಕ್ಕಿವೆ. ಬೇರೆ ಭಾಷೆಗಳ ಸಿನಿಮಾಗಳಲ್ಲೂ ನಟಿಸಲೂ ನನಗೆ ಮನಸ್ಸಿದೆ. ಮಾತೃ ಭಾಷೆ ಕನ್ನಡದ ಕಥೆಗಳಲ್ಲಿ ನಟಿಸಲು ಅವಕಾಶಗಳಿಗಾಗಿ ಕಾಯುತ್ತಿದ್ದೇನೆ. ಉತ್ತಮ ಕಥೆಯ ಅವಕಾಶ ಸಿಕ್ಕಲ್ಲಿ ಕನ್ನಡದಲ್ಲೂ ನಟನೆಗೆ ಸಿದ್ಧಳಿದ್ದೇನೆ” ಎಂದು ಆದ್ಯಾ ಆನಂದ್ ಹೇಳಿದ್ದಾರೆ.

ಇದನ್ನೂ ಓದಿ | Fashion Icon | ಬ್ರಿಟಿಷ್‌ ಫ್ಯಾಷನ್‌ ಅವಾರ್ಡ್ ಸಮಾರಂಭದಲ್ಲಿ ಗಮನ ಸೆಳೆದ ನತಾಶ ಪೂನಾವಾಲಾ ಫ್ಲವರ್‌ ಬ್ಲಾಕ್‌ ಗೌನ್‌

Exit mobile version