ಕಾರವಾರ: ಮೊಬೈಲ್ ಮೂಲಕ ಸಂಪರ್ಕ ಮಾಡಿ ಅಶ್ಲೀಲ ವಿಡಿಯೊ ಮೂಲಕ ಪ್ರಚೋದಿಸಿ ಹನಿ ಟ್ರ್ಯಾಪ್ ಮಾಡುವ ದುಷ್ಟ ಜಾಲದಿಂದಾಗಿ ಅಂಕೋಲಾದ ಯುವಕನೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಅಂಕೋಲಾದ ಕೋಟೆ ಮಾರುತಿ ದೇವಸ್ಥಾನದ ಬಳಿ ಸೆಲೂನ್‌ನಲ್ಲಿ ಉದ್ಯೋಗ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ ಯುವಕನೊಬ್ಬ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಹೇಲ್ ಸುಲಮಾನಿ(23) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಅಂಕೋಲಾದ ಕಾಕರಮಠದ ಬಳಿ ಸಹೋದರನೊಂದಿಗೆ ಹೇರ್ ಸೆಲೂನ್ ನಡೆಸುತಿದ್ದ ಸುಹೇಲ್ ಸುಲಮಾನಿಗೆ ಇತ್ತೀಚೆಗೆ ಕೆಲವು ದಿನದಿಂದ ಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು. ಇದರಿಂದ ಬೇಸತ್ತು ಆತ ನೇಣಿಗೆ ಶರಣಾಗಿದ್ದಾನೆ.
ವೀಡಿಯೋದಲ್ಲಿ ಹೇಳಿಕೆ
ತಾನು ಎದುರಿಸುತ್ತಿರುವ ಮಾನಸಿಕ ನೋವಿನ ಬಗ್ಗೆ ವಿಡಿಯೊವೊಂದನ್ನು ಮಾಡಿಟ್ಟು ಆತ ಸಾವಿಗೆ ಶರಣಾಗಿದ್ದಾನೆ. ತನ್ನನ್ನು ಯಾರೋ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಮನೆಯವರ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ ವಿಡಿಯೊದಲ್ಲಿ ಹೇಳಿದ್ದಾರೆ. ʻʻನನ್ನ ಸಾವಿಗೆ ನಾನೇ ಕಾರಣ, ಯಾರೂ ನನ್ನ ಹತ್ಯೆ ಮಾಡಿಲ್ಲʼʼ ಎಂದು ಆತ ಹೇಳಿದ್ದಾನೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಆತ ವಿಡಿಯೊದಲ್ಲಿ ಹೇಳಿಕೊಂಡಿರುವ ಪ್ರಕಾರ, ಯಾರೋ ಆತನ ಜತೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಅವನ ಮುಂದೆ ಅಶ್ಲೀಲವಾಗಿ ವರ್ತಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ತಾನು ಏನು ಮಾಡಿದ್ದೇನೆ ಎನ್ನುವುದು ಗೊತ್ತಿಲ್ಲ. ಬಳಿಕ ತನ್ನನ್ನು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾನೆ. ಇದು ಯುವಕರನ್ನು ಅಶ್ಲೀಲ ಕರೆ, ವಿಡಿಯೊಗಳ ಮೂಲಕ ಪ್ರಚೋದಿಸಿ ಅವರನ್ನು ಅದೇ ರೀತಿ ಮಾಡುವಂತೆ ಮಾಡಿ ಬಳಿಕ ಆ ವಿಡಿಯೋಗಳನ್ನು ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವ ತಂಡದ ಕೃತ್ಯವೆಂದು ನಂಬಲಾಗಿದೆ. ದೇಶದಲ್ಲಿ ಇಂಥ ಸಾವಿರಾರು ಕೃತ್ಯಗಳು ನಡೆಯುತ್ತಿದ್ದು, ಜನರು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಜತೆಗೆ ನೂರಾರು ಮಂದಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ| Honey trap | ಡಾಕ್ಟರ್ ರೂಮ್‌ಗೆ ಯುವತಿ ಕಳುಹಿಸಿ ಕೋಟಿ ರೂ. ಕಿತ್ತಿದ್ದ ಟೀಮ್ ಅರೆಸ್ಟ್