ಬೆಂಗಳೂರು: ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಗುರುವಾರ ದಿನಪೂರ್ತಿ ಪ್ರತಿಭಟನೆಗಳ ಬಿಸಿ ತಟ್ಟಿತು. ಇ.ಡಿ. ವಿಚಾರಣೆ ವಿರೋಧಿಸಿ ಕರ್ನಾಟಕದಲ್ಲಿ ಕೆಪಿಸಿಸಿ ವತಿಯಿಂದ ಪ್ರತಿಭಟನೆ ನಡೆದರೆ, ಅಗ್ನಿಪಥ ಯೋಜನೆ ವಿರೋಧಿಸಿ ವಿವಿಧೆಡೆ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಬಿಜೆಪಿ ವಿಫಲವಾಗಿರುವುದು ಪಕ್ಷದಲ್ಲಿ ಚಿಂತೆಗೆ ಕಾರಣವಾಗಿದೆ. ಅಮೆರಿಕ ಮಾರುಕಟ್ಟೆಯಿಂದ, ದೇಶದಲ್ಲಿ ಕೋವಿಡ್ ಹೆಚ್ಚಳದವರೆಗೆ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.
1.. ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ 0-2, ಬಿಜೆಪಿ 2-2, ಜೆಡಿಎಸ್ 1-0
ವಿಧಾನಪರಿಷತ್‌ಗೆ ಶಿಕ್ಷಕರು ಹಾಗೂ ಪದವೀಧರ ಮತದಾರರ ಮೂಲಕ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಎರಡು, ಕಾಂಗ್ರೆಸ್ ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡರೆ ಜೆಡಿಎಸ್ ಈ ಬಾರಿಯೂ ಶೂನ್ಯ ಗಳಿಸಿದೆ. ಚುನಾವಣೆಗೂ ಮುನ್ನ ಬಿಜೆಪಿ ಹೊಂದಿದ್ದ ಎರಡು ಸ್ಥಾನಗಳು ಹಾಗೇಯೇ ಉಳಿದಿದ್ದರೆ (2-2), ಕಾಂಗ್ರೆಸ್ ಶೂನ್ಯದಿಂದ ಎರಡು ಸ್ಥಾನ ಗಳಿಸಿರುವುದು (0-2) ಅಚ್ಚರಿ ತಂದಿದೆ. ಆಡಳಿತಾರೂಢ ಬಿಜೆಪಿಗೆ ಇದು ಮುಖಭಂಗವಾಗುವ ವಿಚಾರ. ಜೆಡಿಎಸ್ ತನ್ನ ಬಳಿಯಿದ್ದ ಒಂದು ಸ್ಥಾನವನ್ನು ಕಳೆದುಕೊಂಡಿದೆ(1-0). (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
2.. ದೆಹಲಿಯಲ್ಲಿ ಇ.ಡಿ. ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ(ಇ.ಡಿ.) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಅಂಗವಾಗಿ ಗುರುವಾರ ಬೆಂಗಳೂರಿನಲ್ಲಿ ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಇಡೀ ದಿನ ರಾಜ್ಯ ಸರ್ಕಾರಕ್ಕೆ ತಲೆ ನೋವಾಯಿತು.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
3.. ವಿಚಾರಣೆ ಜೂನ್ 20ಕ್ಕೆ ಮುಂದೂಡಲು ರಾಹುಲ್ ಮನವಿ, ಇ.ಡಿ ಒಪ್ಪಿಗೆ ಕೊಡುತ್ತಾ?
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ಇನ್ನಷ್ಟು ತೀವ್ರಗೊಂಡಿರುವ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಾಲಿ ನಡೆಯುತ್ತಿರುವ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡುವಂತೆ ಮನವಿ ಮಾಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ). ಮೋತಿಲಾಲ್ ವೋರಾ ದಾಖಲೆಗಳನ್ನು ನಿರ್ವಹಿಸುತ್ತಿದ್ದರು, ಅದರಲ್ಲಿ ಅಕ್ರಮ ನಡೆದ ಬಗ್ಗೆ ನನಗೆ ವೈಯಕ್ತಿಕ ಮಾಹಿತಿ ಇಲ್ಲ ಎಂದು ರಾಹುಲ್ ಗಾಂಧಿ ಇ.ಡಿ. ಅಧಿಕಾರಿಗಳ ಎದುರು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬಗ್ಗೆ ಮೋತಿ ಲಾಲ್ ವೋರಾ ಪುತ್ರ ಅರುಣ್ ವೋರಾ ಪ್ರತಿಕ್ರಿಯೆ ನೀಡಿದ್ದಾರೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
4.. ಅಗ್ನಿಪಥ್ ಯೋಜನೆಯಲ್ಲಿ ಉದ್ಯೋಗ ಭದ್ರತೆಯಿಲ್ಲವೆಂದು ಹಲವೆಡೆ ಪ್ರತಿಭಟನೆ, ರೈಲಿಗೆ ಬೆಂಕಿ
ಕೇಂದ್ರ ಸರಕಾರದಿಂದ ಇತ್ತೀಚೆಗೆ ಘೋಷಣೆಯಾದ ಅಗ್ನಿಪಥ್ (Agnipath) ಯೋಜನೆಯ ವಿರುದ್ಧ ಇದೀಗ ಪ್ರತಿಭಟನೆ ಶುರುವಾಗಿದೆ. ಬಿಹಾರದಲ್ಲಿ ಕಲ್ಲುತೂರಾಟ ನಡೆಸಿ ಹಿಂಸಾಚಾರ ಪ್ರತಿಭಟನೆ ಜರುಗಿದ್ದು ಕಂಡುಬಂದಿದೆ. ನೂರಾರು ಮಂದಿ ಸೇರಿ ನಡೆಸಿದ ಪ್ರತಿಭಟನೆಯಲ್ಲಿ ರೈಲಿಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಿಹಾರ್ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಕೆಲವೆಡೆ ʼಈ ಯೋಜನೆಯಲ್ಲಿ ಉದ್ಯೋಗ ಭದ್ರತೆಯಿಲ್ಲʼ ಎಂದು ಅನೇಕರು ಧ್ವನಿ ಎತ್ತಿ ಪ್ರತಿಭಟನೆ ನಡೆಸಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆ ಕಂಡುಬಂದಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ನೀವೂ ʼಅಗ್ನಿಪಥ್ʼನಲ್ಲಿ ಸಾಗಿ ಸೇನೆ ಸೇರಬೇಕೇ? ನೇಮಕ ಹೇಗೆ ನಡೆಯುತ್ತದೆ ಗೊತ್ತೆ?
5.. ಯೋಗಿ ಬುಲ್ಡೋಜರ್‌ಗೆ ತಡೆ ನೀಡದ ಸುಪ್ರೀಂಕೋರ್ಟ್, ಕಾನೂನು ಮೀರದಿರಲಿ ಎಂದು ಎಚ್ಚರಿಕೆ
ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಅದರೆ, ಬುಲ್ಡೋಜರ್ ಕಾರ್ಯಾಚರಣೆಗಳು ಕಾನೂನಿನ ಚೌಕಟ್ಟನ್ನು ಮೀರದಿರಲಿ ಎಂದು ಎಚ್ಚರಿಕೆ ನೀಡಿದೆ. ಧ್ವಂಸ ಕಾರ್ಯಾಚರಣೆಗೆ ಸಂಬಂಧಿಸಿದ ವಿಸ್ತೃತ ಅಫಿಡವಿಟ್‌ನ್ನು ಮೂರು ದಿನದೊಳಗೆ ಸಲ್ಲಿಸುವಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಜೂನ್ 21ಕ್ಕೆ ನಿಗದಿ ಮಾಡಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
6.. Covid news | ಅಕ್ಟೋಬರ್‌ನಲ್ಲಿ ಕೊರೊನಾ ಉತ್ತುಂಗ, ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?
ಕೊರೊನಾ ನಾಲ್ಕನೇ ಅಲೆಗೆ ಭಯ ಪಡುವ ಅಗತ್ಯವಿಲ್ಲ. ಈಗಾಗಲೇ ಐಐಟಿ ಕಾನ್ಪುರದ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದ್ದು, ಅಕ್ಟೋಬರ್‌ನಲ್ಲಿ ಕೊರೊನಾ ಉತ್ತುಂಗಕ್ಕೆ ಹೋಗುತ್ತದೆ ಎಂದಿದ್ದಾರೆ. ಜೂನ್ ಮೂರನೇ ವಾರದಿಂದ ಅಕ್ಟೋಬರ್‌ವರೆಗೂ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಹಿಂದೆ ಕೂಡ ಐಐಟಿ ಸೋಂಕಿನ ತೀವ್ರತೆ ಕುರಿತು ವರದಿ ನೀಡಿತ್ತು. ಸದ್ಯ, ನಾವು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅದಕ್ಕೆ ತಕ್ಕಂತೆ ಪೂರಕವಾಗಿ ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
7.. ರಾಯಚೂರಿನ ಕಲುಷಿತ ನೀರಿಗೆ ಮತ್ತೊಬ್ಬರು ಮಹಿಳೆ ಬಲಿ, ಸಾವಿನ ಸಂಖ್ಯೆ 7ಕ್ಕೆ ಏರಿಕೆ
ರಾಯಚೂರಿನಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ನಗರದಲ್ಲಿ ಕಲುಷಿತ ನೀರು ಕುಡಿದಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಶಮೀಮ್ ಬೇಗಂ (48) ಮೃತಪಟ್ಟ ದುರ್ದೈವಿ. ವಾರ್ಡ್ ನಂಬರ್ 14ರ ಮಚ್ಚಿ ಬಜಾರ್ ನಿವಾಸಿಯಾಗಿರುವ ಶಮೀಮ್ ಬೇಗಂ ಕಲುಷಿತ ನೀರು ಸೇವಿಸಿದ ಬಳಿಕ ವಾಂತಿ ಭೇಧಿಯಾಗಿ ಕಿಡ್ನಿ ಸಮಸ್ಯೆಯಿಂದ ಮೇ 29 ರಂದು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
8.. ಪಂಡಿತರ ಹತ್ಯೆಯೂ ಗೋಸಾಗಾಟ ಗಾರರ ಮೇಲಿನ ಹಲ್ಲೆಯೂ ಒಂದೇ: ಸಾಯಿ ಪಲ್ಲವಿ ಹೇಳಿಕೆ ಸಮರ್ಥಿಸಿದ ರಮ್ಯಾ
ಸ್ಯಾಂಡಲ್ವುಡ್ ನಟಿ ರಮ್ಯಾ ಖಡಕ್ ಅಭಿಪ್ರಾಯಗಳಿಗೆ ಹೆಸರಾದರವರು. ಇದೀಗ ಅವರು ಬಹುಭಾಷಾ ನಟಿ ಸಾಯಿಪಲ್ಲವಿ ಅವರು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿದ್ದಾರೆ. ಅವರು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
9.. ಅಮೆರಿಕದಲ್ಲಿ ಫೆಡರಲ್ ರಿಸರ್ವ್ ಬಡ್ಡಿ ದರ 0.75% ಹೆಚ್ಚಳ, ಜಾಗತಿಕ ಆರ್ಥಿಕ ಹಿಂಜರಿತದ ಭೀತಿ
ಅಮೆರಿಕದಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿ ದರವನ್ನು 0.75% ಏರಿಸಿದ್ದು, ಕಳೆದ 28 ವರ್ಷಗಳಲ್ಲಿಯೇ ದೊಡ್ಡ ಪ್ರಮಾಣದ ಹೆಚ್ಚಳವಾಗಿದೆ. 1994ರಿಂದೀಚೆಗಿನ ಗರಿಷ್ಠ ಬಡ್ಡಿ ದರ ಇದಾಗಿದ್ದು, ಜಾಗತಿಕ ಅರ್ಥವ್ಯವಸ್ಥೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ರಿಟೇಲ್ ಹಣದುಬ್ಬರ 8.6%ಕ್ಕೆ ಜಿಗಿದಿರುವ ಹಿನ್ನೆಲೆಯಲ್ಲಿ ಫೆಡರಲ್ ರಿಸರ್ವ್ ಅದನ್ನು ಹತ್ತಿಕ್ಕುವ ಉದ್ದೇಶದಿಂದ ಬಡ್ಡಿ ದರದಲ್ಲಿ ಗಣನೀಯ ಏರಿಕೆ ಮಾಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10.. ಇಂಗ್ಲೆಂಡ್ ಪ್ರವಾಸಕ್ಕಿಲ್ಲ ಕೆ.ಎಲ್. ರಾಹುಲ್, ಚಿಕಿತ್ಸೆ ಪಡೆಯಲು ಹಾರುತ್ತಿರೋದೆಲ್ಲಿಗೆ?
ಟೀಂ ಇಂಡಿಯಾದ ಡ್ಯಾಷಿಂಗ್ ಕ್ರಿಕೆಟರ್ ಕೆ.ಎಲ್. ರಾಹುಲ್ ಗಾಯದಿಂದ ಬಳಲುತ್ತಿರುವ ಕಾರಣ ಇಂಗ್ಲೆಂಡ್ ಪ್ರವಾಸದಿಂದ ಹೊರಗುಳಿಯುವುದು ಖಚಿತಪಟ್ಟಿದೆ. ಈ ತಿಂಗಳ ಅಂತ್ಯದಲ್ಲಿ ಅಥವಾ ಜುಲೈನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿಗೆ ತೆರಳಲಿದ್ದಾರೆ ಎಂದು ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)