ಮೈಸೂರು/ಚಾಮರಾಜನಗರ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ (BY Vijayendra) ನೇಮಕವಾದ ಬೆನ್ನಲ್ಲೇ ಮಾಜಿ ಸಚಿವ ವಿ. ಸೋಮಣ್ಣ (V Somanna) ಅವರು ಕೆರಳಿ ನಿಂತಿದ್ದಾರೆ. ಅವರು ಬಿಜೆಪಿಗೆ ಗುಡ್‌ಬೈ (Good bye to BJP) ಹೇಳಲು ಬಹುತೇಕ ಮಾನಸಿಕವಾಗಿ ಸಿದ್ಧರಾಗಿರುವುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ. ಇದೀಗ ಡಿಸೆಂಬರ್ ಆರರಂದು ಮಹತ್ವದ ಘೋಷಣೆ ಮಾಡುವುದಾಗಿ ಅವರು ಪ್ರಕಟಿಸಿದ್ದು, ಅಂದು ಬಿಜೆಪಿಗೆ ಕೊನೆಯ ನಮಸ್ಕಾರ ಹೇಳುತ್ತಾರೆ ಎಂದು ಹೇಳಲಾಗುತ್ತಿದೆ.
ಗುರುವಾರ ಮೈಸೂರು ಮತ್ತು ಚಾಮರಾಜನಗರದಲ್ಲಿ ಮಾತನಾಡಿದ ವಿ. ಸೋಮಣ್ಣ ಅವರು, ಡಿ.6ರ ನಂತರ ನನ್ನ ಮನಸ್ಸಿನ ಭಾವನೆ ಹೇಳುತ್ತೇನೆ. ನಮ್ಮ ಪಕ್ಷದಲ್ಲಿ ಒಂದು ರೀತಿ ಸೋಮನಹಳ್ಳಿ ಮುದುಕಿ ಕಥೆ ಆಗಿದೆ. 6ನೇ ತಾರೀಕು ಆದ ಮೇಲೆ ಅದನ್ನು ವಿವರಿಸ್ತೀನಿ. ಹೈಕಮಾಂಡ್ ಸೂಚನೆ ತಲೆ ಮೇಲೆ ಹೊತ್ತು ದುಡಿಮೆ ಮಾಡಿದ ಮೇಲೆ ಯಾವ ರೀತಿ ನನಗೆ ಹೊಡೆತ ಆಯ್ತು ಎನ್ನುವುದನ್ನು ಡಿ.6 ಆದ ನಂತರ ಹೇಳುತ್ತೇನೆ. ಬಿಡಿ, ಬಿಡಿಯಾಗಿ ವಿವರಿಸ್ತೀನಿʼʼ ಎಂದು ಹೇಳಿದ್ದಾರೆ. ಡಿಸೆಂಬರ್ ಆರರವರೆಗೆ ಮಾತನಾಡದಂತೆ ವರಿಷ್ಠರು ಸೂಚಿಸಿದ್ದಾಗಿ ಸೋಮಣ್ಣ ಹೇಳಿದರು.
ಅರವಿಂದ ಲಿಂಬಾವಳಿ ಹೇಳಿಕೆಗೆ ಸಹಮತ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರ ನೇಮಕ ಸಹಮತದಿಂದ ಆಗಿಲ್ಲ. ವಿಜಯೇಂದ್ರ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್. ಅಶೋಕ್ ಅವರು ಹೊಂದಾಣಿಕೆ ಮನೋಭಾವದವರು ಎಂಬ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಹೇಳಿಕೆಯನ್ನು ತಾನು ಸಮರ್ಥಿಸುವುದಾಗಿ ಹೇಳಿದರು ಸೋಮಣ್ಣ.
ʻʻರಾಜಕಾರಣ ದೊಂಬರಾಟ ಅಲ್ಲ. ರಾಜಕಾರಣ ಯಾವುದೇ ಮನೆತನಕ್ಕೆ ಸಿಮೀತವಲ್ಲ. ರಾಜಕಾರಣ ನಾಟಕ ಕಂಪನಿ ಅಲ್ಲ. ಒಳ ಒಪ್ಪಂದಕ್ಕೆ ಸೀಮಿತವಲ್ಲʼʼ ಎಂದು ಸೋಮಣ್ಣ ಖಾರವಾಗಿ ಹೇಳಿದರು.
ಯಡಿಯೂರಪ್ಪ ತಮ್ಮನ್ನು ಸಂಪರ್ಕಿಸಿದ್ದರಾ ಎಂಬ ಪ್ರಶ್ನೆಗೆ ಸೋಮಣ್ಣ ಪ್ರತಿಕ್ರಿಯಿಸಿ, ʻʻನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನೂ ಯಾರನ್ನು ಸಂಪರ್ಕಿಸಿಲ್ಲ. ಆ ಥರದ ಯಾವ ಪ್ರಯತ್ನವೂ ನಡೆದಿಲ್ಲʼʼ ಎಂದರು.
ಪಕ್ಷ ಬಿಡಲ್ಲ ಅಂತಾನೂ ಹೇಳಿದ ಸೋಮಣ್ಣ
ಪಕ್ಷದ ನಾಯಕತ್ವದ ಬಗ್ಗೆ ಕಠಿಣ ಪದಗಳಲ್ಲೇ ಮಾತನಾಡಿದ ಸೋಮಣ್ಣ ಅವರು, ʻಪಕ್ಷಾಂತರ ಮಾಡ್ತೀರಾʼ ಎಂಬ ಪ್ರಶ್ನೆಗೆ ಯದ್ವಾತದ್ವಾ ಸಿಟ್ಟಾದರು.
ʻʻನಾನು ಎಲ್ಲೂ ಹೋಗಲ್ಲ. ಪಕ್ಷಕ್ಕೆ ನನ್ನ ದುಡಿಮೆ ಇದೆ. ವರಿಷ್ಠರ ಆದೇಶ ತಲೆ ಮೇಲೆ ಇಟ್ಟುಕೊಂಡು ಮೆರೆಸಿದ್ದೇನೆ. ಡಿಸೆಂಬರ್ 6ರವರೆಗೆ ಕಾದು ನೋಡಿ. ಏನು ತೀರ್ಮಾನ ಮಾಡಿದ್ದೇನೆ ಅಂತ ಅಂದು ಹೇಳುತ್ತೇನೆ. ನಾನು ರಾಜ್ಯದ ಹಿರಿಯ ರಾಜಕಾರಣಿ. ಸುಮ್ಮನೆ ಏನೇನೋ ಮಾತನಾಡಬೇಡಿʼʼ ಎಂದು ಗರಂ ಆದರು.
ರಾಜ್ಯಾಧ್ಯಕ್ಷ ಹುದ್ದೆ ಕೇಳಿದ್ದು ನಿಜವೆಂದ ವಿ.ಸೋಮಣ್ಣ
ನಾನು ಬಿಜೆಪಿ ರಾಜ್ಯಾಧ್ಯಕ್ಷತೆ ಹುದ್ದೆ ಕೇಳಿದ್ದು ನಿಜ. ಆದರೆ, ಅದು ಏನಾಗಿದೆ ಅಂತ ಡಿ. 6ರಂದು ಹೇಳುತ್ತೇನೆ ಎಂದ ಅವರು ಯಡಿಯೂರಪ್ಪನೂ ನನ್ನನ್ನು ಸಂಪರ್ಕಿಸಿಲ್ಲ, ತಿಮ್ಮಪ್ಪ, ಯಾವ ಬೊಮ್ಮಪ್ಪನೂ ನನಗೆ ಕರೆ ಮಾಡಿಲ್ಲ ಎಂದರು.
ಸಿಎಂ, ಡಿಸಿಎಂ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ
ʻʻನನ್ನ ಜೀವನದಲ್ಲಿ ನಾನು ಯಾರನ್ನೂ ಭೇಟಿ ಮಾಡುವ ಪರಿಸ್ಥಿತಿ ನನ್ನದಲ್ಲ. ನಾನು ಇನ್ನೊಬ್ಬರತ್ರ ಹೋಗಿ ಹಲ್ಲು ಕಿಸಿದು, ನನ್ನನ್ನು ಪಾರ್ಟಿಗೆ ಸೇರಿಸಿಕೊಳ್ಳಿ ಅಂತ ಹೇಳಲ್ಲ.. ನನ್ಗೆ ಆ ಗತಿ ಬಂದಿಲ್ಲ , ನಾನು ಸೋಮಣ್ಣ. ! ನಾನು ಬೆಳೆದಿರುವುದು ಜೆ.ಎಚ್.ಪಾಟೀಲ್, ದೇವೇಗೌಡ, ರಾಮಕೃಷ್ಣ ಹೆಗಡೆ ಗರಡಿಯಲ್ಲಿ. ಸ್ವಾಭಿಮಾನ, ಸಂಸ್ಕಾರ ಇಟ್ಟುಕೊಂಡು ಬದುಕಿದ್ದೇನೆʼʼ ಎಂದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, ನಾನು ಕಂಟೆಂಡ್ರು ಅಲ್ಲ , ಕಾಂಪಿಟೇಟರ್ ಅಲ್ಲ. ಯಾರನ್ನೂ ಕೂಡ ನನ್ನ ಜತೆ ಹೋಲಿಕೆ ಮಾಡಬೇಡಿ. ನೀವು ನೋಡಿದ್ದೀರಾ? ಏನೇನು ಹಲ್ಕಾ ಕಲ್ಸ ಆಯ್ತು ಅಂತ ನಿಮಗೆ ಗೊತ್ತಿದೆ. ನನಗೆ ನನ್ನದೇ ಆದ ದುಡಿಮೆ ಇದೆ. ಶ್ರಮ ಇದೆ. ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು. ನನ್ನ ಅಂತರಾಳದ ನೋವನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಎಲ್ಲೆಲ್ಲಿ ತಪ್ಪಾಗಿದೆ ಎನ್ನುವ ಮಾಹಿತಿಯನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಡಿ.6 ರಂದು ಎಲ್ಲವನ್ನೂ ವಿವರಿಸುತ್ತೇನೆ ಎಂದು ಚಾಮರಾಜ ನಗರದಲ್ಲಿ ಹೇಳಿದರು ವಿ. ಸೋಮಣ್ಣ.
ತುಮಕೂರು ಲೋಕಸಭಾ ಕ್ಷೇತ್ರ ಅಭ್ಯರ್ಥಿನಾ?
ಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದು ಮೊದಲೇ ಸಿಟ್ಟಿನಲ್ಲಿದ್ದ ವಿ.ಸೋಮಣ್ಣ ಅವರನ್ನು ಇನ್ನಷ್ಟು ಕೆರಳಿಸಿದೆ ಎನ್ನಲಾಗಿದೆ. ಈಗಾಗಲೇ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸಿರುವ ಸೋಮಣ್ಣ ಅವರು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಜತೆ ಖುದ್ದು ಮಾತನಾಡಿದ್ದಾರೆ. ಡಿಸೆಂಬರ್ 6ರಂದು ಪಕ್ಷ ಬಿಡುವ ಘೋಷಣೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.
ಅವರು ತುಮಕೂರು ಕೇಂದ್ರಿತವಾಗಿ ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದು, ಅವರು ಬಿಜೆಪಿಯಿಂದ ಹೊರಬಿದ್ದ ಬಳಿಕ ಕಾಂಗ್ರೆಸ್ ಸೇರಿ ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಆಸೆ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : BY Vijayendra : ವಿಜಯೇಂದ್ರ ಅಧ್ಯಕ್ಷರಾಗುತ್ತಿದ್ದಂತೆ ರೇಣುಕಾಚಾರ್ಯ ಶಸ್ತ್ರತ್ಯಾಗ! ಸಾಮರಸ್ಯ ಮಂತ್ರ ಪಠಣ
ತುಮಕೂರು ಭೇಟಿ ಮತ್ತು ಸಚಿವ ಕೆ.ಎನ್. ರಾಜಣ್ಣ ಅವರ ಜತೆ ಮಾತನಾಡಿದ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ಸಿದ್ದಗಂಗಾ ಮಠದ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಕೆ.ಎನ್. ರಾಜಣ್ಣ ಅವರಿಗೆ ಕರೆ ಮಾಡಿದ್ದೆ. ನಾನೇನು ಶಕ್ತಿ ಪ್ರದರ್ಶನಕ್ಕೆ ಮಠ ತಗೊಂಡು ಹೋಗಲ್ಲ. ಅಷ್ಟೊಂದು ಕಿರಾತಕ ನಾನಲ್ಲ ಎಂದು ಚಾಮರಾಜನಗರದಲ್ಲಿ ಹೇಳಿದರು.
ʻʻನಮ್ಮ ಕುಟುಂಬದಿಂದ ಗುರು ಭವನ ಕಟ್ಟಿದ್ದೇವೆ. ಆ ಕಾರ್ಯಕ್ರಮಕ್ಕೆ ಎಲ್ಲ ಪಕ್ಷದವರು ಬರುತ್ತಾರೆ. ಅದೇ ರೀತಿ ಆ ಜಿಲ್ಲೆಯ ಎರಡು ಸಚಿವರನ್ನ ಆಹ್ವಾನ ಮಾಡಿದ್ದೇನೆʼʼ ಎಂದು ಹೇಳಿದರು.