ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಬೆನ್ನಲ್ಲೇ ಜಿಲ್ಲೆಯ ತಿಪಟೂರು ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ (V Somanna) ಅವರು ಭಾನುವಾರ ಭೇಟಿ ನೀಡಿ ಅಜ್ಜಯ್ಯನ ಗದ್ದುಗೆ ದರ್ಶನ ಪಡೆದರು. ಚಾಮರಾಜನಗರ ಮತ್ತು ವರುಣ ಕ್ಷೇತ್ರದಲ್ಲಿ ಸೋಲಾದ ಹಿನ್ನೆಲೆಯಲ್ಲಿ ಅವರು ಮಠಕ್ಕೆ ಭೇಟಿ ನೀಡಿದ್ದರು.
ಮಠದಲ್ಲಿ ಶ್ರೀ ಕರಿವೃಷಭ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದು ಮಾತನಾಡಿದ ವಿ.ಸೋಮಣ್ಣ ಅವರು, ನಾನು ನೋಣವಿನಕೆರೆ ಮಠದ ಭಕ್ತ, ಅದಕ್ಕೆ ಬಂದು ಪೂಜೆ ಮಾಡಿದ್ದೇನೆ. ಡಿಕೆಶಿ ಕೂಡ ಒಬ್ಬ ಭಕ್ತ, ಅವರೂ ಬಂದು ಪೂಜೆ ಮಾಡಿದ್ದಾರೆ. ಅವರ ಭೇಟಿಗೂ ನನ್ನ ಭೇಟಿಗೂ ಯಾವುದೇ ಸಂಬಂಧ ಇಲ್ಲ. ನಾನು ಚುನಾವಣೆಯಲ್ಲಿ ಸೋತಿದ್ದೇನೆ. ಜನರ ತೀರ್ಪುನ್ನು ಸ್ವೀಕರಿಸಿದ್ದೇನೆ. ನನ್ನ ಸೋಲಿಗೆ ಬೇರೆ ಕಾರಣ ಇನ್ನೇನು ಇಲ್ಲ ಎಂದು ಹೇಳಿದರು.
ಕಳೆದ ಬಾರಿ ಕಾಂಗ್ರೆಸ್ ಸೋತಿತ್ತು. ಸಿಎಂ ಆಗಿದ್ದರೂ ಸಿದ್ದರಾಮಯ್ಯ ಸೋತಿದ್ದರು. ಇದೆಲ್ಲ ನಡೆಯುತ್ತಾ ಇರುತ್ತದೆ. ಯಡಿಯೂರಪ್ಪ ಬಿಜೆಪಿ ಪಕ್ಷದ ಪ್ರಶ್ನಾತೀತ ನಾಯಕರು. ನಾನಾಗಲಿ, ಯಡಿಯೂರಪ್ಪನವರಾಗಲಿ ಪಕ್ಷಕ್ಕೆ ಅನಿವಾರ್ಯ ಅಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ, ನಾವ್ಯಾರೂ ಪಕ್ಷಕ್ಕೆ ಅನಿವಾರ್ಯ ಅಲ್ಲ. ಈಗ ಇಂದಿರಾಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ ಇವರಾರೂ ಇಲ್ಲ. ಆದರೂ ಪಕ್ಷಗಳಿಲ್ಲವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ | DK Shivakumar: ನಾನೇ ಮುಂದಿನ ಸಿಎಂ ಅಂದರೇ ಡಿ.ಕೆ. ಶಿವಕುಮಾರ್?; ಸಿದ್ದರಾಮಯ್ಯ ಸಹಕಾರ ಕೋರಿದ ಡಿಕೆಶಿ
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದಕ್ಕೆ ಲಿಂಗಾಯತರು ಬಿಜೆಪಿಯನ್ನು ಸೋಲಿಸಿದರು ಎಂಬುವುದು ಸರಿಯಲ್ಲ. ಲಿಂಗಾಯತರನ್ನೇ ಯಾಕೆ ಟಾರ್ಗೆಟ್ ಮಾಡುತ್ತೀರಿ? ಲಿಂಗಾಯತರು ಸ್ವತಂತ್ರವಾಗಿ ಬದುಕುವುದು ಬೇಡವೇ? ಎಂದು ಮಾಧ್ಯಮದವರ ಪ್ರಶ್ನೆಗೆ ಸಿಡಿಮಿಡಿಗೊಂಡು ನಿರ್ಗಮಿಸಿದರು.