Site icon Vistara News

Karnataka Election: ವರಿಷ್ಠರ ಮಾತು ಕೇಳಿ ಚಿನ್ನದಂತಹ ಗೋವಿಂದರಾಜನಗರ ಬಿಟ್ಟೆ: ವಿ.ಸೋಮಣ್ಣ

V. Somanna reacts to the defeat in the elections

V. Somanna reacts to the defeat in the elections

ಬೆಂಗಳೂರು: ಮಾಜಿ ಸಚಿವ ವಿ. ಸೋಮಣ್ಣ ಅವರ ವಿಜಯನಗರದ ನಿವಾಸಕ್ಕೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಮಂಗಳವಾರ ಭೇಟಿ ನೀಡಿ ಮಾತುಕತೆ ನಡೆಸಿದರು. ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರಗಳಲ್ಲಿ (Karnataka Election) ಸೋತ ಹಿನ್ನೆಲೆಯಲ್ಲಿ ಸೋಮಣ್ಣ ಅವರಿಗೆ ಧೈರ್ಯ ಹೇಳಿರುವ ಬಸವರಾಜ ಬೊಮ್ಮಾಯಿ ಅವರು, ಸೋಲಿನ ಬಗ್ಗೆ ಪರಾಮರ್ಶೆ ಮಾಡಿದರು.

ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ವಿ. ಸೋಮಣ್ಣ, ಹೈಕಮಾಂಡ್ ಕೊಟ್ಟ ಕೆಲಸ ಮಾಡಿದ್ದೇನೆ. ಚಾಮರಾಜನಗರ ಹಾಗೂ ವರುಣದಲ್ಲಿ ಸೋಲಾಗಿದೆ, ಇದಕ್ಕೆ ಹಲವು ಕಾರಣ ಇವೆ. ವರಿಷ್ಠರು ಹೇಳಿದರಲ್ಲ ಎಂದು ಚಿನ್ನದಂತಹ ಗೋವಿಂದರಾಜನಗರ ಕ್ಷೇತ್ರವನ್ನು ಬಿಟ್ಟು ಹೋದೆ. ಯಾರೂ ತೆಗೆದುಕೊಳ್ಳದ ರಿಸ್ಕ್ ತೆಗೆದುಕೊಂಡಿದ್ದೇನೆ. ಒಂದೊಂದು ಸಲ ಒಳೇಟುಗಳು ಆದಾಗ ಈ ರೀತಿ ಆಗುತ್ತದೆ. ಕಾಲವೇ ಪ್ರತಿಯೊಂದಕ್ಕೂ ಉತ್ತರ ಕೊಡುತ್ತದೆ ಎಂದು ಹೇಳಿದರು.

ದಿನ ಬೆಳಗ್ಗೆ ಎದ್ದು ನಾಲ್ಕು ಜನಕ್ಕೆ ಸಹಾಯ ಮಾಡುತ್ತಿದ್ದೆ, ಈಗ ಹೊಸ ಕೆಲಸ ಹುಡುಕಬೇಕು ಎಂದ ಅವರು, ಯಡಿಯೂರಪ್ಪನವರು ಇದುವರೆಗೂ ಕರೆ ಮಾಡಿಲ್ಲ. ಚುನಾವಣೆ ಸಮಯದಲ್ಲಿ ಪ್ರತಿ ದಿನ ಕರೆ ಮಾಡುತ್ತಿದ್ದರು. ಚುನಾವಣೆ ಮುಗಿದ ಮೇಲೆ ಮಾಡಿಲ್ಲ. ನನಗೆ ಏನು ಧೈರ್ಯ ತುಂಬಬೇಕು? 45 ವರ್ಷಗಳಿಂದ ಇದೇ ಕೆಲಸ ಮಾಡಿದ್ದೇನೆ. ನನಗೆ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. 45 ವರ್ಷ ಇದೆ ಕೆಲಸ ಮಾಡಿದವ ನಾನು ಎಂದು ತಿಳಿಸಿದರು.

ಇದನ್ನೂ ಓದಿ | Karnataka Election: ಕಾಂಗ್ರೆಸ್‌ಗೆ ರಾಜೀನಾಮೆ ಕೊಡ್ತೇನೆ ಅಂತ ವದಂತಿ ಹಬ್ಬಿಸಿದವ್ರ ಮೇಲೆ ಕೇಸ್‌ ಹಾಕ್ತೀನಿ ಅಂದ ಡಿಕೆಶಿ

ಬೊಮ್ಮಾಯಿ ಅವರು ಪರಿಸ್ಥಿತಿಯನ್ನು ಅವಲೋಕನ ಮಾಡಿ ಬಂದಿದ್ದಾರೆ. ನಾನು ಯಾವುದೇ ಅವಕಾಶಗಳನ್ನು ನಿರೀಕ್ಷೆ ಮಾಡಿದವನಲ್ಲ. ಪಕ್ಷ ನನಗಿಂತ ದೊಡ್ಡದು, ಪಕ್ಷ ಹೇಳಿದ್ದನ್ನು ನನ್ನಂತಹವರು ಮಾಡದೇ ಇನ್ಯಾರು ಮಾಡಲಿಕ್ಕಾಗುತ್ತದೆ? ಟಾಸ್ಕ್ ಕೊಟ್ಟ ಮೇಲೆ ನಾನು ತಿರುಗಿಯೇ ನೋಡಲಿಲ್ಲ. ಕೊನೆಯ ಗಳಿಗೆಯಲ್ಲಿ ಏನೇನೋ ಆಗಿದೆ. ನಾನು ಸುಮ್ಮನೆ ಕುಳಿತುಕೊಳ್ಳುತ್ತೀನಾ? ನಾಲ್ಕು ಜನರಿಗೆ ಸಹಾಯ ಮಾಡಿಲ್ಲ ಅಂದರೆ ನಾನು ಮನುಷ್ಯನಾಗಿರಲ್ಲ. ಹಾಗಾಗಿ ಅದಕ್ಕೆ ಅಡ್ಜಸ್ಟ್ ಆಗಬೇಕಾಗುತ್ತದೆ, ಆಗುತ್ತೇನೆ ಎಂದು ಹೇಳಿದರು.

ಗೋವಿಂದರಾಜನಗರ ನನಗೆ ಕಣ್ಣು, ಕಿವಿ, ಹೃದಯ ಎಲ್ಲವೂ ಆಗಿತ್ತು. ಪಕ್ಷದ ತೀರ್ಮಾನವನ್ನು ತಲೆ ಮೇಲೆ ಹೊತ್ತು ಮಾಡಿದ್ದೇನೆ. ಬಾಕಿ ತೀರ್ಮಾನವನ್ನು ಪಕ್ಷದ ವರಿಷ್ಠರು ಮಾಡಬೇಕಾಗುತ್ತದೆ, ಮಾಡುವುದು ಬಿಡವುದು ಅವರಿಗೆ ಸೇರಿದ್ದು. ಮಾಡಿದರೆ ಪಕ್ಷ ಕೂಡ ಸ್ಪಂದಿಸಿತು ಎಂಬ ಸಂದೇಶವನ್ನೂ ಕೊಡುತ್ತದೆ ಎಂದು ತಿಳಿಸಿದರು.

ಸೋಮಣ್ಣ ಮತ್ತೆ ಪುಟಿದೇಳುತ್ತಾರೆ ಎಂದ ಬಸವರಾಜ ಬೊಮ್ಮಾಯಿ

ವಿ. ಸೋಮಣ್ಣ ಭೇಟಿ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸೋಮಣ್ಣ ನಮ್ಮ ಹಿರಿಯ ನಾಯಕರು, 40 ವರ್ಷ ಜನಸೇವೆ ಮಾಡಿದವರು. ಬೆಂಗಳೂರಿನ ಅಭಿವೃದ್ಧಿಗೆ ಅವರು ಅನೇಕ ಕೊಡುಗೆ ಕೊಟ್ಟಿದ್ದು, ಗೋವಿಂದರಾಜನಗರವನ್ನು ಮಾದರಿ ಕ್ಷೇತ್ರ ಮಾಡಿದ್ದಾರೆ. ಯಾವಾಗ ಹಿನ್ನಡೆಯಾದರೂ ಅವರು ಮತ್ತೆ ಪುಟಿದೇಳುತ್ತಾರೆ. ಬರುವ ದಿನಗಳಲ್ಲಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿದೆ. ನಾವು ಅವರ ಜತೆ ನಿಂತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ | Karnataka Election 2023 : ರಾಜಕೀಯಕ್ಕೆ ಕುಮಾರಸ್ವಾಮಿ ಗುಡ್‌ಬೈ? ಏನಾಗುತ್ತಿದೆ ಜೆಡಿಎಸ್‌ನಲ್ಲಿ?

ಸೋಲು, ಗೆಲುವು ರಾಜಕಾರಣದಲ್ಲಿ ಇದ್ದಿದ್ದೆ. ಆದರೆ ಅದನ್ನು ಮೀರಿ ಮತ್ತೆ ಬರಬೇಕು. ಸೋಮಣ್ಣ ಮತ್ತು ಪಕ್ಷ ಎರಡೂ ಕೂಡ ಆ ಕೆಲಸ ಮಾಡಲಿವೆ ಎಂದರು. ಇದೇ ವೇಳೆ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ನಂತರ ಮಾತನಾಡುವೆ. ನಾಳೆ ಅಥವಾ ನಾಡಿದ್ದು ಶಾಸಕಾಂಗ ಸಭೆ ನಡೆಯಲಿದೆ ಎಂದು ತಿಳಿಸಿದರು.

Exit mobile version