Site icon Vistara News

Karnataka Election 2023: ಸಿಎಂ ಬೊಮ್ಮಾಯಿ, ಜೋಶಿ ಸಂಧಾನ; ಬಿಜೆಪಿಯಲ್ಲೇ ಉಳಿಯಲಿದ್ದಾರಾ ವಿ. ಸೋಮಣ್ಣ?

Karnataka Election 2023 updates CM Bommai Joshi to hold meeting with V Somanna

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಬೆನ್ನಲ್ಲೇ ಪಕ್ಷಾಂತರ ಪರ್ವ ಹೆಚ್ಚಾಗಿದೆ. ವಸತಿ ಸಚಿವ, ಹಿರಿಯ ರಾಜಕಾರಣಿ ವಿ. ಸೋಮಣ್ಣ ಬಿಜೆಪಿ ತೊರೆಯಲಿದ್ದಾರೆ ಎಂಬ ವದಂತಿಗೆ ತೆರೆ ಎಳೆಯಲು ಪಕ್ಷದ ನಾಯಕರು ಬಹಳಷ್ಟು ಕಸರತ್ತು ನಡೆಸುತ್ತಿದ್ದಾರೆ. ಭಾನುವಾರ (ಮಾ. 12) ಧಾರವಾಡದಲ್ಲಿ ನಡೆದ ಐಐಐಟಿ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಸೋಮಣ್ಣ ವೇದಿಕೆಯನ್ನು ಹಂಚಿಕೊಂಡಿದ್ದರು. ಅಲ್ಲದೆ, ಭಾನುವಾರ ರಾತ್ರಿಯೇ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಒಂದು ಗಂಟೆ ಕಾಲ ಸೋಮಣ್ಣ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚರ್ಚೆ ನಡೆಸಿದ್ದಾರೆ.

ಸೋಮಣ್ಣ ಕಾಂಗ್ರೆಸ್‌ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆಯಲು ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಜೋಶಿ ಮುಂದಾಗಿದ್ದು, ವಿ. ಸೋಮಣ್ಣ ಜತೆಗೆ ಸಂಧಾನ ಸಭೆ ನಡೆಸಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಉಪಾಹಾರ ಸೇವನೆ ಮಾಡುತ್ತಲೇ ಮಾತುಕತೆ ನಡೆಸಲಾಗಿದೆ.

ಸುಮಾರು ಒಂದು ಗಂಟೆ ಕಾಲ ವಿ. ಸೋಮಣ್ಣ ಜತೆ ಚರ್ಚೆ ನಡೆಸಲಾಗಿದೆ. ಈ ಮೂಲಕ ಸೋಮಣ್ಣ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳುವಂತೆ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್, ಸಚಿವ ಭೈರತಿ ಬಸವರಾಜ ಸೇರಿದಂತೆ ಹಲವರು ಈ ವೇಳೆ ಜತೆಗಿದ್ದಾರೆ.

ಇದನ್ನೂ ಓದಿ: Oscars 2023: ಬೆಸ್ಟ್‌ ಫಿಲಂ Everything Everywhere All At Onceಗೆ 11 ಪ್ರಶಸ್ತಿ, ಆಸ್ಕರ್‌ನ ಸಮಗ್ರ ಪಟ್ಟಿ ಇಲ್ಲಿದೆ

ಭಾನುವಾರ ಧಾರವಾಡದಲ್ಲಿ ನಡೆದ ಐಐಐಟಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ವಿ. ಸೋಮಣ್ಣ ಬಂದಿದ್ದರು. ಅಲ್ಲಿಂದ ನೇರವಾಗಿ ಹುಬ್ಬಳ್ಳಿಗೆ ಕರೆದುಕೊಂಡು ಬಂದು ಸಂಧಾನ ಸಭೆ ನಡೆಸಲಾಗಿದೆ.

ಸೋಮಣ್ಣ ನಮ್ಮ ಜತೆಗೇ ಇರುತ್ತಾರೆ- ಸಿಎಂ

ವಿ.ಸೋಮಣ್ಣ ಮುಂದೆಯೂ ನಮ್ಮ ಜತೆಗೇ ಇರುತ್ತಾರೆ. ಭಾನುವಾರ ಹುಬ್ಬಳ್ಳಿಯಲ್ಲಿ ಯಾವುದೇ ರೀತಿಯ ಮಾತುಕತೆ ಮಾಡಿಲ್ಲ. ಸೋಮಣ್ಣ ನಾನು ಹಳೆಯ ಸ್ನೇಹಿತರು.ಅವರ, ನಮ್ಮ ಭೇಟಿ ಕೇವಲ ಔಪಚಾರಿಕವಷ್ಟೇ. ಸೋಮಣ್ಣ ನಮ್ಮ ಜತೆಗಿದ್ದಾರೆ, ನಮ್ಮ ಜೊತೆಗೇ ಇರುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದರು.

Exit mobile version